
ಬೆಂಗಳೂರು, ಅ. ೮- ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿದ ಘಟನೆ, ರಾಜ್ಯದಲ್ಲಿ ಆರೋಪಿತ ಮತಗಳ್ಳತನ ಹಾಗೂ ಇತರ ರಾಜಕೀಯ ವಿಚಾರಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಪಕ್ಷ ನಾಯಕರಾದ ರಾಹುಲ್‌ಗಾಂಧಿ ಹಾಗೂ ಚುನಾಯಿತ ಜನಪ್ರತಿನಿಧಿಗಳ ಮೇಲಿನ ಪೊಲೀಸ್ ದಬ್ಬಾಳಿಕೆಯನ್ನು ಖಂಡಿಸಿ, ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ಹಮ್ಮಿಕೊಂಡಿದ್ದ ‘ಪ್ರಜಾಪ್ರಭುತ್ವದ ಕರಾಳ ದಿನ’ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ
ಹರಿಪ್ರಸಾದ್ ಅವರು ದೆಹಲಿ ಪೊಲೀಸರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ರಾಹುಲ್ ಮತ್ತು ಪ್ರಿಯಾಂಕಾ ಅವರನ್ನು ಬಂಧಿಸಿದ್ದು ಮಾತ್ರವಲ್ಲದೆ, ಪ್ರತಿಭಟನೆ ವೇಳೆ ಅವರನ್ನು ಎಳೆದಾಡಲಾಯಿತು. ದೆಹಲಿ ಪೊಲೀಸರು ಗೂಂಡಾವರ್ತನೆ ತೋರಿದ್ದಾರೆ. ಕೆಲವು ನಿಜವಾದ ಗೂಂಡಾಗಳನ್ನು ಬಿಟ್ಟು, ಅವರಿಗೆ ಪೊಲೀಸ್ ಸಮವಸ್ತ್ರ ತೊಡಿಸಲಾಗಿದೆ” ಎಂದು ಹೇಳಿದ್ದಾರೆ. “ರಾಹುಲ್ ಗಾಂಧಿಯವರು ಪ್ರತಿಪಕ್ಷ ನಾಯಕರಾಗಿದ್ದು, ಎಲ್ಲದರ ಬಗ್ಗೆಯೂ ಮಾತನಾಡುವ ಹಕ್ಕಿದೆ. ಆದರೆ ಅವರನ್ನು ವಶಕ್ಕೆ ಪಡೆಯಲು ಪ್ರಯತ್ನಿಸಲಾಯಿತು. ದುರದೃಷ್ಟವಶಾತ್, ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಮತಗಳ್ಳತನದ ವಿರುದ್ಧ ಪಾದಯಾತ್ರೆ ನಡೆಸುವುದಾಗಿ ಹರಿಪ್ರಸಾದ್ ಘೋಷಿಸಿದ್ದಾರೆ. “ವಿಜಯಪುರದಲ್ಲಿ ಮೂವರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಬದುಕಿದ್ದರೂ ಸತ್ತಿದ್ದಾರೆಂದು ತೋರಿಸಲಾಗಿದೆ. ಮಲ್ಲೇಶ್ವರಂನಲ್ಲಿ ೧೨೧೧ ಮತಗಳನ್ನು ಗುರುತಿಸಿದ್ದೇವೆ. ಬೃಹತ್ ಸಂಖ್ಯೆಯಲ್ಲಿ ಮತಗಳನ್ನು ಡಿಲೀಟ್ ಮಾಡಲಾಗಿದೆ. ಬಲವಂತವಾಗಿ ಫಾರಂ ೬ ಕೊಡಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ ೧೦ ರಿಂದ ೨೦ ರವರೆಗೆ ಪ್ರತಿ ವಾರ್ಡ್ ಮತ್ತು ಬ್ಲಾಕ್ ಗಳಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಅಕ್ಟೋಬರ್ ೨೪ ರಿಂದ ಮತ್ತಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನವೆಂಬರ್ ೧ ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಷ್ಟ್ರ ಮಟ್ಟದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಹರಿಪ್ರಸಾದ್ ಘೋಷಿಸಿದ್ದಾರೆ.
ಜ್ಞಾನೇಶ್ ಕುಮಾರ್ ಅವರಿಗೆ ’ಝಡ್ ಪ್ಲಸ್’ ಭದ್ರತೆ ನೀಡಿರುವುದನ್ನು ಪ್ರಶ್ನಿಸಿದ್ದಾರೆ. ” ಭಾಗವತ್ ಅವರಿಗೇ ಭದ್ರತೆ ಕೊಟ್ಟಿದ್ದಾರೆ. ಇನ್ನು ಇವರಿಗೆ ಕೊಡುವುದಿಲ್ಲವೇ?” ಎಂದು ಕೇಳಿದ್ದಾರೆ. ಫಾರಂ ೬ ಮತ್ತು ಫಾರಂ ೭ ವಿಚಾರದಲ್ಲಿಯೂ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ. “ಫಾರಂ ೭ ಅನ್ನು ಯಾರು ಮುದ್ರಿಸಿದ್ದಾರೆ ಎಂಬುದು ದೊಡ್ಡ ಅಪರಾಧ. ಸರ್ಕಾರದ ದಾಖಲೆಯನ್ನು ನಕಲಿ ಮಾಡುವಂತಿಲ್ಲ. ಅದನ್ನು ಬಿಜೆಪಿಯವರೇ ಮುದ್ರಿಸಿರಬೇಕು ಅಥವಾ ಚುನಾವಣಾ ಆಯೋಗವೇ ಮುದ್ರಿಸಿರಬೇಕು” ಎಂದು ಅವರು ಪ್ರಶ್ನಿಸಿದ್ದಾರೆ.
ಸ್ಟಿಂಗ್ ಆಪರೇಷನ್ ಮತ್ತು ರಾಜಕೀಯ ವ್ಯವಹಾರ ಸಮಿತಿ:
ಸ್ಟಿಂಗ್ ಆಪರೇಷನ್ ಕುರಿತು ಮಾತನಾಡಿದ ಅವರು, “ನಾನು ಸುಳ್ಳು ಹೇಳುವುದಿಲ್ಲ. ಸಿಎಂ ಏನು ಹೇಳಿದ್ದಾರೆಂದು ಅವರನ್ನೇ ಕೇಳಿ. ನಾನು ತ್ರಿಕಾಲ ಜ್ಞಾನಿಯಲ್ಲ. ಮೊದಲು ಜ್ಞಾನೇಶ್ ಕುಮಾರ್ ಅವರನ್ನು ನೋಡಿ, ಆಮೇಲೆ ನಿಮ್ಮ ಸ್ಟಿಂಗ್ ಆಪರೇಷನ್ ಬಗ್ಗೆ ಹೇಳುತ್ತೇನೆ” ಎಂದು ಹೇಳಿದ್ದಾರೆ.
ರಾಜಕೀಯ ವ್ಯವಹಾರ ಸಮಿತಿ (ಪೊಲಿಟಿಕಲ್ ಆಫೇರ್ಸ್ ಕಮಿಟಿ) ರಚನೆ ಕುರಿತು ಮಾತನಾಡಿದ ಅವರು, “ಸ್ಪೆಕ್ಯುಲೇಷನ್ ಯಾರೋ ಮಾಡಿರಬಹುದು. ಮಾಡಿ ಎಂದು ನನಗೆ ಪತ್ರ ನೀಡಿದ್ದು ಡಿ.ಕೆ.ಶಿವಕುಮಾರ್ ಅವರು. ಅದು ದೆಹಲಿಯಿಂದ ಬಂದಿದೆ. ಯಾರು ಏನು ಅನ್ನುತ್ತಾರೆಂಬುದು ನನಗೆ ಗೊತ್ತಿದೆ. ಎಲ್ಲಾ ರಾಜ್ಯಗಳಲ್ಲೂ ರಾಜಕೀಯ ವ್ಯವಹಾರ ಸಮಿತಿ ಇದೆ. ಇಲ್ಲಿಯೂ ಆಗಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.























