Home ಜಿಲ್ಲೆ ಕಲಬುರಗಿ ಭಾರತವನ್ನು ವಿಶ್ವದ ಬೃಹತ್ ಹಾಲು ಉತ್ಪಾದಕ ರಾಷ್ಟ್ರವನ್ನಾಗಿಸಿದ ಕುರಿಯನ್

ಭಾರತವನ್ನು ವಿಶ್ವದ ಬೃಹತ್ ಹಾಲು ಉತ್ಪಾದಕ ರಾಷ್ಟ್ರವನ್ನಾಗಿಸಿದ ಕುರಿಯನ್

ಕಲಬುರಗಿ : ಡಾ.ವರ್ಗೀಸ್ ಕುರಿಯನ್ ಅವರನ್ನು ಭಾರತದ “ಶ್ವೇತ ಕ್ರಾಂತಿಯ ಪಿತಾಮಹ” ಮತ್ತು “ಭಾರತದ ಹಾಲು ವಿತರಕ” ಎಂದು ಕರೆಯಲಾಗುತ್ತದೆ. ಭಾರತವನ್ನು ಹಾಲಿನ ಕೊರತೆಯಿದ್ದ ದೇಶದಿಂದ ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ದೇಶವನ್ನಾಗಿ ಪರಿವರ್ತಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಶಿವ ನಗರದಲ್ಲಿನ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ಡಾ.ವರ್ಗೀಸ್ ಕುರಿಯನ್ ಅವರ 14ನೇ ಸ್ಮರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಗುಜರಾತ್‍ನ ಆನಂದ್‍ನಲ್ಲಿ ತ್ರಿಭುವನದಾಸ್ ಪಟೇಲ್ ಮತ್ತು ಸ್ಥಳೀಯ ರೈತರೊಂದಿಗೆ ಕೈಜೋಡಿಸಿದ ಕುರಿಯನ್, ಮಧ್ಯವರ್ತಿಗಳ ಶೋಷಣೆಯಿಂದ ರೈತರನ್ನು ಮುಕ್ತಗೊಳಿಸಲು ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವನ್ನು ಬಲಪಡಿಸಿದರು. ಇದು ಮುಂದೆ ಜಗತ್ಪ್ರಸಿದ್ಧ ‘ಅಮುಲ್’ ಬ್ರಾಂಡ್ ಆಗಿ ರೂಪಾಂತರಗೊಂಡಿತು. ಈ ‘ಆನಂದ್ ಮಾದರಿ’ ಸಹಕಾರಿ ವ್ಯವಸ್ಥೆಯು ಭಾರತದ ಡೈರಿ ಉದ್ಯಮದ ದಾರಿಯನ್ನೇ ಬದಲಿಸಿತು. 1970 ರಲ್ಲಿ ಡಾ. ಕುರಿಯನ್ ಅವರ ನೇತೃತ್ವದಲ್ಲಿ ಪ್ರಾರಂಭವಾದ ‘ಆಪರೇಷನ್ ಫ್ಲಡ್’ ಜಗತ್ತಿನಲ್ಲೇ ಅತಿ ದೊಡ್ಡ ಗ್ರಾಮೀಣ ಅಭಿವೃದ್ಧಿ ಮತ್ತು ಡೈರಿ ಯೋಜನೆಯಾಗಿದೆ. ಈ ಯೋಜನೆಯು ಮೂರು ಹಂತಗಳಲ್ಲಿ ಅನುಷ್ಠಾನಗೊಂಡು, ದೇಶಾದ್ಯಂತ ಹಾಲಿನ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿತು ಮತ್ತು ಭಾರತವನ್ನು ಜಾಗತಿಕ ಮಟ್ಟದಲ್ಲಿ ನಂಬರ್ 1 ಹಾಲು ಉತ್ಪಾದಕ ದೇಶವನ್ನಾಗಿ ಮಾಡಿತು ಎಂದರು.
ಜಗತ್ತಿನಾದ್ಯಂತ ಇದ್ದ ಡೈರಿ ತಜ್ಞರು ಕೇವಲ ಹಸುವಿನ ಹಾಲಿನಿಂದ ಮಾತ್ರ ಹಾಲಿನ ಪುಡಿ ಮತ್ತು ಗಟ್ಟಿಹಾಲು ತಯಾರಿಸಲು ಸಾಧ್ಯ ಎಂದು ನಂಬಿದ್ದರು. ಆದರೆ, ಭಾರತದಲ್ಲಿ ಹೇರಳವಾಗಿ ಸಿಗುತ್ತಿದ್ದ ಎಮ್ಮೆ ಹಾಲಿನಿಂದ ಹಾಲಿನ ಪುಡಿಯನ್ನು ಯಶಸ್ವಿಯಾಗಿ ತಯಾರಿಸುವ ತಂತ್ರಜ್ಞಾನವನ್ನು ಕುರಿಯನ್ ಮತ್ತು ಅವರ ಸಹೋದ್ಯೋಗಿ ಹೆಚ್. ಎಂ. ದಾಲಯ ಅಭಿವೃದ್ಧಿಪಡಿಸಿದರು. ಇದು ಭಾರತೀಯ ಡೈರಿ ರಂಗದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿತು. ಡೈರಿ ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ಇವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ, ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ, ಇನ್‍ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‍ಮೆಂಟ್, ‘ಧಾರಾ’ ಸ್ಥಾಪಿಸಿದರು. ಅವರ ಅಪ್ರತಿಮ ಕೊಡುಗೆಗಾಗಿ ಪದ್ಮಶ್ರೀ, ಪದ್ಮಭೂಷಣ , ಪದ್ಮವಿಭೂಷಣ, ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ, ವಿಶ್ವ ಆಹಾರ ಪ್ರಶಸ್ತಿ ದೊರೆತಿವೆ.ಡಾ. ವರ್ಗೀಸ್ ಕುರಿಯನ್ ಅವರ ಜನ್ಮದಿನವಾದ ನವೆಂಬರ್ 26 ರನ್ನು ಭಾರತದಲ್ಲಿ ‘ರಾಷ್ಟ್ರೀಯ ಹಾಲು ದಿನ’ ಎಂದು ಆಚರಿಸಲಾಗುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಬಿರಾದಾರ. ಬಿರಾದಾರ, ಮುಖ್ಯ ಶಿಕ್ಷಕಿ ಚಂಪಾ ನೆಲ್ಲುರೆ ಹಾಗೂ ವಿದ್ಯಾರ್ಥಿಗಳು ಇದ್ದರು.