
ದೆಹಲಿಯಲ್ಲಿ ಶಕ್ತಿಪ್ರದರ್ಶನ
ನವದೆಹಲಿ, ಅ. ೬- ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಇಂಡಿಯಾ ಮೈತ್ರಿಕೂಟದ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಇನ್ನಿತರ ಸಂಸದರನ್ನು ಪೊಲೀಸರು ವಶಕ್ಕೆ ಪಡೆದರು.
ಮತದಾರರ ತೀವ್ರ ಪರಿಷ್ಕರಣೆಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ರಾಜಧಾನಿ ನವದೆಹಲಿಯಲ್ಲಿ ರಣಕಹಳೆ ಮೊಳಗಿಸಿತು.
ಸಂಸದ್ ಭವನದಿಂದ ಕೇಂದ್ರ ಚುನಾವಣಾ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಯತ್ನಿಸಿದಾಗ ಪೊಲೀಸರು ಮಾರ್ಗಮಧ್ಯೆದಲ್ಲೇ ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಬಳಿಕ ಇಂಡಿಯಾ ಮೈತ್ರಿಕೂಟದ ನಾಯಕರನ್ನು ವಶಕ್ಕೆ ಪಡೆದರು.
ಎಸ್ ಐಆರ್ ಹೆಸರಿನಲ್ಲಿ ನಮೂನೆ ೬ರಲ್ಲಿ ಅಕ್ರಮಗಳು ನಡೆದಿದ್ದು, ಈ ವಿಚಾರದಲ್ಲಿ ಜ್ಞಾನೇಶ್ ಕುಮಾರ್ ಮತ್ತು ಇತರ ಇಬ್ಬರು ಆಯೋಗದ ಆಯುಕ್ತರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ. ಈ ವಿಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡು ಇಂಡಿಯಾ ಮೈತ್ರಿಕೂಟ ರಾಜಧಾನಿಯ ನವದೆಹಲಿಯಲ್ಲಿ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿತು.
ಇಂಡಿಯಾ ಮೈತ್ರಿಕೂಟದ ಸಂಸದರು ಸಂಸತ್ ಭವನದ ಮುಂದೆ ಜಮಾಯಿಸಿ, ಚುನಾವಣಾ ಆಯೋಗದವರೆಗೆ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ ಹಾಗೂ ಜ್ಞಾನೇಶ್ ಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖಗೆ, ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದರು, ಟಿಎಂಸಿ ಸಂಸದರು ಅಭಿಷೇಕ್ ಬ್ಯಾನರ್ಜಿ, ಸಮಾಜವಾದಿ ಪಕ್ಷ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಸಂಸದರು ಪಾಲ್ಗೊಂಡು ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿದರು.
ಪ್ರಜಾಪ್ರಭುತ್ವ ಉಳಿಸಿ ಎಂಬ ನಾಮಫಲಕಗಳನ್ನು ಹಿಡಿದು ಇಂಡಿಯಾ ಮೈತ್ರಿಕೂಟ ಸಂಸದರು ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿದರು.
ಚುನಾವಣಾ ಆಯೋಗದ ಕಚೇರಿ ೩೦೦ ಮೀಟರ್ ದೂರವಿರುವಾಗಲೆ ಆಕಾಶವಾಣಿ ಭವನ ಸಮೀಪ ಪೊಲೀಸರು ಪ್ರತಿಭಟನಾಕಾರರು ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು.
ಒಂದು ಹಂತದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಬ್ಯಾರಿಕೇಡ್ ಹತ್ತಿ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು. ತಕ್ಷಣ ಜ್ಞಾನೇಶ್ ಕುಮಾರ್ ಅವರನ್ನು ವಜಾ ಮಾಡಬೇಕು ಎಂದು ಪಟ್ಟು ಹಿಡಿದರು. ಪರಿಸ್ಥಿತಿ ಕೈಮೀರುವ ಹಂತ ತಲುಪುತ್ತಿದ್ದಂತೆ ಈ ವೇಳೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಇತರ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ಆದರೂ ಪಟ್ಟು ಸಡಿಲಿಸದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಆಕಾಶವಾಣಿ ಭವನದ ಮುಂದೆ ಧರಣಿ ಕುಳಿತರು. ದೆಹಲಿಯ ಡಿಸಿಪಿ ಸ್ಥಳಕ್ಕೆ ತೆರಳಿದ್ದು, ರಾಹುಲ್ ಗಾಂಧಿ ಮನವೊಲಿಕೆಗೆ ಮುಂದಾಗಿದ್ದು, ಇದು ಸರ್ಕಾರಿ ಜಾಗವಾಗಿದ್ದು ಇಲ್ಲಿಂದ ತೆರಳುವಂತೆ ಮನವಿ ಮಾಡಿದ್ದಾರೆ. ಸ್ಥಳದಲ್ಲಿ ಕುಳಿತಿರುವ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆಯಲು ಆಕಾಶವಾಣಿ ಭವನದೊಳಗೆ ಬಸ್‌ಅನ್ನು ಸಜ್ಜುಗೊಳಿಸಿದ್ದಾರೆ.
ಈ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಚುನಾವಣಾ ಆಯೋಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ಕೈಗೊಂಬೆಯಾಗಿದ್ದಾರೆ. ಹೀಗಾಗಿ ನಾವು ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಎಂದರು.
ಸ್ವಾತಂತ್ರ್ಯ ನಂತರ ನಮಗೆ ಲಭಿಸಿದ ವಯಸ್ಕರ ಮತದಾನದ ಹಕ್ಕನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ಹಾಗೂ ಜ್ಞಾನೇಶ್ ಕುಮಾರ್ ಪ್ರಯತ್ನಿಸುತ್ತಿದ್ದಾರೆ. ಮೋದಿ ಮತ್ತು ಅಮಿತ್ ಷಾ ಏನು ಹೇಳುತ್ತಿದ್ದಾರೋ ಅದನ್ನು ಮಾಡುತ್ತಿದ್ದಾರೆ. ಇದು ಸರ್ವಾಧಿಕಾರ್ಯಕ್ಕೆ ದಾರಿ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿಕೂಟ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದರು.
ಪ್ರಿಯಾಂಕಾ ಗಾಂಧಿ, ವಾದ್ರಾ ಮಾತನಾಡಿ, ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವತನಕ ಯಾವುದೇ ಕಾರಣಕ್ಕೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಸಿಪಿಐ ಸಂಸದ ಪಿ. ಸಂತೋಷ್ ಕುಮಾರ್ ಮಾತನಾಡಿ ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ನಮೂನೆ-೬ಕ್ಕೆ ಸಲ್ಲಿಸಲಾಗಿರುವ ಹೆಚ್ಚುವರಿ ಘೋಷಣೆ ಕುರಿತು ಪ್ರತಿಪಕ್ಷಗಳು ಪ್ರಸ್ತಾಪಿಸಿರುವ ಆಕ್ಷೇಪಗಳಿಗೆ ನಿನ್ನೆ ಸುಪ್ರೀಂಕೋರ್ಟ್ ನೀಡಿರುವ ಅಭಿಪ್ರಾಯಗಳು ಫಲ ನೀಡಿವೆ ಎಂದರು.
ಸಂಸದ ಸಂಜಯ್ ರಾವ್ ಪ್ರತಿಕ್ರಿಯಿಸಿ ಇಂಡಿಯಾ ಮೈತ್ರಿಕೂಟ ಕೈಗೊಂಡಿರುವ ಪಾದಯಾತ್ರೆಗೆ ವ್ಯಾಪಕ ಭದ್ರತೆ ವ್ಯವಸ್ಥೆ ಒದಗಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷ ಭಾಗವಹಿಸಿರಲಿಲ್ಲ.
ವಿಪಕ್ಷಗಳಿಗೆ ಬಿಜೆಪಿ ತಿರುಗೇಟು
ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಇಂಡಿಯಾ ಮೈತ್ರಿಕೂಟ ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿ ತಿರುಗೇಟು ನೀಡಿದ್ದು, ಪ್ರಜಾಪ್ರಭುತ್ವ ಮತ್ತು ಸಂವಿಧಾನಾತ್ಮಕ ಸಂಸ್ಥೆಗಳ ಗುರಿಯಾಗಿರಿಸಿಕೊಂಡು ಇಂಡಿಯಾ ಮೈತ್ರಿಕೂಟ ಪ್ರತಿಭಟನೆ ನಡೆಸುತ್ತಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ತಿರುಗೇಟು ನೀಡಿದ್ದಾರೆ.
ದೇಶದಲ್ಲಿ ರಾಹುಲ್ ಗಾಂಧಿಯವರಿಗೆ ರಾಜಕೀಯವಾಗಿ ವರ್ಚಸ್ಸು ತಂದು ಕೊಡಲು ಆರಾಜಕತೆ ಸೃಷ್ಟಿಸಲು ಪ್ರತಿಪಕ್ಷಗಳು ಯತ್ನಿಸುತ್ತಿವೆ. ಯತ್ನಿಸುವ ಮೂಲಕ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ದಾಳಿ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.


























