
ಬೆಂಗಳೂರು, ಸೆ.೯- ಇನ್ನು ಮುಂದೆ ನೋಡಿ, ನನ್ನ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೂ ಇಡಿ ದಾಳಿ ನಡೆಯಬಹುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ದಾಳಿ.ಐಟಿ ಮತ್ತು ಇಡಿ ನಾಯಕತ್ವದಲ್ಲೇ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಇದು ಆರಂಭವಷ್ಟೇ ಎಂದು ತಿಳಿಸಿದರು.
ಜಾರಿ ನಿರ್ದೇಶನಾಲಯ(ಇಡಿ)ದಾಳಿಗಳು ರಾಜಕೀಯ ಪ್ರೇರಿತವಾಗಿದ್ದು, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರಗಳಾಗಿ ಬಳಸಿಕೊಳ್ಳುತ್ತಿದೆ.ಕಳೆದ ಆರು ವರ್ಷಗಳಲ್ಲಿ ೧೯೬ ಇಡಿ ದಾಳಿಗಳು ನಡೆದಿದ್ದು, ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಆರೋಪಗಳು ಸಾಬೀತಾಗಿವೆ. ಶೇ.೯೭ರಷ್ಟು ದಾಳಿಗಳು ಪ್ರತಿಪಕ್ಷ ನಾಯಕರ ವಿರುದ್ಧ ನಡೆದಿವೆ ಎಂದು ಕಿಡಿಕಾರಿದರು.
ರಾಜ್ಯ ಬಿಜೆಪಿಯ ನಾಯಕರ ಮೇಲೂ ವಿಶ್ವಾಸವಿಲ್ಲದ ಕಾರಣ, ಇಡಿ ಬಳಸಿಕೊಂಡು ಚುನಾವಣೆ ಎದುರಿಸುವ ಪ್ರಯತ್ನ ನಡೆಯುತ್ತಿದೆ ಎಂದಅವರು ಮಾಜಿ ಸಚಿವ ನಾಗೇಂದ್ರ ಮೇಲಿನ ದಾಳಿಯಿಂದ ಏನು ಸಾಧನೆಯಾಯಿತು ಎಂದು ಪ್ರಶ್ನಿಸಿದರು.
ವಿಶೇಷ ಅಧಿವೇಶನಕ್ಕೆ ಸಿದ್ಧ :
ವಿಶೇಷ ಅಧಿವೇಶನದ ವಿಚಾರವಾಗಿ ಮಾತನಾಡಿದ ಪ್ರಿಯಾಂಕ ಖರ್ಗೆ, ಹಿಂದಿನ ಅಧಿವೇಶನದಲ್ಲೇ ಎಲ್ಲ ವಿಚಾರಗಳನ್ನೂ ಚರ್ಚಿಸಲು ಬಿಜೆಪಿಗೆ ಅವಕಾಶ ನೀಡಲಾಗಿತ್ತು. ಆದರೆ ಬಿಜೆಪಿ ಚರ್ಚೆಗೆ ಮುಂದೆ ಬರದೆ ಪಲಾಯನ ಮಾಡಿತ್ತು ಎಂದು ಟೀಕಿಸಿದರು.
ಮೂರು ದಿನಗಳ ಅಧಿವೇಶನವನ್ನು ಏಳು ದಿನಗಳವರೆಗೆ ವಿಸ್ತರಿಸಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು,ಏನು ಚರ್ಚೆ ಮಾಡಬೇಕೋ ಮಾಡಲಿ. ಎಲ್ಲ ವಿಚಾರಗಳ ಚರ್ಚೆಗೂ ನಾವು ಸಿದ್ಧರಿದ್ದೇವೆ ಎಂದರು.
ಬರಗಾಲ ಘೋಷಣೆ ಹಾಗೂ ರೈತರ ಸಾಲಮನ್ನಾ ವಿಚಾರದಲ್ಲೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಅವರು,ಬರಗಾಲ ಘೋಷಣೆಗೆ ಸಂಬಂಧಿಸಿದ ಮಾನದಂಡ ಕೇಂದ್ರ ಸರ್ಕಾರದ್ದೇ ಅಲ್ಲವೇ ಎಂದು ಪ್ರಶ್ನಿಸಿದ ಅವರು, ರೈತರ ಸಾಲಮನ್ನಾ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಆರೋಪ ನಿರಾಕರಿಸಿದ ಗೃಹ ಸಚಿವ :
ಬಳ್ಳಾರಿಯಲ್ಲಿ ನಾಳೆ ನಡೆಯಲಿರುವ ಬಿಜೆಪಿಯ ಬಳ್ಳಾರಿ ಚಲೋ ಸಮಾರೋಪ ಸಮಾರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂಬ ಆರೋಪವನ್ನು ಪ್ರಿಯಾಂಕ್ ಖರ್ಗೆ ತಳ್ಳಿಹಾಕಿದರು.
ಯಾರೇ ಅನುಮತಿ ಕೇಳಿದರೂ ನೀಡುತ್ತೇವೆ.ಇಲ್ಲಿಯವರೆಗೆ ಯಾವುದಾದರೂ ಪಾದಯಾತ್ರೆಯನ್ನು ನಾವು ತಡೆದಿದ್ದೇವೆಯೇ? ಸಮಾವೇಶ ನಡೆಸುವುದು ಅವರ ಹಕ್ಕು.ಆದರೆ ಕಾನೂನು ಚೌಕಟ್ಟಿನೊಳಗೆ, ಇತಿಮಿತಿಯೊಳಗೆ ಕಾರ್ಯಕ್ರಮ ನಡೆಸಬೇಕು ಎಂದು ಹೇಳಿದರು.
ಅಧಿಕಾರಿಗಳು ಮತ್ತು ಪೊಲೀಸರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಾವು ಯಾವುದೇ ಕಾರಣಕ್ಕೂ ಅವರ ಅನುಮತಿ ನಿರಾಕರಿಸಿಲ್ಲ.ಸಮಾವೇಶ ಮಾಡಿ,ಅಗತ್ಯ ರಕ್ಷಣೆ ಕೊಡುತ್ತೇವೆ. ಆದರೆ ಅಧಿಕಾರಿಗಳಿಗೆ ಡೆಡ್‌ಲೈನ್ ನೀಡುವುದು, ಹೆದರಿಸುವುದು ಬೇಡ. ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಗೌರವ ನೀಡಬೇಕು ಎಂದು ಖರ್ಗೆ ಸಲಹೆ ನೀಡಿದರು.


































