
ನವದೆಹಲಿ.ಮೇ೨೮:ಸೂಪರ್ ಮಾರ್ಕೆಟ್‌ಗಳಲ್ಲಿ ನಮಗೆ ಬೇಕಾದ ವಸ್ತುಗಳನ್ನು ಆಯ್ದುಕೊಳ್ಳುವಂತೆ, ಇನ್ನು ಮುಂದೆ ದೇಶದ ಪೆಟ್ರೋಲ್ ಬಂಕ್‌ಗಳಲ್ಲೂ ಗ್ರಾಹಕರು ತಮ್ಮ ಕಾರು ಹಾಗೂ ದ್ವಿಚಕ್ರ ವಾಹನಗಳ ಇಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ತಾವೇ ಆಯ್ಕೆ ಮಾಡಿಕೊಳ್ಳುವ ದಿನಗಳು ಹತ್ತಿರವಾಗಲಿವೆ.
ದೇಶದಲ್ಲಿ ಸದ್ಯ ಚಾಲ್ತಿಯಲ್ಲಿರುವ ಶೇ. ೨೦ ರಷ್ಟು (ಇ೨೦) ಎಥೆನಾಲ್ ಮಿಶ್ರಿತ ಪೆಟ್ರೋಲ್ ಜೊತೆಗೆ, ಹೊಸದಾಗಿ ಇ೨೨, ಇ೨೫ ಮತ್ತು ಇ೩೦ (ಅಂದರೆ ಕ್ರಮವಾಗಿ ಶೇ. ೨೨, ಶೇ. ೨೫ ಮತ್ತು ಶೇ. ೩೦ ರಷ್ಟು ಎಥೆನಾಲ್ ಮಿಶ್ರಣ) ಇಂಧನ ರೂಪಾಂತರಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಸಾರ್ವಜನಿಕ ಮತ್ತು ಖಾಸಗಿ ವಲಯದ ತೈಲ ಕಂಪನಿಗಳಿಗೆ ಅಗತ್ಯ ಮೂಲಸೌಕರ್ಯ ಸಿದ್ಧಪಡಿಸಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರತ್ಯೇಕ ನಳಿಕೆ, ದರ ವ್ಯತ್ಯಾಸ
ಗ್ರಾಹಕರು ಗೊಂದಲಕ್ಕೊಳಗಾಗದಂತೆ ಪ್ರತಿಯೊಂದು ಪೆಟ್ರೋಲ್ ಬಂಕ್‌ನ ಡಿಸ್ಪೆನ್ಸಿಂಗ್ ಪಂಪ್‌ಗಳ ಮೇಲೆ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕಾಗುತ್ತದೆ. ಸದ್ಯ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್, ಪ್ರೀಮಿಯಂ ಪೆಟ್ರೋಲ್ ಹಾಗೂ ಸಾಮಾನ್ಯ ಪೆಟ್ರೋಲ್‌ಗೆ ಪ್ರತ್ಯೇಕ ನಳಿಕೆಗಳು ಇರುವಂತೆ, ಈ ಹೊಸ ಇಂಧನಗಳಿಗೂ ಪ್ರತ್ಯೇಕ ವ್ಯವಸ್ಥೆ ಇರಲಿದೆ. ಮುಖ್ಯವಾಗಿ, ಎಥೆನಾಲ್ ಮಿಶ್ರಣದ ಪ್ರಮಾಣಕ್ಕೆ ಅನುಗುಣವಾಗಿ ಇಂಧನದ ದರಗಳಲ್ಲೂ ವ್ಯತ್ಯಾಸವಿರಲಿದೆ ಎನ್ನಲಾಗಿದೆ.
ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ೨೦೧೪ರ ನವೆಂಬರ್‌ನಿಂದ ೨೦೨೬ರ ಫೆಬ್ರವರಿ ಅವಧಿಯಲ್ಲಿ ಎಥೆನಾಲ್ ಮಿಶ್ರಣದ ಬಳಕೆಯಿಂದಾಗಿ ಭಾರತಕ್ಕೆ ಬರೋಬ್ಬರಿ ೧.೭ ಲಕ್ಷ ಕೋಟಿ ರೂಪಾಯಿ ವಿದೇಶಿ ವಿನಿಮಯ ಉಳಿತಾಯವಾಗಿದೆ. ಅಷ್ಟೇ ಅಲ್ಲದೆ, ೮೭ ಮಿಲಿಯನ್ ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲಾಗಿದ್ದು, ಇದು ಸುಮಾರು ೩೫ ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ.
ಎಥೆನಾಲ್ ಅನ್ನು ಪ್ರಮುಖವಾಗಿ ಕಬ್ಬು ಮತ್ತು ಧಾನ್ಯಗಳಿಂದ ಉಪ-ಉತ್ಪನ್ನವಾಗಿ ತಯಾರಿಸಲಾಗುತ್ತದೆ. ಇದನ್ನು ಪೆಟ್ರೋಲ್ ಜೊತೆ ಮಿಶ್ರಣ ಮಾಡುವುದರಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದಲ್ಲದೆ, ಭಾರತವು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆ ಗಣನೀಯವಾಗಿ ತಗ್ಗುತ್ತದೆ.
ಹೆಚ್ಚುವರಿ ದಾಸ್ತಾನು: ದೇಶದಲ್ಲಿ ಸದ್ಯ ೨೦ ಬಿಲಿಯನ್ ಲೀಟರ್ ಎಥೆನಾಲ್ ಉತ್ಪಾದನಾ ಸಾಮರ್ಥ್ಯವಿದ್ದು, ಪ್ರಸ್ತುತ ಬೇಡಿಕೆ ಕೇವಲ ೧೧ ಬಿಲಿಯನ್ ಲೀಟರ್‌ಗಳಷ್ಟಿದೆ. ಹೀಗಾಗಿ ಹೆಚ್ಚುವರಿ ಎಥೆನಾಲ್ ಅನ್ನು ಬಳಸಿಕೊಳ್ಳಲು ಈ ಯೋಜನೆ ಸಹಕಾರಿಯಾಗಲಿದೆ. ಎಥೆನಾಲ್ ಪ್ರಮಾಣ ಹೆಚ್ಚಾದಂತೆ ಪೆಟ್ರೋಲ್ ದರ ಸಾಮಾನ್ಯ ಪೆಟ್ರೋಲ್‌ಗಿಂತ ಕೊಂಚ ಕಡಿಮೆ ಇರುವ ಸಾಧ್ಯತೆ ಇದೆ.
ಶೇ. ೨೦ ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಿತ ಇಂಧನ ಬಳಕೆಗೆ ವಾಹನಗಳ ಇಂಜಿನ್ ಸೂಕ್ತವಾಗಿದೆಯೇ ಎಂಬುದನ್ನು ಗ್ರಾಹಕರು ಗಮನಿಸಬೇಕಾಗುತ್ತದೆ. ಇತ್ತೀಚೆಗಷ್ಟೇ ಸರ್ಕಾರ ಸಂಪೂರ್ಣ ಎಥೆನಾಲ್ ಚಾಲಿತ ವಾಹನಗಳಿಗೂ ಅನುಮತಿ ನೀಡಲು ಪ್ರಸ್ತಾಪಿಸಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಕಚ್ಚಾ ತೈಲದ ಬೆಲೆ ಏರಿಳಿತದ ನಡುವೆ, ಭಾರತದ ಇಂಧನ ಭದ್ರತೆಯನ್ನು ಗಟ್ಟಿಗೊಳಿಸಲು ಈ ಹೆಜ್ಜೆ ಅತ್ಯಂತ ಮಹತ್ವದ್ದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.























