
ಬಳ್ಳಾರಿ.ಸೆ.೯ – ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆ ಕೊನೆ ಹಂತಕ್ಕೆ ತಲುಪಿದ್ದು, ಇಂದು ಬಳ್ಳಾರಿ ನಗರ ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.
ಪ್ರಸ್ತುತ ಬಳ್ಳಾರಿ ನಗರಕ್ಕೆ ಪಾದಯಾತ್ರೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸರ್ಪಗಾವಲು ಹಾಕಲಾಗಿದ್ದು, ಹಿರಿಯ ಐಪಿಎಸ್ ಅಧಿಕಾರಿ ಸುಮನ್ ಡಿ. ಪನ್ನೇಕರ್ ನೇತೃತ್ವದಲ್ಲಿ ಅಭೂತಪೂರ್ವ ಭದ್ರತೆ ಏರ್ಪಡಿಸಲಾಗಿದೆ. ೩ ಜಿಲ್ಲೆಗಳ ಎಸ್‌ಪಿಗಳು ಸೇರಿದಂತೆ ಒಟ್ಟು ೧,೨೦೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇಂದಿನಿಂದ ನಾಳೆಯವರೆಗೆ ಭದ್ರತೆಯನ್ನು ದುಪ್ಪಟ್ಟುಗೊಳಿಸಲಾಗಿದೆ.
ಪಾದಯಾತ್ರೆ ನಗರಕ್ಕೆ ಕೇವಲ ೧೩ ಕಿ.ಮೀ ದೂರದಲ್ಲಿದ್ದು, ಸಂಜೆಯ ವೇಳೆಗೆ ಬಳ್ಳಾರಿ ತಲುಪಲಿದೆ. ಅಲ್ಲದೆ,ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಬಿಜೆಪಿ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬಹಿರಂಗ ಸಮಾವೇಶಕ್ಕೆ ಸ್ಥಳ ನೀಡಲು ಜಿಲ್ಲಾಡಳಿತ ನಿನ್ನೆಯವರೆಗೂ ಸತಾಯಿಸಿದ್ದು, ಕೊನೆಗೆ ಕಠಿಣ ಷರತ್ತುಗಳನ್ನು ವಿಧಿಸಿ ಮುನ್ಸಿಪಲ್ ಮೈದಾನಕ್ಕೆ ಅನುಮತಿ ನೀಡಿದೆ. ಆದರೆ ಮಹಾನಗರ ಪಾಲಿಕೆ ಸಿಬ್ಬಂದಿ ನಗರದಲ್ಲಿ ಹಾಕಲಾಗಿದ್ದ ಬಿಜೆಪಿ ಬ್ಯಾನರ್ ಹಾಗೂ ಬಾವುಟಗಳನ್ನು ತೆರವುಗೊಳಿಸಿದ್ದು, ಕಾಂಗ್ರೆಸ್ ಸರ್ಕಾರದ ನಡೆ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಳೆ ಸಂಜೆ ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದು, ಸಮಾವೇಶದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಸಂಸದರು, ಶಾಸಕರು ಹಾಗೂ ೧ ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈಗಾಗಲೇ ಸಮಾವೇಶಕ್ಕೆ ಮುನ್ಸಿಪಲ್ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಲಿಂಗಸುಗೂರಿನಿಂದ ಆರಂಭವಾದ ಈ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜನರ ಸಮಸ್ಯೆಗಳನ್ನು ಆಲಿಸುತ್ತಾ ಸರ್ಕಾರದ ವಿರುದ್ಧ ಹೋರಾಟ ರೂಪಿಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ನಂತರವೂ ಬಿಜೆಪಿ ಹೋರಾಟ ಮುಂದುವರಿಸಿದ್ದು, ಬಳ್ಳಾರಿ ನಗರದಲ್ಲಿ ನಾಳೆ ಸಂಜೆ ಬೃಹತ್ ಸಮಾವೇಶ ನಡೆಸಲಿದೆ.
ಸೈಕಲ್ ತುಳಿದು ಪಾದಯಾತ್ರೆಗೆ ಚಾಲನೆ :
ಬೆಳಿಗ್ಗೆ ಸಂಡೂರಿನ ಕುಡಿತಿನಿ ಗ್ರಾಮದಲ್ಲಿ ಸೈಕಲ್ ತುಳಿಯುವ ಮೂಲಕ ೯ನೇ ದಿನದ ಪಾದಯಾತ್ರೆಗೆ ಬಿಜೆಪಿ ನಾಯಕರು ಚಾಲನೆ ನೀಡಿದರು.
.
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು,ಸುರೇಶ್ ಕುಮಾರ್, ನಳಿನ್ ಕುಮಾರ್ ಕಟೀಲ್, ಬಂಗಾರ ಹನುಮಂತ ಸೇರಿದಂತೆ ಹಲವು ಘಟಾನುಘಟಿ ನಾಯಕರು ಇಂದಿನ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ
ಪಾದಯಾತ್ರೆ ಆರಂಭಕ್ಕೂ ಮುನ್ನ ಬಿಜೆಪಿ ನಾಯಕರು ಕುಡಿತಿನಿ ಪಟ್ಟಣದ ಭೂ ಸಂತ್ರಸ್ತ ರೈತರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿದರು. ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ರೈತರು ತಮ್ಮ ಅಹವಾಲುಗಳನ್ನು ಬಿಜೆಪಿ ನಾಯಕರ ಮುಂದೆ ಮಂಡಿಸಿದರು.
ಕುಡಿತಿನಿ ಭಾಗದಲ್ಲಿ ಎನ್‌ಎಂಡಿಸಿ ಹಾಗೂ ಆರ್ಸೆಲರ್ ಮಿತ್ತಲ್ ಸೇರಿದಂತೆ ಕೈಗಾರಿಕಾ ಕಂಪನಿಗಳಿಗೆ ಜಮೀನು ನೀಡಿರುವ ರೈತರು ವಿವಿಧ ಬೇಡಿಕೆಗಳಿಗಾಗಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ೨೦೨೨ರಿಂದ ರೈತರು ಹೋರಾಟ ಮುಂದುವರಿಸಿದ್ದು, ಜಮೀನು ನೀಡಿದ ಕುಟುಂಬಗಳಿಗೆ ಉದ್ಯೋಗ ಹಾಗೂ ಮನೆ ನಿರ್ಮಾಣಕ್ಕೆ ಜಾಗ ನೀಡುವ ಭರವಸೆ ಈಡೇರಿಲ್ಲ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಶ್ರೀರಾಮುಲು ಹಾಗೂ ಸಿ.ಟಿ. ರವಿ ರೈತರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾನಿರತ ರೈತರೊಂದಿಗೆ ಚರ್ಚೆ ನಡೆಸಿದರು.
ರೈತರಿಂದ ಅಹವಾಲು ಸ್ವೀಕರಿಸಿದ ವಿಜಯೇಂದ್ರ, ಅವರ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.ಜಮೀನು ಕಳೆದುಕೊಂಡ ರೈತರಿಗೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಬಿಜೆಪಿ ನಾಯಕರು ತಿಳಿಸಿದ್ದಾರೆ.

































