
ಬೆಂಗಳೂರು, ಅ.೧- ಗಾನಕೋಗಿಲೆ ದಿವಂಗತ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ನಗರದಲ್ಲಿ ‘ಚಿಟ್ಟೀ ಆಯೀ ಹೈ’ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗದ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ವಿತರಕ ಕಮಲ್ ರಾಜ್ (ಕಲೀಂ ಪಾಷಾ) ಆಯೋಜಿಸಿದ್ದರು.
ಲತಾ ಮಂಗೇಶ್ಕರ್ ಅವರ ಸಹೋದರಿ, ಹಿರಿಯ ಗಾಯಕಿ ಉಷಾ ಮಂಗೇಶ್ಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕನ್ನಡ, ಹಿಂದಿ, ಸೂಫಿ ಹಾಗೂ ಗಝಲ್ ಸೇರಿದಂತೆ ವಿವಿಧ ಶೈಲಿಯ ಜನಪ್ರಿಯ ಗೀತೆಗಳನ್ನು ಕಮಲ್ ರಾಜ್ (ಕಲೀಂ ಪಾಷಾ) ಮತ್ತು ಸಂಗಡಿಗರು ಪ್ರಸ್ತುತಪಡಿಸಿದರು. ಹಳೆಯ ಸುಮಧುರ ಗೀತೆಗಳಿಗೆ ಹೊಸ ಮೆರುಗು ನೀಡಿದ ಗಾಯನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಷಾ ಮಂಗೇಶ್ಕರ್, ಕಮಲ್ ರಾಜ್ ಅವರ ಗಾಯನವನ್ನು ಶ್ಲಾಘಿಸಿದರು. ‘ನಾನು ಪಂಕಜ್ ಉದಾಸ್ ಅವರ ಗಾಯನ ಕೇಳುತ್ತಿದ್ದೇನೆಯೋ ಅಥವಾ ಕಲೀಂ ಪಾಷಾ ಅವರ ಗಾಯನ ಕೇಳುತ್ತಿದ್ದೇನೆಯೋ ತಿಳಿಯುತ್ತಿಲ್ಲ. ಅಷ್ಟೊಂದು ಸುಮಧುರವಾಗಿ ಹಾಡಿದ್ದಾರೆ. ಬೆಂಗಳೂರಿನ ಜನತೆ ಲತಾ ಮಂಗೇಶ್ಕರ್ ಅವರ ಮೇಲೆ ಇಟ್ಟುಕೊಂಡಿರುವ ಪ್ರೀತಿ ಕಂಡು ಹೃದಯ ತುಂಬಿ ಬರುತ್ತದೆ’ ಎಂದರು.
ಕಮಲ್ ರಾಜ್ ಮಾತನಾಡಿ, ಲತಾ ಮಂಗೇಶ್ಕರ್ ಅವರ ನೆನಪಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಉಷಾ ಮಂಗೇಶ್ಕರ್ ಅವರ ಆಶೀರ್ವಾದ ಪಡೆದ ಕ್ಷಣ ತಮ್ಮ ಪಾಲಿಗೆ ಅವಿಸ್ಮರಣೀಯ ಎಂದು ಹೇಳಿದರು.























