
ಬೆಂಗಳೂರು, ಮೇ ೨೮- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಎಲ್ಲ ಸಚಿವರ ಜತೆ ಉಪಹಾರ ಸಭೆ ನಡೆಸಿ ಸಚಿವರುಗಳಿಗೆ ಧನ್ಯವಾದ ಸಲ್ಲಿಸಿ ವಿದಾಯ ಹೇಳಿದರು.
ಹೈಕಮಾಂಡ್‌ನ ನಿರ್ದೇಶನದಂತೆ ಇಂದು ಮಧ್ಯಾಹ್ನ ೩ರ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವ ಸಂಪುಟದ ಎಲ್ಲ ಸಚಿವರಿಗೆ ಉಪಹಾರ ಕೂಟ ಆಯೋಜಿಸಿದ್ದು, ಈ ಉಪಹಾರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಅಧಿಕೃತ ಮಾಹಿತಿಯನ್ನು ಎಲ್ಲ ಸಚಿವರಿಗೂ ತಿಳಿಸಿದರು.
ತಮ್ಮ ರಾಜೀನಾಮೆ ನೀಡಲು ಕಾರಣ ಹಾಗೂ ಹೈಕಮಾಂಡ್‌ನ ನಿರ್ಧಾರದ ಬಗ್ಗೆ ಸಿದ್ದರಾಮಯ್ಯ ಅವರು ಎಲ್ಲ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ದೆಹಲಿಯಿಂದ ವಾಪಸ್ಸಾದ ನಂತರ ಏನನ್ನೂ ಮಾತನಾಡದೆ ಮೌನಕ್ಕೆ ಶರಣಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಸಚಿವರ ಸಭೆಯಲ್ಲಿ ಎಲ್ಲರ ಜತೆ ಮನ ಬಿಚ್ಚಿ ಮಾತನಾಡಿ, ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದನ್ನು ತಿಳಿಸಿ, ಮೂರು ವರ್ಷಗಳ ಕಾಲ ತಮ್ಮ ಜತೆ ರಾಜ್ಯದ ಪ್ರಗತಿಗೆ ಕೆಲಸ ಮಾಡಿದ ಎಲ್ಲ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಿದರು
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು ಇಂದಿನ ಉಪಹಾರ ಸಭೆಯಲ್ಲಿ ಪಾಲ್ಗೊಂಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಲಭಾಗದಲ್ಲಿ ಡಿ.ಕೆ. ಶಿವಕುಮಾರ್, ಎಡ ಭಾಗದಲ್ಲಿ ಡಾ.ಜಿ. ಪರಮೇಶ್ವರ್ ಕುಳಿತಿದ್ದು ವಿಶೇಷವಾಗಿತ್ತು.
ಸಹೋದ್ಯೋಗಿಗಳ ಜತೆ ಮುಕ್ತ ಮನಸ್ಸಿನಿಂದ ಮಾತನಾಡುತ್ತಾ ಉಪಹಾರ ಸವಿದ ಮುಖ್ಯಮಂತ್ರಿ ಸಿದ್ದ್ದರಾಮಯ್ಯ, ಹೈಕಮಾಂಡ್ ಭೇಟಿ, ಅಲ್ಲಿನ ಚರ್ಚೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನಿರ್ದೇಶನ ಎಲ್ಲವನ್ನು ಸಚಿವರುಗಳ ಮುಂದೆ ಬಿಡಿಸಿಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಹೋದ್ಯೋಗಿಗಳಿಗೆ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲೇ ಉಪಹಾರ ತಯಾರಿಸಿ ಊಣಬಡಿಸಿದ್ದು ವಿಶೇಷವಾಗಿತ್ತು. ಎಲ್ಲ ಸಚಿವರಿಗೆ ಇಡ್ಲಿ, ವಡೆ, ದೋಸೆ, ಉಪ್ಪಿಟ್ಟಿನ ಉಪಹಾರ ಬಡಿಸಲಾಯಿತು.
ಇಂದಿನ ಉಪಹಾರ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರುಗಳಾದ ಡಾ.ಜಿ. ಪರಮೇಶ್ವರ್, ಶಿವಾನಂದ ಪಾಟೀಲ್, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಬೈರತಿ ಸುರೇಶ್, ಸಂತೋಷ್ ಲಾಡ್, ಡಾ. ಎಂ.ಸಿ. ಸುಧಾಕರ್, ಪ್ರಿಯಾಂಕ ಖರ್ಗೆ, ಎಸ್.ಎಸ್. ಮಲ್ಲಿಕಾರ್ಜುನ್, ಕೆ. ವೆಂಕಟೇಶ್, ಶಿವರಾಜ ತಂಗಡಗಿ, ಚಲುವರಾಯಸ್ವಾಮಿ, ಲಕ್ಷ್ಮಿ ಹೆಬ್ಬಾಳ್ಕರ್, ಶರಣ ಬಸಪ್ಪ ದರ್ಖನಾಪುರ, ಮಧು ಬಂಗಾರಪ್ಪ, ಸತೀಶ್ ಜಾರಕೀಹೊಳಿ, ಡಾ.ಎಸ್.ಸಿ. ಮಹದೇವಪ್ಪ, ಮಾಂಕಾಳ ವೈದ್ಯ, ಆರ್.ಬಿ. ತಿಮ್ಮಾಪುರ, ಶರಣಪ್ರಕಾಶ್ ಪಾಟೀಲ್, ಕೆ.ಹೆಚ್. ಮುನಿಯಪ್ಪ ಹೆಚ್.ಕೆ. ಪಾಟೀಲ್, ಈಶ್ವರ ಖಂಡ್ರೆ, ಬೋಸರಾಜು, ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಖಾನ್ ಇವರುಗಳು ಭಾಗಿಯಾಗಿ ಮುಖ್ಯಮಂತ್ರಿಗಳ ಜತೆ ಉಪಹಾರ ಸವಿದರು.
ಸಚಿವರುಗಳ ಜತೆ ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕರುಗಳಾದ ಎ,ಎಸ್. ಪೊನ್ನಣ್ಣ, ಬಸವರಾಜ ರಾಯರೆಡ್ಡಿ, ಅಶೋಕ ಪಟ್ಟಣ ಸೇರಿದಂತೆ ಹಲವು ಶಾಸಕರು ಸಹ ಉಪಹಾರ ಕೂಟದಲ್ಲಿ ಭಾಗಿಯಾಗಿದ್ದರು.
ಉಪಹಾರದ ಜತೆ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಸಚಿವರಿಗೂ ಧನ್ಯವಾದ ಹೇಳಿ, ದೆಹಲಿ ಬೆಳವಣಿಗೆಗಳ ಬಗ್ಗೆಯೂ ಮಾಹಿತಿಗಳನ್ನು ನೀಡಿದರು.
ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆಶಿ
ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.

ಸಿದ್ದರಾಮಯ್ಯ ಅವರು ಇಂದು ಅವರ ನಿವಾಸ ಕಾವೇರಿಯಲ್ಲಿ ಸಚಿವರುಗಳಿಗೆ ಆಯೋಜಿಸಿದ್ದ ಉಪಹಾರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಉಪಮುಖ್ಯಮಂತ್ರಿಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದ್ಧರಾಮಯ್ಯ ಅವರನ್ನು ತಬ್ಬಿಕೊಂಡು ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದು, ವಿಶೇಷ ಎನಿಸಿತು.
ಕಳೆದ ಎರಡು ದಿನಗಳಿಂದ ದೆಹಲಿಯಲ್ಲೇ ಠಿಕಾಣಿ ಹೂಡಿದ್ದ ಡಿ.ಕೆ. ಶಿವಕುಮಾರ್ ಅವರು ದೆಹಲಿಯಿಂದ ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಉಪಹಾರ ಸಭೆಯಲ್ಲಿ ಭಾಗಿಯಾದರು.
ತಮ್ಮ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಡಿ.ಕೆ. ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ತಮ್ಮ ಪಕ್ಕದಲ್ಲೇ ಕುಳ್ಳರಿಸಿಕೊಂಡು ಜತೆಯಲ್ಲೇ ಉಪಹಾರ ಸೇವಿಸಿದರು.
ರಾಜ್ಯಪಾಲರ ದಿಢೀರ್ ಪ್ರವಾಸ ಲೋಕಭವನಕ್ಕೆ ರಾಜೀನಾಮೆ ಸಲ್ಲಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ಲೋಕಭವನಕ್ಕೆ ಮಧ್ಯಾಹ್ನ ೩ರ ನಂತರ ಸಲ್ಲಿಸಲಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದಿಢೀರ್ ಎಂದು ಹೊರ ರಾಜ್ಯಕ್ಕೆ ಪ್ರವಾಸ ಹೋಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಚೇರಿಗೆ ಮಧ್ಯಾಹ್ನ ೩ರ ನಂತರ ಸಲ್ಲಿಸುವರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಪತ್ನಿಯ ಆರೋಗ್ಯದಲ್ಲಿ ಏರುಪೇರಾದ ಕಾರಣ ರಾಜ್ಯಪಾಲರು ನಿನ್ನೆ ರಾತ್ರಿ ದಿಢೀರ್ ಎಂದು ಮಧ್ಯಪ್ರದೇಶದ ಇಂದೂರ್‌ಗೆ ತೆರಲಿದ್ದು, ಅವರು ಇಂದು ವಾಪಸ್ ಬರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಮುಖ್ಯಮಂತ್ರಿಗಳು ಲೋಕಭವನಕ್ಕೆ ತೆರಳಿ ರಾಜ್ಯಪಾಲರು ಲಭ್ಯವಿಲ್ಲದೆ ಇರುವುದರಿಂದ ಅವರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸುವರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸುವ ಸಂದರ್ಭದಲ್ಲಿ ಖುದ್ಧು ರಾಜ್ಯಪಾಲರೇ ಇರಬೇಕು ಎಂಬುದು ಕಡ್ಡಾಯವೇನಲ್ಲ. ಅವರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಲು ಅವಕಾಶ ಇದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಕಾರ್ಯದರ್ಶಿಗಳಿಗೆ ರಾಜೀನಾಮೆ ಪತ್ರ ನೀಡುವರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿ ಇಂದೂರ್‌ನಿಂದಲೇ ಮುಂದಿನ ಕ್ರಮದ ಬಗ್ಗೆ ರಾಜ್ಯಪಾಲರು ಸೂಚನೆ ನೀಡಬಹುದು.
ಇಂದೂರ್‌ನಿಂದ ರಾಜ್ಯಪಾಲರು ಬೆಂಗಳೂರಿಗೆ ವಾಪಸ್ಸಾದ ನಂತರ ಸಿದ್ದರಾಮಯ್ಯ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಬಹುದು.
ಇಂದು ರಾತ್ರಿ ದೆಹಲಿಗೆ ಸಿದ್ದು
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾತ್ರಿ ದೆಹಲಿಗೆ ತೆರಳುವ ಸಾಧ್ಯತೆ ಇದೆ.
ಮುಂದಿನ ಮುಖ್ಯಮಂತ್ರಿ ಆಯ್ಕೆ, ಸಚಿವ ಸಂಪುಟ ರಚನೆ ಎಲ್ಲದರ ಬಗ್ಗೆಯೂ ಕಾಂಗ್ರೆಸ್ ವರಿಷ್ಠರೊಂದಿಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸುವರು ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ದೆಹಲಿಗೆ ತೆರಳುವ ಸಿದ್ದರಾಮಯ್ಯ, ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಸಂಸದೆ ಪ್ರಿಯಾಂಕ ವಾದ್ರಾ ಅವರನ್ನು ಭೇಟಿ ಮಾಡಿ ಧನ್ಯವಾದ ಹೇಳುವರು ಎಂದು ಹೇಳಲಾಗಿದೆ.
ಮುಂದಿನ ಸಂಪುಟ ರಚನೆ ಸಂದರ್ಭದಲ್ಲಿ ತಮ್ಮ ಆಪ್ತರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಷ್ಠರೊಂದಿಗೆ ಚರ್ಚೆ ನಡೆಸುವರು ಎಂದು ಹೇಳಲಾಗಿದೆ.


























