
ಚಿತ್ತಾಪುರ: ಪಟ್ಟಣದ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಚಿತ್ತಾಪುರ ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಹೇಳಿದರು.
ಪಟ್ಟಣದ ಕಿಂಗ್ ಪ್ಯಾಲೇಸ್ ಸಭಾಂಗಣದಲ್ಲಿ ಚಿತ್ತಾಪುರ ಪುರಸಭೆ ವತಿಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರು ಪ್ರತಿದಿನ ಬೆಳಗಿನ ಜಾವ 5 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ, ಸಾರ್ವಜನಿಕರು ಎಚ್ಚರಗೊಳ್ಳುವ ಮುನ್ನವೇ ಪಟ್ಟಣದ ಆಂತರಿಕ ಹಾಗೂ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸುತ್ತಾರೆ. ಅವರ ಸೇವೆಯನ್ನು ಗುರುತಿಸಿ ಕೃತಜ್ಞತೆ ಹಾಗೂ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಪೌರ ಕಾರ್ಮಿಕರು ದುಶ್ಚಟಗಳಿಂದ ದೂರವಿದ್ದು, ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಮಾರಂಭವನ್ನು ಉದ್ಘಾಟಿಸಿದ ಸಿಪಿಐ ಎಸ್.ಸಿ. ಪಾಟೀಲ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ, ಅವರ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸಾಯಬಣ್ಣ ಕಾಶಿ, ಉಪಾಧ್ಯಕ್ಷ ವೆಂಕಟೇಶ, ಅಧಿಕಾರಿಗಳಾದ ಶಬಾನಾ ಬೇಗಂ, ವಿಠಲ್ ಹಾದಿಮನಿ, ಸುನೀಲ್ ಕುಮಾರ್, ಲೋಹಿತ್ ಕಟ್ಟಿಮನಿ, ಶರಣಕುಮಾರ ಮುಕೆ, ಮುತ್ತಣ್ಣ ಭಂಡಾರಿ, ರವಿಶಂಕರ್, ಕ್ರಾಂತಿದೇವಿ ಮಲ್ಲಿಕಾರ್ಜುನ, ಮರೇಪ್ಪ, ರಾಜಕುಮಾರ್, ಅಂಬಾರಾಯ, ಭೀಮು ಸೇರಿದಂತೆ ಪುರಸಭೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ
ಪೌರ ಕಾರ್ಮಿಕರಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಿ ಅಭಿನಂದಿಸಲಾಯಿತು.
ಇದಕ್ಕೂ ಮುನ್ನ ಪುರಸಭೆ ಕಚೇರಿಯಿಂದ ಲಾಡ್ಜಿಂಗ್ ಕ್ರಾಸ್‍ವರೆಗೆ ಪೌರ ಕಾರ್ಮಿಕರ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪುರಸಭೆಯ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು.






















