Home ಮುಖಪುಟ ಸುದ್ದಿ ಗಣಿನಾಡಲ್ಲಿ ಬಿಜೆಪಿ ಪಾದಯಾತ್ರೆ ಕಾರ್ಯಕರ್ತರಲ್ಲಿ ರಣೋತ್ಸಾಹ

ಗಣಿನಾಡಲ್ಲಿ ಬಿಜೆಪಿ ಪಾದಯಾತ್ರೆ ಕಾರ್ಯಕರ್ತರಲ್ಲಿ ರಣೋತ್ಸಾಹ

ಬಳ್ಳಾರಿ.ಸೆ.೭- ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ನಾಯಕರು ನಡೆಸುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ೭ನೇ ದಿನಕ್ಕೆ ಕಾಲಿಟ್ಟಿದೆ. ಗಣಿನಾಡು ಬಳ್ಳಾರಿ ಜಿಲ್ಲೆಗೆ ಪಾದಯಾತ್ರೆ ಪ್ರವೇಶಿಸುತ್ತಿದ್ದಂತೆ ಕೇಸರಿ ಪಡೆಯ ರಣೋತ್ಸಾಹ ಮತ್ತಷ್ಟು ಹೆಚ್ಚಾಗಿದೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಿಂದ ೭ನೇ ದಿನದ ಪಾದಯಾತ್ರೆ ಆರಂಭವಾಗಿದ್ದು,ಕಂಪ್ಲಿಯಿಂದ ಮೆಟ್ರಿ ಗ್ರಾಮದವರೆಗೆ ಪಾದಯಾತ್ರೆ ಸಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಹಲವು ಬಿಜೆಪಿ ನಾಯಕರು ಹಾಗೂ ಸಹಸ್ರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಪಾದಯಾತ್ರೆ ಆರಂಭಕ್ಕೂ ಮುನ್ನ ೯೭ ವರ್ಷದ ವೃದ್ಧೆಯೊಬ್ಬರಿಂದ ಬಿ.ವೈ. ವಿಜಯೇಂದ್ರ ಹಾಗೂ ಸುರೇಶ್ ಬಾಬು ಆಶೀರ್ವಾದ ಪಡೆದರು. ಹಸಿರು ಶಾಲು ಧರಿಸಿ ಪಾದಯಾತ್ರೆಗೆ ಆಗಮಿಸಿದ್ದ ವೃದ್ಧೆಯ ಕಾಲಿಗೆ ಬಿದ್ದು ಸುರೇಶ್ ಬಾಬು ಆಶೀರ್ವಾದ ಪಡೆದ ದೃಶ್ಯ ಗಮನ ಸೆಳೆಯಿತು.

ಪಾದಯಾತ್ರೆಯ ೭ನೇ ದಿನದ ಹೋರಾಟಕ್ಕೆ ಬಿಜೆಪಿ ಒಬಿಸಿ ಮೋರ್ಚಾ ಮೂಲಕ ಬೃಹತ್ ಸಿದ್ಧತೆ ನಡೆಸಿದ್ದು,೧೦ ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಹೋರಾಟ ನಡೆಸಲು ರೂಪುರೇಷೆ ಸಿದ್ಧಪಡಿಸಿದೆ. ಜೆನ್ ಜಿ ಯುವಕರನ್ನೂ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಬಿಜೆಪಿ ನಾಯಕರು ಯೋಜನೆ ರೂಪಿಸಿದ್ದಾರೆ.

ಬಳ್ಳಾರಿಯ ಜ್ವಲಂತ ಸಮಸ್ಯೆಗಳೇ ಬಿಜೆಪಿಯ ಅಸ್ತ್ರ :

ಇಂದಿನ ಪಾದಯಾತ್ರೆಯಲ್ಲಿ ಬಳ್ಳಾರಿ ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಬಿಜೆಪಿ ನಾಯಕರು ಧ್ವನಿ ಎತ್ತಲಿದ್ದಾರೆ.
ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ತುಂಗಭದ್ರಾ ಜಲಾಶಯದ ನೀರು ಹಂಚಿಕೆ, ಜಲಾಶಯದಲ್ಲಿನ ಹೂಳು ತೆಗೆಯುವಿಕೆ, ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ವಿಚಾರ, ಅಭಿವೃದ್ಧಿ ನಿರ್ಲಕ್ಷ್ಯ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲಿನ ಪ್ರಕರಣಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸಲು ಬಿಜೆಪಿ ಸಜ್ಜಾಗಿದೆ.
ಅಲ್ಲದೇ ಭತ್ತ ಹಾಗೂ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ, ಗಣಿಗಾರಿಕೆಯಿಂದ ಉಂಟಾಗುತ್ತಿರುವ ಸಮಸ್ಯೆಗಳು, ಪರಿಸರ ನಾಶ ಮತ್ತು ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳನ್ನೂ ಬಿಜೆಪಿ ನಾಯಕರು ಪ್ರಸ್ತಾಪಿಸಲಿದ್ದಾರೆ.

ಪಾದಯಾತ್ರೆ ಸಾಗುವ ಮಾರ್ಗದಲ್ಲಿ ವಿವಿಧ ವಲಯಗಳ ಮುಖಂಡರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡುತ್ತಿರುವ ಬಿ.ವೈ. ವಿಜಯೇಂದ್ರ,ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಾ, ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.

ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಸರ್ಕಾರಕ್ಕೆ ತಿರುಗೇಟು :

೭ನೇ ದಿನದ ಹೋರಾಟದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ವಿಚಾರವೇ ಪ್ರಮುಖ ಅಸ್ತ್ರವಾಗಲಿದೆ.ಅಕ್ರಮ ಚಟುವಟಿಕೆಗಳು ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಲಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ.

ಬಳ್ಳಾರಿ ಚಲೋ ಪಾದಯಾತ್ರೆಯ ೭ನೇ ದಿನದ ಹೋರಾಟ ಇದೀಗ ಮುಖ್ಯ ಘಟ್ಟ ತಲುಪಿದ್ದು, ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಬಿಜೆಪಿ ನಾಯಕರು ವಾಗ್ದಾಳಿ ನಡೆಸುವ ಸಾಧ್ಯತೆ ಇದೆ.

ಒಟ್ಟಾರೆ ಜನಾರ್ಧನ ರೆಡ್ಡಿ, ರಾಮುಲು ಸೇರಿದಂತೆ ಬಳ್ಳಾರಿ ಬಿಜೆಪಿಯ ಪ್ರಮುಖ ನಾಯಕರಿಗೆ ಇಂದಿನ ಹೋರಾಟ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.