
ಬೆಂಗಳೂರು, ಅ. ೮- ಸಚಿವರುಗಳ ವಿರುದ್ಧ ರಹಸ್ಯ ಕಾರ್ಯಾಚರಣೆ ನಡೆಯಬಹುದು ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮನ್ನೇ ಕೆಲವರು ಟ್ರ್ಯಾಪ್ ಮಾಡಲು ಯತ್ನಿಸಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ ದೆಹಲಿಯಲ್ಲಿ ಇಂದು ನಡೆದಿರುವ ಜಿಎಸ್‌ಟಿ ಸಭೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಮುಖ್ಯಮಂತ್ರಿಯಾದ ನಂತರ ನನ್ನನ್ನ ಟ್ರ್ಯಾಪ್ ಮಾಡಲು ಯತ್ನಿಸಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ ಮುಖ್ಯಮಂತ್ರಿ ಇಂತಹ ಜವಾಬ್ದಾರಿ ಸ್ಥಾನದಲ್ಲಿ ಕುಳಿತು ನಾನು ಸುಮ್ಮನೆ ಮಾತನಾಡುವುದಿಲ್ಲ ಎಲ್ಲಾ ಸಾಕ್ಷಾಧಾರಗಳು ಇವೆ ಹಾಗಾಗಿಯೇ ನಾನು ನಮ್ಮ ಸಚಿವರಿಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ಕೊಟ್ಟಿದ್ದೇನೆ ಎಂದರು ತಮ್ಮ ಬಳಿ ತಮ್ಮನ್ನ ಟ್ರ್ಯಾಪ್ ಮಾಡಲು ಬಂದಿದ್ದವರ ಫೋಟೋ ಬೇಕಾದರೆ ಕೊಡುತ್ತೇನೆ ಚರ್ಚೆಗೆ ಎಂದು ಬಂದು ಏನೇನು ಮಾಡಿದ್ದಾರೆ ಎಲ್ಲವೂ ಗೊತ್ತಿದೆ ಇದರ ಹಿಂದಿನ ಪಿತಾಮಹ ಯಾರು ಯಾರು ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬ ಮಾಹಿತಿಯು ತಮ್ಮ ಬಳಿ ಇದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು ಎಸ್‌ಐಆರ್‌ನಲ್ಲಿ ಅರ್ಹ ಮತದಾರರನ್ನು ತೆಗೆದು ಹಾಕುವ ಕ್ರಿಮಿನಲ್ ಷಡ್ಯಂತ್ರವನ್ನು ಬಿಜೆಪಿ ನಾಯಕರು ನಡೆಸಿದ್ದು, ಈ ಬಗ್ಗೆ ತನಿಖೆ ನಡೆಸಿ ಆ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಯಾರೆಲ್ಲಾ ಬಿಜೆಪಿ ನಾಯಕರುಗಳು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದ್ದಾರೋ ಅವರೆಲ್ಲಾ ಈ ಕ್ರಿಮಿನಲ್ ಕುತಂತ್ರದಲ್ಲಿ ಭಾಗಿಯಾಗಿದ್ದಾರೆ ತಮ್ಮ ಹೆಸರು ಎಲ್ಲಿ ಬಹಿರಂಗ ಆಗುತ್ತೋ ಎಂದು ಈಗ ಈ ರೀತಿ ನಾಟಕವಾಡುತ್ತಿದ್ದಾರೆ ಎಂದು ಹರಿಹಾಯಿದರು .
ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮದ ಬಗ್ಗೆ ತಮ್ಮಲ್ಲಿರುವ ದಾಖಲೆಗಳನ್ನು ಪ್ರದರ್ಶಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈ ದಾಖಲೆಗಳನ್ನು ಪಕ್ಷದ ವರಿಷ್ಠರಿಗೂ ನೀಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ನಾಯಕರು ನಡೆಸಿರುವ ನೀಚತನದ ಕೆಲಸವನ್ನು ಬಹಿರಂಗಗೊಳಿಸುತ್ತೇನೆ. ಎಸ್‌ಐಆರ್‌ನಲ್ಲಿ ಅಕ್ರಮ ನಡೆಸಲು ಮುಂದಾಗಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಿನ್ನೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಎಸ್‌ಟಿ ಸಭೆ ಇದ್ದುದರಿಂದ ನಾನು ಭಾಗಿಯಾಗಲು ಸಾಧ್ಯವಾಗಲಿಲ್ಲ. ಅಲ್ಲಿ ನಮ್ಮ ನಾಯಕರುಗಳಾದ ರಾಹುಲ್‌ಗಾಂಧಿ ಮತ್ತು ಪ್ರಿಯಾಂಕ ವಾದ್ರಾ ರವರ ಜತೆ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಐಆರ್ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಬಾಂಗ್ಲಾ ವಲಸಿಗರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂಬ ಬಿಜೆಪಿ ಹೇಳಿಕೆಗೂ ಕಿಡಿಕಾರಿದ ಅವರು, ಬಾಂಗ್ಲಾದಿಂದ ಇವರನ್ನು ದೇಶಕ್ಕೆ ಬಿಡುತ್ತಿರುವವರು ಯಾರು, ಅವರು ದೇಶ ಪ್ರವೇಶಿಸದಂತೆ ಏಕೆ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಎಸ್‌ಐಆರ್‌ನಲ್ಲಿ ಅಕ್ರಮ ನಡೆಸಿರುವ ಬಿಜೆಪಿ ನಾಯಕರ ವಿರುದ್ಧ ತನಿಖೆ ನಡೆಯುತ್ತದೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.


























