
ಬೀದರ್, ಜು. ೨೯: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಸಂಘಟನಾ ಬಲವರ್ಧನೆಗಾಗಿ “ಸಂಘಟನೆ ಸೃಜನ್ ಅಭಿಯಾನ”ವನ್ನು ಆರಂಭಿಸಿದ್ದು, ಇದರ ಮೂಲಕ ಬೀದರ್ ಸೇರಿದಂತೆ ರಾಜ್ಯದಲ್ಲಿ ಎಲ್ಲ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗುವುದೆಂದು ಎಐಸಿಸಿ ವಿಕ್ಷಕರು ಹಾಗೂ ಮಾಜಿ ಶಾಸಕ ರಾಜೆಶ ಲಿಲೋಥಿಯಾ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ)ಯ ಪುನರ್‌ರಚನೆ ಹಾಗೂ ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಮುಂಚೂಣಿ ಘಟಕಗಳು, ಪ್ರಕೋಷ್ಟಗಳು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್‌ಎಸ್‌ಯುಐ, ಸೇವಾದಳ, ಅಲ್ಪಸಂಖ್ಯಾತ, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ವಿಭಾಗಗಳ ಪ್ರತಿನಿಧಿಗಳು ಮತ್ತು ತಳಮಟ್ಟದ ಕಾರ್ಯಕರ್ತರೊಂದಿಗೆ ಸಮಗ್ರ ಸಮಾಲೋಚನೆ ನಡೆಸಲಿದ್ದೇವೆ. ಅದಕ್ಕಾಗಿ ಪ್ರತ್ಯೇಕ ಅರ್ಜಿ ತಯ್ಯಾರಿಸಲಾಗಿದ್ದು, ನಿಷ್ಟಾವಂತ ಕಾರ್ಯಕರ್ತರು ಯಾರಾದರೂ ಸಹ ಅದನ್ನು ಭರ್ತಿ ಮಾಡಿ ಎಐಸಿಸಿ ಘಟಕಕ್ಕೆ ಒಪ್ಪಿಸಬೇಕು ಎಂದರು.
ಅಭಿಯಾನದ ಮುಖ್ಯ ಉದ್ದೇಶ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಿಷ್ಠ, ಪಾರದರ್ಶಕ, ಪ್ರಜಾಸತ್ತಾತ್ಮಕ, ಉತ್ತರದಾಯಿತ್ವ ಹಾಗೂ ಜನ ಕೇಂದ್ರಿತವಾಗಿಸುವುದಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಮಾತ್ರ ಸೀಮಿತವಾಗದೆ, ಜಿಲ್ಲಾ, ಬ್ಲಾಕ್, ಮಂಡಲ ಹಾಗೂ ಗ್ರಾಮ ಮಟ್ಟದ ಸಂಘಟನೆಗಳನ್ನು ಪುನರ್‌ರಚಿಸಿ ಜನಸೇವೆಗೆ ಬದ್ಧವಾದ ಪರಿಣಾಮಕಾರಿ ಸಂಘಟನಾ ವ್ಯವಸ್ಥೆಯನ್ನು ನಿರ್ಮಿಸುವುದು ಇದರ ಗುರಿಯಾಗಿದೆ ಎಂದರು.
ಸಮಾಲೋಚನಾ ಸಭೆಗಳಲ್ಲಿ ವ್ಯಕ್ತವಾಗುವ ಕಾರ್ಯಕರ್ತರ ಅಭಿಪ್ರಾಯಗಳು, ಸಲಹೆಗಳು ಹಾಗೂ ಶಿಫಾರಸುಗಳನ್ನು ಸಂಗ್ರಹಿಸಿ ಸಮಗ್ರ ವರದಿಯನ್ನು ಎಐಸಿಸಿಗೆ ಸಲ್ಲಿಸಲಾಗುವುದು. ಸಂಘಟನೆಯ ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಆಂತರಿಕ ಪ್ರಜಾಪ್ರಭುತ್ವದ ತತ್ವಗಳನ್ನು ಅನುಸರಿಸಲಾಗುವುದು ಎಂದು ತಿಳಿಸಿದರು.
ಈಲ್ಲಾ ಅಧ್ಯಕ್ಷರ ನೇಮಕದಲ್ಲಿ ಯುವಕರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು, ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ನೀಡುವುದು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಸಮರ್ಪಿತ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದವರು ಹೇಳಿದರು.
ಭಾರತ ಜೋಡೋ ಯಾತ್ರೆ ಹಾಗೂ ಭಾರತ ಜೋಡೋ ನ್ಯಾಯ ಯಾತ್ರೆಯ ಸ್ಪೂರ್ತಿಯಿಂದ ಪ್ರೇರಿತವಾಗಿರುವ ಈ ಅಭಿಯಾನವು ಸಂವಿಧಾನ, ಸಾಮಾಜಿಕ ನ್ಯಾಯ, ಧರ್ಮ ನಿರಪೇಕ್ಷತೆ, ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ ಎಂದರು.
ಕಾಂಗ್ರೆಸ್ ಪಕ್ಷದ ದೃಢ ನಂಬಿಕೆಯAತೆ ಸಂಘಟನೆಯ ನಿಜವಾದ ಶಕ್ತಿ ತಳಮಟ್ಟದ ಕಾರ್ಯಕರ್ತರಲ್ಲಿದೆ. ಆದ್ದರಿಂದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅಭಿಯಾನವು ಪ್ರತಿಯೊಂದು ಘಟಕವನ್ನು ಹೆಚ್ಚು ಸಕ್ರಿಯ, ಶಿಸ್ತುಬದ್ಧ, ಜವಾಬ್ದಾರಿಯುತ, ಪರಿಣಾಮಕಾರಿ ಹಾಗೂ ಜನಸ್ನೇಹಿಯಾಗಿಸುವ ಸಮಗ್ರ ಸಂಘಟನಾ ಪರಿವರ್ತನಾ ಕಾರ್ಯಕ್ರಮವಾಗಿದ್ದು, ಇದರಿಂದ ದೇಶದ ಪ್ರತಿಯೊಂದು ಹಳ್ಳಿ ಹಾಗೂ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವುದಾಗಿದೆ ಎಂದರು.
ಸAಘಟನಾ ಸುಧಾರಣೆಗಳು ಸದಾ ಸೈದ್ಧಾಂತಿಕ ಬದ್ಧತೆ, ನೈತಿಕ ನಾಯಕತ್ವ, ಜನಸೇವೆ ಹಾಗೂ ಸಾರ್ವಜನಿಕ ಉತ್ತರದಾಯಿತ್ವದ ಆಧಾರದ ಮೇಲೆ ನಡೆಯಬೇಕು ಎಂಬುದು ಕಾಂಗ್ರೆಸ್ ಪಕ್ಷದ ನಿಲುವಾಗಿದ್ದು, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೂ ತಮ್ಮ ಅಮೂಲ್ಯ ಸಲಹೆ ಹಾಗೂ ಅಭಿಪ್ರಾಯಗಳನ್ನು ನೀಡಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಪಕ್ಷದ ಮೌಲ್ಯಗಳನ್ನು ಪ್ರತಿಬಿಂಬಿಸುವ ಸಮರ್ಥ, ಬದ್ಧ ಹಾಗೂ ಜನವರ ನಾಯಕತ್ವವನ್ನು ಗುರುತಿಸಲು ಸಹಕರಿಸಬೇಕು ಎಂದು ಕರೆ ನೀಡಿದರು.
ಈಗಾಗಲೇ ತನಗೆ ರಾಜಸ್ಥಾನ ಹಾಗೂ ಪಂಜಾಬ್ ರಾಜ್ಯಗಳ ಜವಾಬ್ದಾರಿ ನೀಡಲಾಗಿತ್ತು. ಅವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಕರ್ನಾಟಕ ಒಂದೆ ರಾಜ್ಯ ಬಾಕಿ ಇದ್ದು, ಆಗಸ್ಟ್ ೧೫ರೊಳಗೆ ಇದನ್ನು ಪೂರ್ಣಗೊಳಿಸಿ ಹೊಸ ಜಿಲ್ಲಾಧ್ಯಕ್ಷರುಗಳನ್ನು ನೇಮಕ ಮಾಡಲಾಗುತ್ತದೆ. ತಾನು ಇಲ್ಲಿ ೧೦ ದಿವಸಗಳ ಕಾಲ ಉಳಿದು ಆರು ವಿಧಾನಸಭಾ ಕ್ಷೇತ್ರಗಳ ಬೂತ ಮಟ್ಟದ ಕಾರ್ಯಕರ್ತರಿಂದ ಹಿಡಿದು ಎಲ್ಲ ನಾಯಕರ ಜೊತೆ ಮುಕ್ತವಾಗಿ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ಲಿಲೋಥಿಯಾ ವಿವರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಾಜಿ ಸಚಿವ ರಾಜಶೇಖರ ಪಾಟೀಲ, ಕಾಂಗ್ರೆಸ್ ವಿಕ್ಷರಾದ ಹಸನಸಾಬ್ ಧೋತಿಹಾಳ, ಜ್ಯೋತಿ ಮರಗೊಳ, ರಮೇಶ ಮರಗೊಳ, ಮಾಜಿ ಎಮ್.ಎಲ್.ಸಿ ಕೆ ಪುಂಡಲಿಕರಾವ, ಅರವಿಂದಕುಮಾರ ಅರಳಿ, ಸಹಕಾರ ವಿಭಾಗದ ಅಧ್ಯಕ್ಷ ಧನರಾಜ ತಾಳಂಪಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಮ್.ಎ ಸಮಿ, ದತ್ತಾತ್ರಿ ಮುಲಗೆ, ಜಾರ್ಜ್ ಫರ್ನಾಂಡಿಸ್ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.






























