
ತುಮಕೂರು, ಜೂ. ೨೬- ಬೀದಿ ಬದಿ ವ್ಯಾಪಾರಿಗಳು ಸಂಘಟನೆಯೊಂದಿಗೆ ಗುರುತಿಸಿಕೊಂಡು ಸಂಘಟನಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ವೃತ್ತಿ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಸಂಘಟನೆಯ ಸಹಕಾರದೊಂದಿಗೆ ಸುಲಭವಾಗಿ ನಿವಾರಿಸಿಕೊಳ್ಳಬಹುದು ಎಂದು ಸ್ಫೂರ್ತಿ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ.ಚಿದಾನಂದ್ ಕರೆ ನೀಡಿದರು.
ನಗರದ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳಿಗೆ ಗುರುತಿನ ಚೀಟಿ, ಹೆಣ್ಣು ಮಕ್ಕಳಿಗೆ ಸೀರೆ, ಬ್ಯಾಗ್ ವಿತರಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಣ್ಣ ಅವರ ಜನ್ಮದಿನ ಆಚರಿಸಿಲಾಯಿತು. ಜನ್ಮ ದಿನದ ಶುಭಾಶಯ ಕೋರಿದ ಎಸ್.ಪಿ. ಚಿದಾನಂದ್ ಅವರು, ಬೀದಿ ಬದಿ ವ್ಯಾಪಾರಿಗಳ ಜನ್ಮದಿನವನ್ನು ಸಂಘದ ಮೂಲಕ ಆಚರಿಸಿದರೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆತ್ಮವಿಶ್ವಾಸವನ್ನು ಅವರಲ್ಲಿ ತುಂಬಿದಂತಾಗುತ್ತದೆ. ಈ ಸಂಪ್ರದಾಯ ಮುಂದುವರೆಯಲಿ ಎಂದು ಹೇಳಿದರು.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಶಕ್ತಿ ತುಂಬವಂತಹ ಕೆಲಸಗಳಾಗಬೇಕು. ಈ ವಿಚಾರದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಹಾಗೂ ಇನ್ನಿತರ ಕಾರ್ಯಗಳಲ್ಲಿ ತಾವು ಸಂಘದ ಜತೆ ಸದಾ ಕೈಜೊಡಿಸುವುದಾಗಿ ತಿಳಿಸಿದರು.
ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದರಾಜ್ಯಾಧ್ಯಕ್ಷ ಎಂ.ಗೋಪಿ ಮಾತನಾಡಿ, ಸಂಘ ಬಲಿಷ್ಠವಾಗಿ ಬೆಳೆಯುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಘದ ಸಮಿತಿಗಳನ್ನು ರಚನೆ ಮಾಡಲಾಗಿದೆ. ಬೀದಿ ಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿಗೆ ಸಂಘ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಮ್ಯಾಶ್ರೀ ಜಿ., ರಾಜ್ಯ ಉಪಾಧ್ಯಕ್ಷ ಆದಿಲ್ ಬಾಷಾ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಸಂಘಟನಾ ಕಾರ್ಯದರ್ಶಿ ಸಿದ್ಧು ಗೋಬಿ, ಸಹ ಕಾರ್ಯದರ್ಶಿ ಕೃಷ್ಣ, ಮುಖಂಡರಾದ ಗಂಗಾಧರ್, ಕುಮಾರ್, ಉಪಾಧ್ಯಕ್ಷೆ ಭವ್ಯ, ಸಹ ಕಾರ್ಯದರ್ಶಿ ಶಿವಮ್ಮ, ಮಂಜುಳಾ, ಶ್ರೀನಿವಾಸಮೂರ್ತಿ ಮತ್ತಿತರರು ಭಾಗವಹಿಸಿದ್ದರು.























