Home ಸುದ್ದಿ ರಾಷ್ಟ್ರೀಯ ಬಾಂಗ್ಲಾದಲ್ಲಿ ಹಿಂದೂ ಅರ್ಚಕನ ಅಪಹರಿಸಿ ಹಲ್ಲೆ

ಬಾಂಗ್ಲಾದಲ್ಲಿ ಹಿಂದೂ ಅರ್ಚಕನ ಅಪಹರಿಸಿ ಹಲ್ಲೆ

ಢಾಕಾ/ನವದೆಹಲಿ.ಜು1: ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಸರಣಿ ಮುಂದುವರಿದಿದ್ದು, ಹಿಂದೂ ಧರ್ಮದ ಕಾನೂನು ವಿದ್ಯಾರ್ಥಿ ಹಾಗೂ ದೇವಾಲಯದ ಸಹಾಯಕ ಅರ್ಚಕರಾಗಿರುವ ಯುವಕನೊಬ್ಬನನ್ನು ದುಷ್ಕರ್ಮಿಗಳು ಅಪಹರಿಸಿ, ಬೆತ್ತಲೆಗೊಳಿಸಿ ಭೀಕರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ರಾಜಧಾನಿ ಢಾಕಾದಲ್ಲಿ ನಡೆದಿದೆ.

ಢಾಕಾದ ಜಗನ್ನಾಥ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿ ಹಾಗೂ ಸ್ಥಳೀಯ ದೇವಾಲಯವೊಂದರಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಸುಭಾಷ್ ದೇವೂರಿ (25) ಹಲ್ಲೆಗೊಳಗಾದ ದುರ್ದೈವಿ. ಸದ್ಯ ತೀವ್ರ ಗಾಯಗೊಂಡಿರುವ ಯುವಕನನ್ನು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಸೋಮವಾರ ತಡರಾತ್ರಿ 11:30ರ ಸುಮಾರಿಗೆ ಸುಭಾಷ್ ತಮ್ಮ ಬಾಡಿಗೆ ಕೋಣೆಯಿಂದ ಹೊರಗೆ ಹೋದಾಗ ಅಪರಿಚಿತ ಸಶಸ್ತ್ರ ದುಷ್ಕರ್ಮಿಗಳ ಗುಂಪೆÇಂದು ಅವರನ್ನು ಅಪಹರಿಸಿದೆ. ತದನಂತರ ಸುಭಾಷ್ ಅವರನ್ನು ರಹಸ್ಯ ಸ್ಥಳದಲ್ಲಿ ಕೂಡಿಹಾಕಿ, ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಅವರ ಬೆತ್ತಲೆ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣಕ್ಕಾಗಿ ಬ್ಲ್ಯಾಕ್‍ಮೇಲ್ ಮಾಡಿದ್ದಾರೆ ಎಂದು ಅವರ ಸ್ನೇಹಿತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಪಹರಣಕಾರರು ಸುಭಾಷ್ ಅವರ ಫೆÇೀನ್‍ನಿಂದಲೇ ಅವರ ಸ್ನೇಹಿತರು ಹಾಗೂ ಕುಟುಂಬದವರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಸುಭಾಷ್ ಅವರ ಸಹೋದರಿ ಜಯಾ ಅವರಿಗೆ ಕರೆ ಮಾಡಿದ ದುಷ್ಕರ್ಮಿಗಳು 30,000 ಬಾಂಗ್ಲಾದೇಶಿ ಟಾಕಾ (ಅಲ್ಲಿನ ಕರೆನ್ಸಿ) ನೀಡುವಂತೆ ಹೆದರಿಸಿದ್ದಾರೆ. ಕೊನೆಗೆ ಕುಟುಂಬಸ್ಥರು ಅಸಹಾಯಕರಾಗಿ ದುಷ್ಕರ್ಮಿಗಳು ನೀಡಿದ ಮೊಬೈಲ್ ಸಂಖ್ಯೆಗೆ 26,000 ಟಾಕಾ ವರ್ಗಾವಣೆ ಮಾಡಿದ್ದಾರೆ. ಹಣ ಕೈಸೇರುತ್ತಿದ್ದಂತೆ ದುಷ್ಕರ್ಮಿಗಳು ಸುಭಾಷ್ ಅವರ ಮೊಬೈಲ್ ಮತ್ತು ಪರ್ಸ್ ಕಸಿದುಕೊಂಡು, ಅವರನ್ನು ಹಳೇ ಢಾಕಾದ ನರಿಂದಾ ಪ್ರದೇಶದ ರಸ್ತೆಯ ಬದಿಗೆ ಎಸೆದು ಪರಾರಿಯಾಗಿದ್ದಾರೆ. ರಕ್ತಸಿಕ್ತ ಹಾಗೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುಭಾಷ್ ಅವರನ್ನು ಅವರ ಸ್ನೇಹಿತರು ಪತ್ತೆಹಚ್ಚಿ ಆಸ್ಪತ್ರೆಗೆ ಸೇರಿಸಿದ್ದಾರೆ.


“ನಾವು ಘಟನೆಯ ಸಂಪೂರ್ಣ ವಿವರಗಳನ್ನು ಕಲೆಹಾಕುತ್ತಿದ್ದೇವೆ. ಇದು ಕೇವಲ ಹಣಕ್ಕಾಗಿ ನಡೆದ ದರೋಡೆ ಅಥವಾ ಸುಲಿಗೆ ಪ್ರಕರಣವೇ ಅಥವಾ ಇದರ ಹಿಂದೆ ಧಾರ್ಮಿಕ (ದ್ವೇಷ) ಇದೆಯೇ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ.”ಎಂದು ವಕ್ತಾರರು, ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಐಕ್ಯತಾ ಪರಿಷತ್ ವಕ್ತಾರ ಕಾಜಲ್ ದೇವನಾಥ್ ತಿಳಿಸಿದ್ದಾರೆ.

ಪ್ರಸ್ತುತ ವಾರಿ ಪೆÇಲೀಸ್ ಠಾಣೆಯ ಅಧಿಕಾರಿಗಳು ಘಟನೆಯ ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ಬಾಂಗ್ಲಾದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂ ಧಾರ್ಮಿಕ ಮುಖಂಡರು ಹಾಗೂ ವಿದ್ಯಾರ್ಥಿಗಳ ಮೇಲಿನ ದಾಳಿಗಳು ಹೆಚ್ಚಾಗುತ್ತಿರುವುದು ಅಲ್ಲಿನ ಅಲ್ಪಸಂಖ್ಯಾತರಲ್ಲಿ ತೀವ್ರ ಆತಂಕ ಮೂಡಿಸಿದೆ.