Home ಮುಖಪುಟ ಸುದ್ದಿ ಗಣೇಶೋತ್ಸವ ಆಚರಣೆಗೆ ಗೋಗರೆಯಬೇಕೆ

ಗಣೇಶೋತ್ಸವ ಆಚರಣೆಗೆ ಗೋಗರೆಯಬೇಕೆ

ಬೆಂಗಳೂರು, ಸೆ. ೧೩- ನಮ್ಮದೇ ನೆಲದಲ್ಲಿ ಅದರಲ್ಲೂ ಸಂಸ್ಕೃತಿಗೆ ಹೆಸರಾದ ಕನ್ನಡ ನಾಡಿನಲ್ಲಿ ಗಣೇಶೋತ್ಸವ ಆಚರಣೆಗೆ ಹಿಂದೂಗಳು ಗೋಗರೆಯಬೇಕೇ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.


ರಾಜ್ಯದಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಹಿಂದೂಗಳು ಹಿಂದೂ-ಮುಂದು ನೋಡುವಂತಹ ಪರಿಸ್ಥಿತಿ ತಲೆದೋರಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದು ಖಂಡಿಸಿದ್ದಾರೆ.


ಟಿ.ನರಸೀಪುರ ಇನ್ಸ್‌ಪೆಕ್ಟರ್, ಗಣೇಶ ಸಮಿತಿ ಯುವಕರಿಗೆ ಬಹಿರಂಗ ಧಮ್ಕಿ ಹಾಕಿದ್ದಾರೆ. ಇದಕ್ಕೆ ಕುಮ್ಮಕ್ಕು ನೀಡಿದವರು ಯಾರು? ಇದು ಗೃಹ ಸಚಿವರು ನೀಡಿದ ಅಧಿಕಾರವೋ ಅಥವಾ ಸಿಎಂ ಡಿ.ಕೆ.ಶಿವಕುಮಾರ್ ಹೊರಡಿಸಿದ ತುಷ್ಟೀಕರಣ ರಾಜಕಾರಣದ ಫರ್ಮಾನಾ? ಎಂದು ಜೋಶಿ ಪ್ರಶ್ನಿಸಿದ್ದಾರೆ.


ಸರ್ವ ಸಮಾನತೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಅಧಿಕಾರಿಯೇ ಹೀಗೆ ಒಂದು ಸಮುದಾಯದ ಏಜೆಂಟ್‌ನಂತೆ ವರ್ತಿಸಿ, ಬೆದರಿಸುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ಷೇಪಿಸಿದ್ದಾರೆ.ನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.


ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಹಿಂದೂ ಹಬ್ಬಗಳ ಆಚರಣೆಯನ್ನೇ ನಿಯಂತ್ರಿಸಲು ಹೊರಟಿರುವುದು ಈ ಸರ್ಕಾರದ ಹಿಂದೂ ವಿರೋಧಿ ಧೋರಣೆಗೆ ಹಿಡಿದ ಕನ್ನಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ನಮ್ಮ ಸನಾತನ ಸಂಸ್ಕೃತಿ, ಆಚರಣೆ ಹಾಗೂ ಭಕ್ತಿ-ಭಾವದ ಮೇಲೆ ಧಕ್ಕೆ ತರಲು ಯತ್ನಿಸಿದರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.