Home ಜಿಲ್ಲೆ ಕಲಬುರಗಿ ಖಾಸಗಿ ಅನುದಾನಿತ ಶಾಲೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಿಶೇಷ ಸದನ ಸಮಿತಿಯಿಂದ ಮಹತ್ವದ ಶಿಫಾರಸು; ಸರ್ಕಾರ ತಕ್ಷಣ...

ಖಾಸಗಿ ಅನುದಾನಿತ ಶಾಲೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಿಶೇಷ ಸದನ ಸಮಿತಿಯಿಂದ ಮಹತ್ವದ ಶಿಫಾರಸು; ಸರ್ಕಾರ ತಕ್ಷಣ ಆದೇಶ ಹೊರಡಿಸಲಿ : ಶಶೀಲ್ ನಮೋಶಿ

ಕಲಬುರಗಿ,ಸೆ 13: ರಾಜ್ಯದ ಖಾಸಗಿ ಹಾಗೂ ಅನುದಾನಿತ ಶಾಲೆಗಳು ವರ್ಷಗಳಿಂದ ಎದುರಿಸುತ್ತಿರುವ ಮಾನ್ಯತೆ ನವೀಕರಣ, ಅಗ್ನಿ ಸುರಕ್ಷತೆ, ಭೂ ಪರಿವರ್ತನೆ, ಶಿಕ್ಷಕರ ವೇತನ, ವಿದ್ಯಾರ್ಥಿಗಳ ಸಂಖ್ಯೆ, ಆರ್‍ಟಿಇ ಶುಲ್ಕ ಮರುಪಾವತಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಸದನ ಸಮಿತಿಯು ಮಹತ್ವದ ಶಿಫಾರಸುಗಳನ್ನು ಮಾಡಿದೆ.
ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಲಾದ ಈ ಶಿಫಾರಸುಗಳು ಜಾರಿಯಾದರೆ, ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಮುಂದುವರಿದಿರುವ ಆಡಳಿತಾತ್ಮಕ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹಾಗೂ ಈ ಸಮೀತಿಯ ಮುಖ್ಯ ಸದಸ್ ಶಶೀಲ್ ಜಿ. ನಮೋಶಿ ಹೇಳಿದ್ದಾರೆ.
ಮಾನ್ಯತೆ ನವೀಕರಣಕ್ಕೆ ಸರಳ ನಿಯಮ
ಖಾಸಗಿ ಶಾಲೆಗಳ ಮಾನ್ಯತೆ ನವೀಕರಣದ ಸಂದರ್ಭದಲ್ಲಿ ಕೇಳಲಾಗುತ್ತಿರುವ ಅನಗತ್ಯ ದಾಖಲೆಗಳ ಹೊರೆಯನ್ನು ಕಡಿಮೆ ಮಾಡಿ, ಹಳೆಯ ಹಾಗೂ ಹೊಸ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕ ಹಾಗೂ ಸರಳ ನಿಯಮ ರೂಪಿಸುವಂತೆ ಸಮಿತಿ ಶಿಫಾರಸು ಮಾಡಿದೆ.
ಇದು ಸಣ್ಣಪುಟ್ಟ ತಾಂತ್ರಿಕ ಕಾರಣಗಳಿಂದ ವರ್ಷಗಟ್ಟಲೆ ಕಚೇರಿಗಳ ಸುತ್ತ ಅಲೆದಾಡಬೇಕಾಗಿರುವ ಶಿಕ್ಷಣ ಸಂಸ್ಥೆಗಳಿಗೆ ದೊಡ್ಡ ಮಟ್ಟದ ಪರಿಹಾರವಾಗಲಿದೆ.
ಅಗ್ನಿ ಸುರಕ್ಷತಾ ಶುಲ್ಕ ?20 ಸಾವಿರದಿಂದ ?5 ಸಾವಿರಕ್ಕೆ
2017-18ಕ್ಕಿಂತ ಮೊದಲು ಆರಂಭವಾದ 15 ಮೀಟರ್‍ಗಿಂತ ಕಡಿಮೆ ಎತ್ತರದ ಶಾಲಾ ಕಟ್ಟಡಗಳಿಗೆ ಅಗ್ನಿಶಾಮಕ ನಿರಾಕ್ಷೇಪಣಾ ಪತ್ರದ ನಿಯಮದಲ್ಲಿ ಪ್ರಾಯೋಗಿಕ ಸಡಿಲಿಕೆ ತರಲು ಸಮಿತಿ ಶಿಫಾರಸು ಮಾಡಿದೆ.
ಅಗ್ನಿ ಸುರಕ್ಷತಾ ಪ್ರಮಾಣಪತ್ರದ ಶುಲ್ಕವನ್ನು ?20,000ರಿಂದ ?5,000ಕ್ಕೆ ಇಳಿಸುವುದು ಹಾಗೂ ಪ್ರಮಾಣಪತ್ರದ ಅವಧಿಯನ್ನು 5 ವರ್ಷದಿಂದ 10 ವರ್ಷಕ್ಕೆ ಹೆಚ್ಚಿಸುವುದು ಕೂಡ ಶಿಫಾರಸುಗಳಲ್ಲಿದೆ.
ಶಿಕ್ಷಕರ ವೇತನ ತಡೆಗೆ ಇನ್ನು ಅವಕಾಶವಿಲ್ಲ
ಮಾನ್ಯತೆ ನವೀಕರಣದಂತಹ ಸಣ್ಣ ಕಾರಣಗಳನ್ನು ಮುಂದಿಟ್ಟುಕೊಂಡು ಶಿಕ್ಷಕರ ವೇತನವನ್ನು ತಡೆಹಿಡಿಯುವ ಕ್ರಮಕ್ಕೆ ಕಡಿವಾಣ ಹಾಕಬೇಕು ಎಂಬುದು ಸಮಿತಿಯ ಮತ್ತೊಂದು ಪ್ರಮುಖ ನಿಲುವಾಗಿದೆ.
ತಡೆಹಿಡಿದಿರುವ ಶಿಕ್ಷಕರ ವೇತನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕಟ್ಟುನಿಟ್ಟಿನ ಶಿಫಾರಸು ಮಾಡಲಾಗಿದೆ. ಇದು ಶಿಕ್ಷಕರ ಕುಟುಂಬಗಳ ಆರ್ಥಿಕ ಸಂಕಷ್ಟಕ್ಕೆ ನೇರ ಪರಿಹಾರ ಒದಗಿಸುವ ಕ್ರಮವಾಗಿದೆ.
25 ವಿದ್ಯಾರ್ಥಿಗಳ ನಿಯಮ 20ಕ್ಕೆ ಇಳಿಕೆ
ಜನನ ಪ್ರಮಾಣಪತ್ರ ಸೇರಿದಂತೆ ವಿವಿಧ ಕಾರಣಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವ ಅನುದಾನಿತ ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಕನಿಷ್ಠ ವಿದ್ಯಾರ್ಥಿಗಳ ಸಂಖ್ಯೆಯನ್ನು 25ರಿಂದ 20ಕ್ಕೆ ಪರಿಷ್ಕರಿಸಲು ಸಮಿತಿ ಶಿಫಾರಸು ಮಾಡಿದೆ.
ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿರುವ ಶಾಲೆಗಳನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದೆ.
ವಿದ್ಯಾರ್ಥಿಗಳ ಭವಿಷ್ಯಕ್ಕೆ ತಾಂತ್ರಿಕ ಅಡೆತಡೆ ಬೇಡ
ಮಾನ್ಯತೆ ನವೀಕರಣದ ತಾಂತ್ರಿಕ ಸಮಸ್ಯೆಯಿಂದ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಪರೀಕ್ಷೆಗೆ ತೊಂದರೆಯಾಗದಂತೆ ತಾತ್ಕಾಲಿಕ ಮಾನ್ಯತೆ ನೀಡಬೇಕು. ವಿದ್ಯಾರ್ಥಿಗಳು ಅದೇ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಆರ್ ಟಿ ಇ ಬಾಕಿ ಹಣ – ಓ ಟಿ ಎಸ್ ಮೂಲಕ ಪರಿಹಾರ
ಆರ್‍ಟಿಇ ಅಡಿಯಲ್ಲಿ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳಿಗೆ ಬಾಕಿ ಇರುವ ಶುಲ್ಕ ಮರುಪಾವತಿಯನ್ನು ತಕ್ಷಣ ಮಾಡಬೇಕು. ಹಳೆಯ ವರ್ಷಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದ ಬಾಕಿ ಪ್ರಕರಣಗಳನ್ನು ಒಂದೇ ಬಾರಿ ಪರಿಹರಿಸಲು ಒಂದು ಬಾರಿ ಅವಕಾಶ ಕಲ್ಪಿಸಬೇಕು ಎಂಬ ಶಿಫಾರಸನ್ನೂ ಮಾಡಲಾಗಿದೆ.
ಹಳೆಯ ಕಟ್ಟಡಗಳಿಗೂ ಪ್ರಾಯೋಗಿಕ ಪರಿಹಾರ
ಹಳೆಯ ಶಾಲಾ ಕಟ್ಟಡಗಳ ಭದ್ರತಾ ಪ್ರಮಾಣಪತ್ರ ವಿಚಾರದಲ್ಲಿಯೂ ನಿಯಮಗಳನ್ನು ಪ್ರಾಯೋಗಿಕವಾಗಿ ಸರಳಗೊಳಿಸುವಂತೆ ಸಮಿತಿ ಸಲಹೆ ನೀಡಿದೆ. ನೋಂದಾಯಿತ ಸಿವಿಲ್ ಎಂಜಿನಿಯರ್‍ಗಳ ವರದಿಯನ್ನು ಪರಿಗಣಿಸುವಂತೆ ಶಿಫಾರಸು ಮಾಡಲಾಗಿದೆ.
“ಶಿಕ್ಷಕರ ಹಿತವೇ ನಮ್ಮ ಹೋರಾಟದ ಕೇಂದ್ರಬಿಂದು”
“ಶಿಕ್ಷಣ ಕ್ಷೇತ್ರದಲ್ಲಿ ವರ್ಷಗಳಿಂದ ಬೇರೂರಿರುವ ಅನಗತ್ಯ ಗೊಂದಲಗಳಿಗೆ ಶಾಶ್ವತ ಪರಿಹಾರ ನೀಡುವುದು ನಮ್ಮ ಉದ್ದೇಶ. ಶಾಲೆಗಳು ನಿಯಮಗಳ ಹೆಸರಿನಲ್ಲಿ ಅನಗತ್ಯ ಆಡಳಿತಾತ್ಮಕ ಸಂಕಷ್ಟಕ್ಕೆ ಸಿಲುಕಬಾರದು. ಶಿಕ್ಷಕರ ವೇತನ ತಡೆಯಬಾರದು. ಯಾವುದೇ ತಾಂತ್ರಿಕ ಕಾರಣದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಬಾರದು. ಶಿಕ್ಷಣ ಸಂಸ್ಥೆಗಳು ನೆಮ್ಮದಿಯಿಂದ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣವಾಗಬೇಕು,” ಎಂದು ಶಶೀಲ್ ಜಿ. ನಮೋಶಿ ಹೇಳಿದ್ದಾರೆ.
“ವಿಶೇಷ ಸದನ ಸಮಿತಿಯ ಶಿಫಾರಸುಗಳು ಕೇವಲ ಕಾಗದದ ವರದಿಯಾಗಿ ಉಳಿಯದೆ, ಸರ್ಕಾರದ ನೀತಿ ಮತ್ತು ಅಧಿಕೃತ ಆದೇಶಗಳ ಮೂಲಕ ನೆಲಮಟ್ಟದಲ್ಲಿ ಜಾರಿಯಾಗಬೇಕು. ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ವರದಿಯನ್ನು ಸಂಪೂರ್ಣವಾಗಿ ಅಂಗೀಕರಿಸಿ, ವಿಳಂಬವಿಲ್ಲದೆ ಆದೇಶ ಹೊರಡಿಸಬೇಕು,” ಎಂದು ಅವರು ಆಗ್ರಹಿಸಿದ್ದಾರೆ.
ಶಿಕ್ಷಕರ ಪರ ಧ್ವನಿ ಇನ್ನಷ್ಟು ಗಟ್ಟಿಯಾಗಲಿ
ಶಿಕ್ಷಕರ ಸಮಸ್ಯೆಗಳನ್ನು ಸದನದೊಳಗೆ ಪ್ರಸ್ತಾಪಿಸುವುದಷ್ಟೇ ಅಲ್ಲದೆ, ಅವುಗಳಿಗೆ ನೀತಿ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕು ಎಂಬ ನಿಲುವನ್ನು ಶಶೀಲ್ ಜಿ. ನಮೋಶಿ ಸ್ಪಷ್ಟಪಡಿಸಿದ್ದಾರೆ.
ಈ ಶಿಫಾರಸುಗಳು ಜಾರಿಯಾದರೆ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳು ವರ್ಷಗಳಿಂದ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಒಂದೇ ಹಂತದಲ್ಲಿ ಪರಿಹಾರ ದೊರೆಯುವ ಸಾಧ್ಯತೆ ಇದೆ. ಎಂದು ಹೇಳಿದ್ದಾರೆ