
ವಿಜಯಪುರ, ಆ.2:
ನಗರದಲ್ಲಿ ದೋಷರಹಿತ ಹಾಗೂ ಪಾರದರ್ಶಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಚುನಾವಣಾ ಆಯೋಗದ ಎಸ್‍ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ನಗರದಲ್ಲಿ ಒಟ್ಟು 2,90,479 ಮತದಾರರಿದ್ದು, ಈ ಪೈಕಿ 2,04,368 ಮತದಾರರ ಮಾಹಿತಿಯನ್ನು ಡಿಜಿಟೈಸೇಶನ್ ಮಾಡಲಾಗಿದೆ. ಇದುವರೆಗೆ ಶೇ.70.35ರಷ್ಟು ಕಾರ್ಯ ಪೂರ್ಣಗೊಂಡಿದ್ದು, ಎಸ್‍ಐಆರ್ ಪ್ರಕ್ರಿಯೆಗೆ ಇನ್ನೂ ಎಂಟು ದಿನಗಳ ಕಾಲಾವಕಾಶ ಇರುವುದರಿಂದ ಇಲಾಖೆಯೊಂದಿಗೆ ಕೈಜೋಡಿಸಿ ಶೇ.100ರಷ್ಟು ಗುರಿ ಸಾಧಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಿಂದ 78,709 ಹೆಸರುಗಳನ್ನು ಕೈಬಿಡಲು ಗುರುತಿಸಲಾಗಿದ್ದು, ಅವುಗಳಲ್ಲಿ 38,926 ಮಂದಿ ಗೈರುಹಾಜರಿಯಾಗಿರುವವರು ಹಾಗೂ 23,871 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು ಗುರುತಿಸಲಾಗಿದೆ. ಆದರೆ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ನೆರವಾಗುತ್ತಿದ್ದಾರೆ ಎಂದು ಹೇಳಿದರು.
ನಗರದ ಪ್ರತಿಯೊಂದು ಮತಗಟ್ಟೆಗೆ ಬಿಜೆಪಿ ವತಿಯಿಂದ ಬಿಎಲ್‍ಎ-2 ಏಜೆಂಟರನ್ನು ನೇಮಿಸಲಾಗಿದ್ದು, ಅವರು ಬಿಎಲ್‍ಒಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ವಾರ್ಡ್‍ಗೆ ಉಸ್ತುವಾರಿ ಮುಖಂಡರನ್ನು ನೇಮಿಸಲಾಗಿದ್ದು, ಪ್ರತಿ ಐದು ವಾರ್ಡ್‍ಗಳಿಗೆ ಒಂದು ಮಹಾಶಕ್ತಿಕೇಂದ್ರ ರಚಿಸಿ ಸಭೆಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಎಸ್‍ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅನುಮಾನಗಳನ್ನು ನಿವಾರಿಸಲು ಹಾಗೂ ಅಗತ್ಯ ನೆರವು ನೀಡಲು ವಿಶೇಷ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಸಾರ್ವಜನಿಕರು ಮೊ. 8050311795 ಅಥವಾ ಮೊ. 8073246433 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಂಜಯ ಪಾಟೀಲ ಕನಮಡಿ, ಭೀಮಾಶಂಕರ ಹದನೂರ, ಪಾಪುಸಿಂಗ್ ರಜಪೂತ, ಚಿನ್ನು ಚಿನಗುಂಡಿ, ವಿಜಯ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






























