Home Lead News ಸಿಎಲ್‌ಪಿ ಸಭೆ ನಾಳೆ

ಸಿಎಲ್‌ಪಿ ಸಭೆ ನಾಳೆ

ಬೆಂಗಳೂರು, ಮೇ ೨೯- ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಾಳೆ ನಿಗದಿಯಾಗಿದ್ದು, ಈ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ರವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ.


ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ನಾಳೆ ಆಯ್ಕೆಯಾಗಲಿರುವ ಡಿ.ಕೆ. ಶಿವಕುಮಾರ್ ಸೋಮವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರು ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲರು ಇಂದು ಬೆಳಿಗ್ಗೆ ಅಂಗೀಕರಿಸಿದ ಬೆನ್ನಲ್ಲೆ ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ನಿಗದಿ ಮಾಡಲಾಗಿದೆ,.


ನಾಳೆ ಸಂಜೆ ೪ ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿ ಡಿ.ಕೆ, ಶಿವಕುಮಾರ್ ರವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆಗಳು ನಡೆಯಲಿವೆ.


ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಎಲ್ಲಾ ಶಾಸಕರು ಬೆಂಗಳೂರಿನಲ್ಲೇ ಇರುವಂತೆ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಸೂಚನೆಯನ್ನು ಶಾಸಕರುಗಳಿಗೆ ನೀಡಲಾಗಿದೆ.


ದೆಹಲಿಯಲ್ಲಿರುವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರವರು ಇಂದು ರಾತ್ರಿ ಇಲ್ಲವೇ ನಾಳೆ ಬೆಳಿಗ್ಗೆ ಬೆಂಗಳೂರಿಗೆ ಬರಲಿದ್ದಾರೆ.


ನಾಳಿನ ಶಾಸಕಾಂಗ ಪಕ್ಷದ ಸಭೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಸುರ್ಜೇವಾಲರವರು ಪಕ್ಷದ ವೀಕ್ಷಕರಾಗಿ ಭಾಗಿಯಾಗಲಿದ್ದು, ಅವರ ಸಮ್ಮುಖದಲ್ಲೇ ಡಿ.ಕೆ. ಶಿವಕುಮಾರ್ ರವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಪ್ರಕ್ರಿಯೆಗಳು ನಡೆಯುತ್ತವೆ.


ನಾಳಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್ ಸೂಚನೆಯಂತೆ ಡಿ.ಕೆ. ಶಿವಕುಮಾರ್ ರವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಒಂದು ಸಾಲಿನ ಪ್ರಸ್ತಾವವನ್ನು ಪಕ್ಷದ ವೀಕ್ಷಕರು ಮಂಡಿಸಿ, ಅದಕ್ಕೆ ಎಲ್ಲ ಶಾಸಕರಿಂದ ಅನುಮೋದನೆ ಪಡೆಯಲಿದ್ದಾರೆ.
ರಾಜ್ಯಪಾಲರ ಭೇಟಿ: ಮನವಿ


ನಾಳಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕರಾಗಿ ಆಯ್ಕೆಯಾಗುವ ಡಿ.ಕೆ. ಶಿವಕುಮಾರ್ ರವರು ಸಭೆಯ ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರನ್ನು ಭೇಟಿ ಮಾಡಿ ತಾವು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಬಗ್ಗೆ ಹಾಗೂ ಕಾಂಗ್ರೆಸ್‌ನ ಎಲ್ಲಾ ಶಾಸಕರ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ನೀಡಿ ನೂತನ ಸಚಿವ ಸಂಪುಟ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡುವರು.


ಹಾಗೆಯೇ ನೂತನ ಮುಖ್ಯಮಂತ್ರಿ ಹಾಗೂ ಸಚಿವರುಗಳ ಪ್ರಮಾಣ ವಚನಕ್ಕೆ ಸಮಯ ನೀಡುವಂತೆ ರಾಜ್ಯಪಾಲರನ್ನು ಕೋರುವರು.

ಸೋಮವಾರ ಪ್ರಮಾಣ


ನಾಳೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕರಾಗಿ ಆಯ್ಕೆಯಾಗಲಿರುವ ಡಿ.ಕೆ. ಶಿವಕುಮಾರ್ ರವರು ಸೋಮವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.


ವಿಧಾನಸೌಧದ ಪೂರ್ವದ್ವಾರದ ಭವ್ಯ ಮೆಟ್ಟಿಲುಗಳ ಮೇಲೆಯೇ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.


ಮುಖ್ಯಮಂತ್ರಿ ಪ್ರಮಾಣ ವಚನಕ್ಕೆ ಶುಭ ಘಳಿಗೆಯನ್ನು ನಿಗದಿ ಮಾಡುವ ಸಂಬಂಧ ಡಿ.ಕೆ.ಶಿವಕುಮಾರ್ ಈಗಾಗಲೇ ತಮ್ಮ ಆಪ್ತ ಜ್ಯೋತಿಷಿಗಳನ್ನು ಸಂಪರ್ಕಿಸಿದ್ದು, ಸೋಮವಾರ ಗೋಧೂಳಿ ಲಗ್ನದಲ್ಲಿ ಪ್ರಮಾಣ ವಚನ ಸ್ವೀಕರಿಸುವಂತೆ ಜ್ಯೋತಿಷಿಗಳು ಸೂಚಿಸಿದ್ದು, ಅದರಂತೆ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.