
ಕಲಬುರಗಿ: ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರ ಆಪ್ತ ಸಹಾಯಕ (ಪಿಎ) ರಾಜಕುಮಾರ ಪಾಟೀಲ್ (57) ಅವರ ಮೃತದೇಹ ಯಾದಗಿರಿ ಹಾಗೂ ಲಿಂಗೇರಿ ನಡುವಿನ ಮಷ್ಟೂರು ಗೇಟ್ ಸಮೀಪದ ರೈಲ್ವೆ ಹಳಿಯಲ್ಲಿ ಗುರುವಾರ ಪತ್ತೆಯಾಗಿದೆ.
ಕಲಬುರಗಿಯ ಕೈಲಾಸ ನಗರದ ನಿವಾಸಿಯಾಗಿರುವ ರಾಜಕುಮಾರ ಪಾಟೀಲ್, ಶಿವಾನಂದ ಅವರ ಪುತ್ರರಾಗಿದ್ದು, ಶಶೀಲ್ ಜಿ. ನಮೋಶಿ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜಕುಮಾರ ಅವರು ಬೆಂಗಳೂರಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿದ ಬಳಿಕ ನಿನ್ನೆ ರಾತ್ರಿ ರೈಲಿನ ಮೂಲಕ ಬೆಂಗಳೂರಿನಿಂದ ಕಲಬುರಗಿಗೆ ವಾಪಸ್ಸಾಗುತ್ತಿದ್ದರು. ಅವರು ಬಿ-1 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದು, ಅವರೊಂದಿಗೆ ಇತರ ಸಹ ಪ್ರಯಾಣಿಕರೂ ಇದ್ದರು.
ರಾತ್ರಿ ಎಲ್ಲರೂ ಪರಸ್ಪರ ಮಾತನಾಡಿಕೊಂಡು ಬಳಿಕ ತಮ್ಮ ತಮ್ಮ ಆಸನಗಳಲ್ಲಿ ಮಲಗಿಕೊಂಡಿದ್ದರು. ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಸಹ ಪ್ರಯಾಣಿಕರು ರಾಜಕುಮಾರ ಅವರು ತಮ್ಮ ಆಸನದಲ್ಲಿ ಮಲಗಿರುವುದನ್ನು ಗಮನಿಸಿದ್ದರು ಎನ್ನಲಾಗಿದೆ. ಆದರೆ, ರೈಲು ವಾಡಿ ಸಮೀಪಕ್ಕೆ ಬರುತ್ತಿದ್ದಂತೆ ಅವರನ್ನು ಹುಡುಕಿದಾಗ ಆಸನದಲ್ಲಿ ಕಾಣಿಸಿರಲಿಲ್ಲ.
ಆರಂಭದಲ್ಲಿ ಅವರು ಶೌಚಾಲಯಕ್ಕೆ ತೆರಳಿರಬಹುದು ಎಂದು ಭಾವಿಸಿದ ಸಹ ಪ್ರಯಾಣಿಕರು, ಕಲಬುರಗಿ ತಲುಪಿದ ಬಳಿಕ ಹುಡುಕಾಟ ನಡೆಸಿದ್ದಾರೆ. ಈ ನಡುವೆ ಅವರ ಮೊಬೈಲ್ಗೆ ಕರೆ ಮಾಡಿದಾಗ, ಕರೆ ಸ್ವೀಕರಿಸಿದ ವ್ಯಕ್ತಿಯಿಂದ ರಾಜಕುಮಾರ ಅವರು ಯಾದಗಿರಿ ಸಮೀಪದ ರೈಲ್ವೆ ಹಳಿಯಲ್ಲಿ ಮೃತಪಟ್ಟಿರುವ ವಿಷಯ ತಿಳಿದುಬಂದಿದೆ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಳಗಿನ ಜಾವ ಶೌಚಾಲಯಕ್ಕೆ ತೆರಳುವ ಸಂದರ್ಭದಲ್ಲಿ ನಿದ್ರೆಯ ಮಂಪರಿನಲ್ಲಿ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರೈಲಿನಿಂದ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಸಾವಿಗೆ ನಿಖರ ಕಾರಣ ತನಿಖೆಯಿಂದಲೇ ತಿಳಿದುಬರಬೇಕಿದೆ.
ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಪೆÇಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜಕುಮಾರ ಪಾಟೀಲ್ ಅವರ ಸಾವು ಆಕಸ್ಮಿಕವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಪ್ರಶ್ನೆಗಳು ಮೂಡಿವೆ. ಕುಟುಂಬಸ್ಥರು ನೀಡುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ಸಾವಿನ ಹಿಂದಿನ ನೈಜ ಕಾರಣವನ್ನು ಪತ್ತೆಹಚ್ಚಲು ರೈಲ್ವೆ ಪೆÇಲೀಸರು ತನಿಖೆ ಕೈಗೊಳ್ಳಲಿದ್ದಾರೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.




















