Home ಕ್ರೈಂ ಸುದ್ದಿಗಳು ಟೈರ್ ಬ್ಲಾಸ್ಟ್‍ನಿಂದ ಕಾರು ಹೊಲಕ್ಕೆ ಪಲ್ಟಿ; ಮಹಿಳೆಗೆ ಗಂಭೀರ ಗಾಯ, ಮೂವರಿಗೆ ಸಣ್ಣಪುಟ್ಟ ಗಾಯ

ಟೈರ್ ಬ್ಲಾಸ್ಟ್‍ನಿಂದ ಕಾರು ಹೊಲಕ್ಕೆ ಪಲ್ಟಿ; ಮಹಿಳೆಗೆ ಗಂಭೀರ ಗಾಯ, ಮೂವರಿಗೆ ಸಣ್ಣಪುಟ್ಟ ಗಾಯ

ಯಾದಗಿರಿ:ಜೂ.1:ಯಾದಗಿರಿ ನಗರದ ಚಿತ್ತಾಪುರ ರಸ್ತೆಯಲ್ಲಿರುವ ಸಪ್ತಪದಿ ಕನ್ವೆನ್ಷನ್ ಹಾಲ್ ಎದುರು ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮಧ್ಯಾಹ್ನ ಸುಮಾರು 12.15 ಗಂಟೆಯ ವೇಳೆಗೆ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಹೊಲಕ್ಕೆ ಪಲ್ಟಿಯಾಗಿ ಬಿದ್ದಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಗರಾಜ್ (53), ವಿಷ್ಣು (58), ಸಂಗೀತಾಬಾಯಿ (52) ಹಾಗೂ ರಾಜೇಶ್ವರಿ (48) ಅವರು ಮೂಲತಃ ಕೊಪ್ಪಳ ಜಿಲ್ಲೆಯ ನಿವಾಸಿಗಳಾಗಿದ್ದು, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪ್ರಸಿದ್ಧ ನಾಗಾವಿ ಯಲ್ಲಮ್ಮ ದೇವಸ್ಥಾನಕ್ಕೆ ದರ್ಶನ ಪಡೆದು ಮರಳಿ ತಮ್ಮ ಊರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಪ್ರಯಾಣಿಕರಲ್ಲಿ ಸಂಗೀತಾಬಾಯಿ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರ ನೆರವಿನಿಂದ ತಕ್ಷಣವೇ ರಕ್ಷಿಸಿ ಯಾದಗಿರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು, ತುರ್ತು ಸೇವಾ ಸಿಬ್ಬಂದಿ ಹಾಗೂ ಪೆÇಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಂಗೀತಾಬಾಯಿ ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಒಂದೇ ಕ್ಷಣದಲ್ಲಿ ಸಂಭವಿಸಿದ ಈ ಅವಘಡದಿಂದ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೆÇಲೀಸರು ಪರಿಶೀಲನೆ ನಡೆಸಿ ಅಪಘಾತದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.