Home ಜಿಲ್ಲೆ ಕಲಬುರಗಿ ಸಾಲದ ಸಂಕಷ್ಟಕ್ಕೆ ಬಲಿಯಾದ ಯುವ ರೈತ

ಸಾಲದ ಸಂಕಷ್ಟಕ್ಕೆ ಬಲಿಯಾದ ಯುವ ರೈತ

ಆಳಂದ,ಜು.1-ಸಾಲದ ಹೊರೆ ಹಾಗೂ ಸಾಲದಾತರ ಒತ್ತಡ ತಾಳಲಾರದೆ 19 ವರ್ಷದ ಯುವ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆಳಂದ ತಾಲೂಕಿನ ಬೆಣ್ಣೆಶಿರೂರು ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವ ರೈತನನ್ನು ಬೆಣ್ಣೆಶಿರೂರು ಗ್ರಾಮದ ಯಲ್ಲಾಲಿಂಗ ಬಂಡಗಾರ (19) ಎಂದು ಗುರುತಿಸಲಾಗಿದೆ.
ಕುಟುಂಬದವರ ಮಾಹಿತಿ ಪ್ರಕಾರ, ಯಲ್ಲಾಲಿಂಗ ಕೃಷಿ ಚಟುವಟಿಕೆಗಳಿಗಾಗಿ ಸಮೀಪದ ಮಾಡ್ಯಾಳ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನಿಂದ ಸುಮಾರು 1.35 ಲಕ್ಷ ರೂಪಾಯಿ ಕೃಷಿ ಸಾಲ ಪಡೆದಿದ್ದ. ಇದಲ್ಲದೆ, ಕೃಷಿ ವೆಚ್ಚ ಹಾಗೂ ಇತರೆ ಅಗತ್ಯಗಳಿಗಾಗಿ ಖಾಸಗಿಯಾಗಿ 5 ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿದ್ದ ಎನ್ನಲಾಗಿದೆ.
ಸಾಲ ಮರುಪಾವತಿಗಾಗಿ ಸಾಲದಾತರು ನಿರಂತರವಾಗಿ ಒತ್ತಡ ಹೇರಿದ್ದರಿಂದ ಯಲ್ಲಾಲಿಂಗ ಮಾನಸಿಕವಾಗಿ ತೀವ್ರ ನೊಂದಿದ್ದ. ಇದೇ ಕಾರಣದಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ನಿಂಬರ್ಗಾ ಪೆÇಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದೇ ವೇಳೆ, ಯುವ ರೈತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಸಾನ್ ಸಭಾ ಜಿಲ್ಲಾ ಅಧ್ಯಕ್ಷ ಭೀಮಶಂಕರ್ ಮಾಡ್ಯಾಳ್ ರಾಜ್ಯ ಸರ್ಕಾರವನ್ನು ತಕ್ಷಣ ಮಧ್ಯಪ್ರವೇಶಿಸಿ ಮೃತ ರೈತನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಹಾಗೂ ಕುಟುಂಬದ ಸದಸ್ಯರಿಗೆ ಅಗತ್ಯ ನೆರವು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.