
ಬೆಂಗಳೂರು, ಸೆ. ೧೨- ರಾಜ್ಯದ ಲೋಕೋಪಯೋಗಿ ಇಲಾಖೆಯ ಗುತ್ತಿಗೆಗಳ ಮೂಲಕ ಸಂಗ್ರಹಿಸಿದ ಹಣವನ್ನು ವಿದೇಶಿ ಗಣಿಗಾರಿಕೆಯಲ್ಲಿ ಆಸ್ತಿಗಳನ್ನಾಡಗಿ ಪರಿವರ್ತಿಸಿದ ಆರೋಪ ಎದುರಿಸುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಇಡಿ ತನಿಖೆ ಪೂರ್ಣಗೊಂಡು ಅವರು ನಿರ್ದೋಷಿ ಎಂದು ಸಾಬೀತಾಗುವವರೆಗೂ ಸಚಿವ ಸತೀಶ್ ಜಾರಕಿಹೊಳಿ ಅವರು ಸಚಿವ ಸ್ಥಾನದಲ್ಲಿ ಮುಂದುವರೆಯುವುದು ಸಾಧ್ಯವಿಲ್ಲ. ತಕ್ಷಣ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ
ಕರ್ನಾಟಕ ಲೋಕಪಯೋಗಿ ಇಲಾಖೆಯ ಲಂಚದ ಹಣ ಆಫ್ರಿಕಾದಲ್ಲಿ ಚಿನ್ನದ ಗಣಿಗಳನ್ನು ಖರೀದಿಸಲು ಬಳಕೆಯಾಯಿತಾ. ಕಾಂಗ್ರೆಸ್‌ನ ದುರಾಸೆಗೆ ಮಿತಿಯೇ ಇಲ್ಲವೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಜಾರಿ ನಿರ್ದೇಶನಾಲಯದ ಪತ್ರಿಕಾ ಹೇಳಿಕೆಯೂ ಕರ್ನಾಟಕದಲ್ಲಿನ ರಾಹುಲ್‌ಗಾಂಧಿ ಅವರ ಎಟಿಎಂ ಸರ್ಕಾರದ ಮೇಲೆ ಗಂಭೀರ ಅನುಮಾನದ ಕಾರ್ಮೋಡವನ್ನು ಸೃಷ್ಟಿಸಿದೆ. ಇಡಿಯ ಹೇಳಿಕೆಗಳು ಬೆಚ್ಚಿ ಬೀಳಿಸುವಂತಿವೆ. ಈ ಹಣ ಎಲ್ಲಿಂದ ಬಂತು, ಇದನ್ನು ಸಂಗ್ರಹಿಸಿದವರು ಯಾರು, ಇದನ್ನು ವಿದೇಶಕ್ಕೆ ಸಾಗಿಸಿದವರು ಯಾರು ಮತ್ತು ಅಂತಿಮವಾಗಿ ಲಾಭ ಪಡೆದವರು ಯಾರು ಎಂಬ ಪ್ರಶ್ನೆಗೆಳಿಗೆ ಉತ್ತರ ಬೇಕಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಲೋಕೋಪಯೋಗಿ ಇಲಾಖೆಯ ಗುತ್ತಿಗೆಗಳಿಂದ ಹಿಡಿದು ಆಫ್ರಿಕಾದ ಚಿನ್ನದ ಗಣಿಗಳವರೆಗೆ ಇಡಿ ಸೂಚಿಸಿರುವ ಈ ಹಣದ ಅರಿವಿನ ಜಾಡು ಗಂಭೀರ ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕವು ಕಾಂಗ್ರೆಸ್ ಹೈಕಮಾಂಡ್ ಅಥವಾ ನಿಮ್ಮ ಸಚಿವರು ಮತ್ತು ಅವರ ಕುಟುಂಬಗಳಿಗೆ ಎಟಿಎಂ ಅಲ್ಲ ಎಂದು ಅಶೋಕ್ ತಿಳಿಸಿದ್ದಾರೆ.
ಇಡಿ ದಾಳಿ ವೇಳೆ ಲೆಕ್ಕಕ್ಕೆ ಸಿಗದ ೩.೩ ಕೋಟಿ ರೂ.ಗಳಿಗೂ ಹೆಚ್ಚು ಭಾರತೀಯ ಕರೆನ್ಸಿ ವಿದೇಶಿ ಕರೆನ್ಸಿಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಕಾಂಗೋದಲ್ಲಿ ಗಣಿಗಾರಿಕೆಯಲ್ಲಿ ಜಾರಕಿಹೊಳಿ ಕುಟುಂಬಸ್ಥರು ಭಾಗಿಯಾಗಿರುವುದನ್ನು ಇಡಿ ಪತ್ತೆ ಹಚ್ಚಿದೆ. ಹಾಗಾಗಿ ಇಡಿ ತನಿಖೆ ಪೂರ್ಣಗೊಳ್ಳುವವರೆಗೂ ಸಚಿವ ಸತೀಶ್ ಜಾರಕಿಹೊಳಿ ಅವರು ಸಚಿವ ಸ್ಥಾನದಲ್ಲಿ ಮುಂದುವರೆಯಬಾರದು ಎಂದು ಅಶೋಕ್ ಒತ್ತಾಯಿಸಿದ್ದಾರೆ.
































