
ವಿಜಯಪುರ, ಆ.2: ಕರ್ತವ್ಯ ನಿರ್ವಹಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ನಿರ್ವಾಹಕನ ಮೇಲೆ ಇಬ್ಬರು ದುಷ್ಕರ್ಮಿಗಳು ಬಸ್‍ನ್ನು ಮಧ್ಯ ರಸ್ತೆಯಲ್ಲೇ ತಡೆದು ಅಮಾನುಷವಾಗಿ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಅರೆಪ್ರಜ್ಞಾಹೀನಗೊಳಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಹಳ್ಳಿ ಸಮೀಪ ಶನಿವಾರ ನಡೆದಿದೆ.
ಮದರಿ-ಕನ್ನೊಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್‍ನ್ನು ಆರೋಪಿಗಳು ತಡೆದು ನಿರ್ವಾಹಕ ಮಲ್ಲಪ್ಪ ಲಮಾಣಿ ಅವರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳ ಆರಂಭಿಸಿದರು. ಮಾತಿನ ಚಕಮಕಿ ತೀವ್ರಗೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳು ಏಕಾಏಕಿ ಹಲ್ಲೆಗೆ ಮುಂದಾದರು. ನಿರ್ವಾಹಕ ಪ್ರತಿರೋಧ ವ್ಯಕ್ತಪಡಿಸಿದಾಗ ಇಬ್ಬರೂ ಸೇರಿ ಮನಬಂದಂತೆ ಥಳಿಸಿದರು.
ಇದರಿಂದಲೂ ತೃಪ್ತರಾಗದ ಆರೋಪಿಗಳು ನಿರ್ವಾಹಕನ ಕುತ್ತಿಗೆಯನ್ನು ಬಲವಾಗಿ ಹಿಸುಕಿದ ಪರಿಣಾಮ ಅವರು ಅರೆಪ್ರಜ್ಞಾಹೀನರಾಗಿ ಬಸ್‍ನಲ್ಲೇ ಕುಸಿದುಬಿದ್ದರು. ಘಟನೆಯಿಂದ ಪ್ರಯಾಣಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಬಸ್‍ನಲ್ಲಿದ್ದ ಪ್ರಯಾಣಿಕರು ತಕ್ಷಣ ಮಧ್ಯಪ್ರವೇಶಿಸಿ ಹಲ್ಲೆ ತಡೆದು ನಿರ್ವಾಹಕರಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಿದರು.
ಗಾಯಾಳು ನಿರ್ವಾಹಕ ಮಲ್ಲಪ್ಪ ಲಮಾಣಿ ಅವರನ್ನು ತಕ್ಷಣ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರಮೇಶ್ ಸೇರಿದಂತೆ ಇಬ್ಬರು ಆರೋಪಿಗಳು ಈ ಕೃತ್ಯ ಎಸಗಿದ್ದು, ಹಿಂದಿನ ದಿನ ಆಟೋ ರಿಕ್ಷಾ ತೆರವು ವಿಚಾರವಾಗಿ ಉಂಟಾಗಿದ್ದ ವೈಮನಸ್ಸಿನ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಘಟನೆ ಆಲಮೇಲ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗಳ ಬಂಧನಕ್ಕೆ ಪೆÇಲೀಸರು ಕ್ರಮ ಕೈಗೊಂಡಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಸಾರಿಗೆ ಸಿಬ್ಬಂದಿಯ ಮೇಲಿನ ಇಂತಹ ಅಮಾನುಷ ಹಲ್ಲೆ ಖಂಡನೀಯವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಸಾರಿಗೆ ಸಿಬ್ಬಂದಿಗೆ ಸೂಕ್ತ ಭದ್ರತೆ ಕಲ್ಪಿಸಬೇಕೆಂದು ಕೆಎಸ್‍ಆರ್‍ಟಿಸಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.






























