
ಗೋವಾ, ಅ.೮-ಮನೋಜ್ಞ ಅಭಿನಯಕ್ಕೆ ಹಾಗೂ ವಿಶಿಷ್ಟ ಶೈಲಿಯ ಪಾತ್ರಕ್ಕೆ ಛಾಪು ಮೂಡಿಸಿದ್ದ ಖ್ಯಾತ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಟ, ನಿರ್ದೇಶಕ ಹಾಗೂ ಬರಹಗಾರ ನಾನಾ ಪಾಟೇಕರ್ (೭೫) ಅವರು ಇಂದು ಬೆಳಗ್ಗೆ ಗೋವಾದ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗೋವಾದ ಡೊನಾ ಪೌಲಾದಲ್ಲಿರುವ ನಿವಾಸದಲ್ಲಿ ನಾನಾ ಪಾಟೇಕರ್ ಅವರು ಅಸ್ವಸ್ಥರಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್ ಈ ಕುರಿತು ಮಾಹಿತಿ ನೀಡಿ ಇಂದು ಬೆಳಗ್ಗೆ ಸುಮಾರು ೫.೨೦ಕ್ಕೆ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರನ್ನು ಉಳಿಸಲು ಸುಮಾರು ೪೫ ನಿಮಿಷಗಳ ಕಾಲ ಸ ಚಿಕಿತ್ಸೆ ನಡೆಸಿದರೂ ಫಲಕಾರಿಯಾಗಲಿಲ್ಲ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಡಿಕೋ-ಲೀಗಲ್ ಕೇಸ್ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.
ಕುಟುಂಬಸ್ಥರು ಗೋವಾಕ್ಕೆ ತೆರಳಿದ್ದಾರೆ
ನಾನಾ ಪಾಟೇಕರ್ ಅವರ ಪುತ್ರ ಮಲ್ಹಾರ್ ಪಾಟೇಕರ್ ಅವರು ತಂದೆಯ ನಿಧನವನ್ನು ಖಚಿತಪಡಿಸಿದ್ದಾರೆ. ಕುಟುಂಬಸ್ಥರು ಗೋವಾಕ್ಕೆ ತೆರಳಿದ್ದು, ನಾನಾ ಪಾಟೇಕರ್ ಅವರು ವೈಯಕ್ತಿಕ ಕೆಲಸದ ನಿಮಿತ್ತ ಗೋವಾದಲ್ಲಿದ್ದರು ಎಂದು ತಿಳಿಸಿದ್ದಾರೆ.
ನಾನಾ ಪಾಟೇಕರ್ ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನದ ಬಳಿಕ ಪುಣೆಗೆ ತರಲಾಗುವುದು ಎಂದು ಮಲ್ಹಾರ್ ತಿಳಿಸಿದ್ದಾರೆ.
ಹಲವು ದಶಕಗಳ ಅದ್ಭುತ ಸಿನಿ ಪಯಣ
ನಾನಾ ಪಾಟೇಕರ್ ಅವರ ಮೂಲ ಹೆಸರು ವಿಶ್ವನಾಥ ಪಾಟೇಕರ್. ೧೯೫೧ರ ಜನವರಿ ೧ರಂದು ಮಹಾರಾಷ್ಟ್ರದ ಮುರುಡ್-ಜಂಜೀರಾದಲ್ಲಿ ಜನಿಸಿದ ಅವರು ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ನಟ, ನಿರ್ದೇಶಕ ಮತ್ತು ಬರಹಗಾರರಾಗಿ ತಮ್ಮದೇ ಛಾಪು ಮೂಡಿಸಿದ್ದರು.
ಬಡತನದ ಹಿನ್ನೆಲೆಯಲ್ಲಿ ಬೆಳೆದ ನಾನಾ ಪಾಟೇಕರ್ ಅವರು ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡಲು ಆರಂಭಿಸಿದ್ದರು. ಮುಂಬೈನ ಚುನಾಭಟ್ಟಿ ಪ್ರದೇಶದಲ್ಲಿ ಸಿನಿಮಾ ಪೋಸ್ಟರ್‌ಗಳನ್ನು ಬಿಡಿಸುವ ಕೆಲಸವನ್ನೂ ಮಾಡಿದ್ದ ಅವರು ಆರಂಭಿಕ ದಿನಗಳಲ್ಲಿ ತಿಂಗಳಿಗೆ ಸುಮಾರು ೩೫ ರೂಪಾಯಿ ಗಳಿಸುತ್ತಿದ್ದರು.
೧೯೭೮ರಲ್ಲಿ ಬಿಡುಗಡೆಯಾದ ‘ಗಮನ್’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪ್ರವೇಶಿಸಿದರು. ಬಳಿಕ ‘ಪರಿಂಡಾ’, ‘ಅಂಗಾರ್’, ‘ತಿರಂಗಾ’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ಖಾಮೋಶಿ: ದಿ ಮ್ಯೂಸಿಕಲ್’, ‘ಶಕ್ತಿ’, ‘ಅಪಹರಣ’, ‘ರಾಜ್‌ನೀತಿ’, ‘ವೆಲ್‌ಕಮ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿದರು.
ಪ್ರಶಸ್ತಿಗಳ ಸರದಾರ
೧೯೮೯ರಲ್ಲಿ ಬಿಡುಗಡೆಯಾದ ‘ಪರಿಂದಾ’ ಚಿತ್ರ ನಾನಾ ಪಾಟೇಕರ್ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು.
‘ಕ್ರಾಂತಿವೀರ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು. ‘ಅಗ್ನಿಸಾಕ್ಷಿ’ ಚಿತ್ರಕ್ಕೂ ರಾಷ್ಟ್ರೀಯ ಪ್ರಶಸ್ತಿ ದೊರೆತಿತ್ತು.
ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ ಹಾಗೂ ಅತ್ಯುತ್ತಮ ಖಳನಟ ವಿಭಾಗಗಳಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದ ಕೆಲವೇ ನಟರಲ್ಲಿ ನಾನಾ ಪಾಟೇಕರ್ ಕೂಡ ಒಬ್ಬರು.
ತಮ್ಮ ವಿಭಿನ್ನ ಧ್ವನಿ, ತೀವ್ರ ಅಭಿನಯ ಮತ್ತು ವಿಶಿಷ್ಟ ಪರದೆಯ ವ್ಯಕ್ತಿತ್ವದಿಂದ ಭಾರತೀಯ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ಆಘಾತ ತಂದಿದೆ.
ಸರ್ಕಾರಿ ಗೌರಗಳೊಂದಿಗೆ ಅಂತ್ಯಕ್ರಿಯೆ
ಮಹಾರಾಷ್ಟ್ರ ಸರ್ಕಾರ ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆಯನ್ನು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸಲು ನಿರ್ಧರಿಸಿದೆ. ಮರಾಠಿ ರಂಗಭೂಮಿ ಹಾಗೂ ಹಿಂದಿ-ಮರಾಠಿ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶೀಷ್ ಶೆಲಾರ್ ತಿಳಿಸಿದ್ದಾರೆ.
ಪ್ರಧಾನಿ ಸಂತಾಪ
ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದು ಪಾತ್ರಕ್ಕೂ ಅವರು ಅದ್ಭುತ, ವೈವಿಧ್ಯತೆ ಮತ್ತು ಸೃಜನಶೀಲತೆಯನ್ನು ಪಾಟೇಕರ್ ನೀಡುತ್ತಿದ್ದರು. ಅವರು ನಿರ್ವಹಿಸಿದ ಪಾತ್ರಗಳು ಹಲವು ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯಲಿದೆ ಎಂದು ಮೋದಿ ತಿಳಿಸಿದ್ದಾರೆ.
ಹಿಂದಿ ಮತ್ತು ಮರಾಠಿ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾನಾ ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅವರು ಕಂಬನಿ ಮಿಡಿದಿದ್ದಾರೆ.


























