Home ಜಿಲ್ಲೆ ಬೆಂಗಳೂರು ಜೂ. ೩೦ ಸಾಲು ಮರದ ತಿಮ್ಮಕ್ಕ ೧೧೪ನೇ ಜಯಂತಿ ಆಯೋಜನೆ

ಜೂ. ೩೦ ಸಾಲು ಮರದ ತಿಮ್ಮಕ್ಕ ೧೧೪ನೇ ಜಯಂತಿ ಆಯೋಜನೆ

ಬೆಂಗಳೂರು, ಜೂ. ೨೬- ಜೂನ್ ೩೦ ರಂದು ಪರಿಸರ ಸಂರಕ್ಷಣೆ ಹಾಗೂ ಮರಗಳ ಬೆಳವಣಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಪದ್ಮಶ್ರೀ ಪುರಸ್ಕೃತ ಸಾಲುಮರದ ದಿ. ತಿಮ್ಮಕ್ಕ ಅವರ ೧೧೪ನೇ ಜನ್ಮದಿನವನ್ನು ರಾಜ್ಯ ಮಟ್ಟದಲ್ಲಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.


ಜೂನ್ ೩೦ರಂದು ಬೆಂಗಳೂರಿನ ಯಲಹಂಕದ ದಿ ನ್ಯೂಟೌನ್ ಕ್ಲಬ್ ಮುಂಭಾಗದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಯಂತಿ ಆಚರಣೆ ನಡೆಯಲಿದೆ. ಮಧ್ಯಾಹ್ನ ೩ ಗಂಟೆಗೆ ನಡೆಯುವ ಮುಖ್ಯ ಸಮಾರಂಭದಲ್ಲಿ ತಿಮ್ಮಕ್ಕ ಅವರ ಜೀವನ ಸಾಧನೆ ಹಾಗೂ ಪರಿಸರ ಸಂರಕ್ಷಣೆಗೆ ನೀಡಿರುವ ಅಪಾರ ಕೊಡುಗೆಯನ್ನು ಸ್ಮರಿಸಲಾಗುವುದು.


ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಯಲಹಂಕದ ಸರ್ಕಲ್‌ನಿಂದ ಸುಮಾರು ೧೬ ಬಸ್‌ಗಳ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ಜಾಗೃತಿ ಮೆರವಣಿಗೆ ನಡೆಯಲಿದೆ. ಸಂಜೆ ೬ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಪರಿಸರ ಜಾಗೃತಿ ಸಂದೇಶಗಳು ಹಾಗೂ ವಿವಿಧ ಕಲಾ ಪ್ರದರ್ಶನಗಳು ನಡೆಯಲಿವೆ.


ಸಮಾರಂಭದಲ್ಲಿ ರಾಜ್ಯ ಸರ್ಕಾರದ ಸಚಿವರು, ಜನಪ್ರತಿನಿಧಿಗಳು, ಪರಿಸರ ತಜ್ಞರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಸಾಲುಮರದ ತಿಮ್ಮಕ್ಕ ಅವರ ಜೀವನ ಮೌಲ್ಯಗಳು, ಪರಿಸರದ ಬಗ್ಗೆ ಅವರ ಕಾಳಜಿ ಹಾಗೂ ಸಮಾಜಕ್ಕೆ ನೀಡಿರುವ ಪ್ರೇರಣಾದಾಯಕ ಸಂದೇಶಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತದೆ.


ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಆಯೋಜನಾ ಸಮಿತಿಯ ಸಭೆ ನಡೆಸಲಾಗಿದ್ದು, ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೂನ್ ೩೦ರಂದು ಮಧ್ಯಾಹ್ನ ೩ ಗಂಟೆಗೆ ನಡೆಯುವ ಮುಖ್ಯ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.


ಸುದ್ದಿಗೋಷ್ಟಿಯಲ್ಲಿ ವೇದಿಕೆಯ ರಾಜ್ಯ ಗೌರವ ಅಧ್ಯಕ್ಷ ಎಂ.ಎಂ. ಮುನಿರಾಜು, ರಾಜ್ಯಾಧ್ಯಕ್ಷ ಹೆಚ್.ಮಾರಪ್ಪ, ಉಪಾಧ್ಯಕ್ಷರಾದ ಜಗದೀಶ್ ಗೌಡ, ಪಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಮೇಶ್.ಆರ್. ಮತ್ತಿರರು ಉಪಸ್ಥಿತರಿದ್ದರು.