
ಕಲಬುರಗಿ, ಸೆ.13:ಟಿವಿಯಲ್ಲಿ ಮನುಷ್ಯ ತಾನು ಇರುವುದಕ್ಕಿಂತ ಚಿಕ್ಕವನಾಗಿ ಕಾಣುತ್ತಾನೆ, ಸಿನಿಮಾದ ಪರದೆಯಲ್ಲಿ ದೊಡ್ಡವನಾಗಿ ಕಾಣುತ್ತಾನೆ, ಆದರೆ ರಂಗಭೂಮಿಯ ಮೇಲೆ ಮಾತ್ರ ಮನುಷ್ಯ ಮನುಷ್ಯನಾಗಿ ಕಾಣುತ್ತಾನೆ. ಜೀವಂತ ಸಂವಹನ ಹಾಗೂ ಸ್ವಯಂ ಬದಲಾವಣೆಯ ವಿವೇಕವನ್ನು ರಂಗಭೂಮಿ ಕಲಿಸುತ್ತದೆ ಎಂದು ಡೆಸ್ಕ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಡಾ. ಪ್ರಭಾಕರ ಜೋಶಿ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಅಡ್ವೋಕೇಟ್ಸ್ ಕಾಲನಿಯ ನೂತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ *ಸಾಪ್ತಾಹಿಕ ಸತ್ಸಂಗ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ರಂಗಭೂಮಿಯಲ್ಲಿ ಧರ್ಮದ ಪಾತ್ರ ಎಂಬವಿಷಯ ಕುರಿತು ಉಪನ್ಯಾಸ ನೀಡುತ್ತಿದ್ದರು. ರಂಗಭೂಮಿ ಮತ್ತು ಧರ್ಮದ ನಡುವಿನ ಅವಿನಾಭಾವ ಸಂಬಂಧವನ್ನು ವಿಶ್ಲೇಷಿಸಿದ ಅವರು, “ಧರ್ಮ ಬಿಟ್ಟು ಜಗತ್ತಿನಲ್ಲಿ ಬೇರೆ ಏನೂ ಇಲ್ಲ. ಮನುಷ್ಯನ ದೇಹಕ್ಕೂ ಒಂದು ಧರ್ಮವಿದ್ದು, ಆ ದೇಹ ಧರ್ಮವನ್ನು ಮೀರಿ ಏನನ್ನೂ ಮಾಡಲು ಸಾಧ್ಯವಿಲ್ಲ. ಧರ್ಮದ ಹಾದಿಯಲ್ಲಿ ನಡೆದವರು ಬೆಳಕನ್ನು ಕಾಣುತ್ತಾರೆ, ಹಾದಿ ತಪ್ಪಿದಾಗ ಅದೇ ಬೆಳಕು ಬೆಂಕಿ ಯಾಗುತ್ತದೆ. ಜಗತ್ತಿನ ಉದ್ದಾರಕ್ಕೆ ಧರ್ಮ ಎಲ್ಲ ಕಾಲಕ್ಕೂ ಅಗತ್ಯ,” ಎಂದು ಪ್ರತಿಪಾದಿಸಿದರು.
ಇಡೀ ವಿಶ್ವವೇ ಒಂದು ರಂಗಭೂಮಿ. ಪಾಶ್ಚಾತ್ಯರ ದೃಷ್ಟಿಕೋನದಲ್ಲಿ ರಂಗಭೂಮಿಗೆ ಇತಿಹಾಸವಿದ್ದರೆ, ಭಾರತೀಯರಿಗೆ ಪುರಾಣ ಪ್ರಜ್ಞೆಯ ಹಿನ್ನೆಲೆಯಿದೆ. ಕೃತಯುಗ ಮುಗಿದು ತ್ರೇತಾಯುಗ ಆರಂಭವಾಗುವಾಗ ಸಮಾಜದಲ್ಲಿನ ದುರ್ವರ್ತನೆ ಗಳನ್ನು ತಡೆಯಲು ಮತ್ತು ಜನಸಾಮಾನ್ಯರಿಗೆ ತಿಳುವಳಿಕೆ ನೀಡಲು ಬ್ರಹ್ಮನು ಭರತ ಮುನಿಯ ಮೂಲಕ ಐದನೇ ವೇದವಾದ ‘ನಾಟ್ಯ ಶಾಸ್ತ್ರ’ ವನ್ನು ಸೃಷ್ಟಿಸಿದನು. ದೇವ-ದಾನವರ ನಡುವಿನ ‘ಸಮುದ್ರ ಮಥನ’ದ ಮೂಲಕವೇ ರಂಗಭೂಮಿಯ ಪರಿಕಲ್ಪನೆ ಬೆಳೆದುಬಂದಿದೆ. ಕಷ್ಟಗಳ ಸಂಘರ್ಷದ ನಂತರವೇ ಅಮೃತ ಅಥವಾ ಮೋಕ್ಷ ದೊರೆಯುತ್ತದೆ ಎನ್ನುವುದು ಇದರ ಸಂಕೇತ ಎಂದು ಅವರು ವಿವರಿಸಿದರು.
ನಾಗರಿಕತೆಗೂ ಮುನ್ನ ಕಾಡಿನಲ್ಲಿದ್ದ ಮನುಷ್ಯರು ಬೇಟೆಯಾಡಿ ಬಂದಾಗ ಬೆಂಕಿಯ ಸುತ್ತ ಕುಳಿತು ಮೂಕಾಭಿನಯದ ಮೂಲಕ ಬೇಟೆಯ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಅಲ್ಲಿಂದ ಆರಂಭವಾದ ನಾಟಕ ಕಲೆ, ಇಂದು ವಿಸ್ತಾರವಾಗಿ ಬೆಳೆದಿದೆ. ಗ್ರಾಮೀಣ ಭಾಗದ ದೊಡ್ಡಾಟ , ಬಯಲಾಟಗಳಲ್ಲಿ ಕಾಳಗ ಮತ್ತು ಕಲ್ಯಾಣದ ಕಥೆಗಳು ಇಂದಿಗೂ ಪ್ರಮುಖ ಆಕರ್ಷಣೆಯಾಗಿವೆ ಎಂದ ಅವರು ನಮ್ಮ ಸುತ್ತ ಮುತ್ತ ನಡೆಯುವ ಪ್ರತಿಯೊಂದು ಘಟನೆ ಕೂಡ ರಂಗಭೂಮಿಯ ವಸ್ತು ವಾಗಿ ಪ್ರತಿ ಫಲಿತವಾಗಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ವನ್ನು ನೀಡಬಹುದು. ಒಳ್ಳೆಯ ಸಂಸ್ಕಾರ ನೀಡಲು ರಂಗಭೂಮಿ ಒಂದು ಪರಿಣಾಮ ಕಾರಿ ಹಾಗೂ ವಾಸ್ತವಿಕ ಮಾಧ್ಯಮ ಎಂದು ಒತ್ತಿ ಹೇಳಿದರು.
ಆರಂಭದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಟ್ರಸ್ಟ್ ಗೌರವಾಧ್ಯಕ್ಷ ಜಿ ಎಸ್ ಬಿರಾದಾರ ಅವರು ಸ್ವಾಗತಿಸಿದರು. ಟ್ರಸ್ಟ್‍ನ ಅಧ್ಯಕ್ಷ ಮಂಜುನಾಥ್ ಜೇವರಗಿ ಅವರು ವಂದಿಸಿದರು. ಸೋಮಶೇಖರ ಎಸ್ ರುಳಿ ಅವರು ಕಾರ್ಯಕ್ರಮನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸುಭಾಷ್ ಕೊಣಿನ್, ಅಶೋಕ ಜೇವರ್ಗಿ, ವಿಜಯಕುಮಾರ ರೋಣದ, ಜಗದೇವಪ್ಪ ಭೂಸಾರೆ, ಕಾರಭಾರಿ , ಶೇರಿಕಾರ , ಜಗನ್ನಾಥ ರೆಡ್ಡಿ,ಚಂದ್ರಶೇಖರ್ ಕೊಂಕನಳ್ಳಿ, ಭೀಮಾಶಂಕರ ಇಂಗಳೇಶ್ವರ, ಶ್ರೀಶೈಲ ಪೂಜಾರಿ, ಮಹದೇವಪ್ಪ, ಮಹಿಳಾ ಸಂಘದ ಸದಸ್ಯೆಯರು, ಕಾಲನಿಯ ಸದ್ಭಕ್ತರು ಭಾಗವಹಿಸಿದ್ದರು.





























