Home ಸುದ್ದಿ ರಾಷ್ಟ್ರೀಯ ಪಾಕ್ ಮೇಲೆ ಅಫ್ಘಾನಿಸ್ತಾನ ವೈಮಾನಿಕ ದಾಳಿ

ಪಾಕ್ ಮೇಲೆ ಅಫ್ಘಾನಿಸ್ತಾನ ವೈಮಾನಿಕ ದಾಳಿ

ಕಾಬೂಲ್/ಇಸ್ಲಾಮಾಬಾದ್.ಜು1: ಗಡಿಯಲ್ಲಿ ಪಾಕಿಸ್ತಾನ ನಡೆಸಿದ ದಾಳಿಗೆ ಪ್ರತಿಯಾಗಿ ಅಫ್ಘಾನಿಸ್ತಾನವು ಪಾಕ್ ಗಡಿಯೊಳಗೆ ನುಗ್ಗಿ ಐಸಿಸ್ ಉಗ್ರರ ಅಡಗುದಾಣಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ.

ಎರಡು ದಿನಗಳ ಹಿಂದಷ್ಟೇ ಪಾಕಿಸ್ತಾನ ನಡೆಸಿದ್ದ ಸೇನಾ ಕಾರ್ಯಾಚರಣೆಯಲ್ಲಿ ಅಫ್ಘಾನಿಸ್ತಾನದ 36 ಸಾಮಾನ್ಯ ನಾಗರಿಕರು ಬಲಿಯಾಗಿದ್ದರು. ಇದಕ್ಕೆ ಪ್ರತಿಕಾರವಾಗಿ ಅಫ್ಘಾನ್ ವಾಯುಪಡೆ ಈ ಆಪರೇಷನ್ ನಡೆಸಿದೆ ಎಂದು ಕಾಬೂಲ್ ಮೂಲಗಳು ತಿಳಿಸಿವೆ. ಆದರೆ, ಈ ದಾಳಿಯ ಕುರಿತು ಪಾಕಿಸ್ತಾನ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಪ್ರಕಾರ, ಮಂಗಳವಾರ ತಡರಾತ್ರಿ ಅಫ್ಘಾನ್ ವಾಯುಪಡೆಯ ಯುದ್ಧ ವಿಮಾನಗಳು ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಪಶೀನ್ ಜಿಲ್ಲೆಯ ಸರನಾನ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿವೆ. ಅಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ‘ದಾಯೆಶ್’ (ಐಸಿಸ್) ಉಗ್ರರ ಜಂಟಿ ನಿಯಂತ್ರಣ ಕೊಠಡಿಯನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಲಾಗಿದೆ. ಅಫ್ಘಾನಿಸ್ತಾನದ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಈ ಕೇಂದ್ರವನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ. ಇದರೊಂದಿಗೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಉಗ್ರರ ನೆಲೆಗಳ ಮೇಲೂ ದಾಳಿ ಮಾಡಲಾಗಿದೆ ಎಂದು ಅಫ್ಘಾನ್ ಪ್ರಕಟಣೆ ತಿಳಿಸಿದೆ.

ಕಳೆದ ಭಾನುವಾರ ಪಾಕಿಸ್ತಾನಿ ಸೇನೆಯು ಗಡಿ ಭಾಗದಲ್ಲಿ ನಡೆಸಿದ ದಾಳಿಯಲ್ಲಿ 36 ಅಫ್ಘಾನ್ ನಾಗರಿಕರು ಮೃತಪಟ್ಟು, 160ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪಾಕಿಸ್ತಾನದ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಅವರು, “ನಾವು ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದು, 29 ಉಗ್ರರನ್ನು ಹತ್ಯೆ ಮಾಡಿದ್ದೇವೆ” ಎಂದು ಸಮರ್ಥಿಸಿಕೊಂಡಿದ್ದರು. ಆದರೆ, ಅಫ್ಘಾನಿಸ್ತಾನ ಇದನ್ನು ತೀವ್ರವಾಗಿ ಖಂಡಿಸಿದೆ.

ಪಾಕ್ ಪಡೆಗಳು ಮೊದಲು ಪಕ್ತಿಯಾ ಪ್ರಾಂತ್ಯದ ಚಮ್ಕಾನಿ ಜಿಲ್ಲೆಯ ವಸತಿ ಗೃಹವೊಂದರ ಮೇಲೆ ದಾಳಿ ನಡೆಸಿದಾಗ ವೃದ್ಧ ಮತ್ತು ಮಗು ಮೃತಪಟ್ಟಿದ್ದರು. ಗಾಯಾಳುಗಳ ರಕ್ಷಣೆಗೆ ಸ್ಥಳೀಯ ಗ್ರಾಮಸ್ಥರು ಧಾವಿಸಿದಾಗ, ಅದೇ ಜಾಗದ ಮೇಲೆ ಎರಡನೇ ಬಾರಿ ದಾಳಿ ನಡೆಸಿ 28 ಗ್ರಾಮಸ್ಥರನ್ನು ಪಾಕಿಸ್ತಾನಿ ಪಡೆಗಳು ಬಲಿ ಪಡೆದಿವೆ ಎಂದು ಅಫ್ಘಾನ್ ಉಪ ವಕ್ತಾರ ಹಮ್ದುಲ್ಲಾ ಫಿತ್ರಾತ್ ಆರೋಪಿಸಿದ್ದಾರೆ.

ಈ ಸೇನಾ ಸಂಘರ್ಷದ ಬೆನ್ನಲ್ಲೇ ರಾಜತಾಂತ್ರಿಕ ವಲಯದಲ್ಲೂ ಕಿಡಿ ಹೊತ್ತಿಕೊಂಡಿದೆ. ಕಾಬೂಲ್‍ನಲ್ಲಿರುವ ಪಾಕಿಸ್ತಾನದ ರಾಯಭಾರಿಯನ್ನು ಅಫ್ಘಾನ್ ವಿದೇಶಾಂಗ ಸಚಿವಾಲಯವು ಸೋಮವಾರ ಕರೆಸಿಕೊಟ್ಟು ತೀವ್ರ ಪ್ರತಿಭಟನೆ ದಾಖಲಿಸಿದೆ. ಕುನಾರ್, ಪಕ್ತಿಯಾ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ಅಫ್ಘಾನ್ ವೈಮಾನಿಕ ಗಡಿಯನ್ನು ಉಲ್ಲಂಘಿಸಿ, ನಾಗರಿಕರ ಮನೆಗಳ ಮೇಲೆ ಬಾಂಬ್ ಹಾಕಿರುವುದನ್ನು ಅಫ್ಘಾನಿಸ್ತಾನ ತೀವ್ರವಾಗಿ ಆಕ್ಷೇಪಿಸಿದೆ.

ಕಳೆದ ಫೆಬ್ರವರಿಯಿಂದಲೂ ಉಭಯ ದೇಶಗಳ ನಡುವೆ ಸರಣಿ ಪ್ರತಿಕಾರ ದಾಳಿಗಳು ನಡೆಯುತ್ತಲೇ ಇವೆ. ಮೂರು ವಾರಗಳ ಹಿಂದಷ್ಟೇ ಪಾಕಿಸ್ತಾನವು ಅಫ್ಘಾನಿಸ್ತಾನದ ಒಳಗೆ ವೈಮಾನಿಕ ದಾಳಿ ನಡೆಸಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮಾತುಕತೆಗಳು ನಡೆದಿದ್ದರೂ, ಗಡಿಯಲ್ಲಿ ಕದನ ವಿರಾಮ ಜಾರಿಗೆ ತರಲು ಉಭಯ ದೇಶಗಳು ವಿಫಲವಾಗಿವೆ. ಸದ್ಯದ ಪರಿಸ್ಥಿತಿ ಇಡೀ ಪ್ರಾಂತ್ಯವನ್ನು ಯುದ್ಧದ ಮುಖಕ್ಕೆ ತಳ್ಳಿದೆ.