
ಜಮಖಂಡಿ, ಜೂ.24: ಹತ್ತಿರದ ಕುಂಬಾರಹಳ್ಳದ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಾದಕ ವ್ಯಸನ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪೆÇಲೀಸ್ ಅಧಿಕಾರಿ ಪಿ.ಎಚ್. ಘಾಟಗೆ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರವಿರುವುದರ ಜೊತೆಗೆ ಸಮಾಜದಲ್ಲಿಯೂ ಜಾಗೃತಿ ಮೂಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಇಂದಿನ ಯುವಜನತೆ ಡ್ರಗ್ಸ್, ಗಾಂಜಾ, ಬೀಡಿ, ಸಿಗರೇಟ್, ಮಾವಾ ಸೇರಿದಂತೆ ವಿವಿಧ ಮಾದಕ ವಸ್ತುಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಒಮ್ಮೆ ಚಟಕ್ಕೆ ಬಿದ್ದರೆ ಅದರಿಂದ ಹೊರಬರುವುದು ಕಷ್ಟವಾಗುವುದರಿಂದ ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ತಮ್ಮ ಸುತ್ತಮುತ್ತ ಯಾರಾದರೂ ಮಾದಕ ವ್ಯಸನಕ್ಕೆ ಒಳಗಾಗಿದ್ದರೆ ಪೆÇಲೀಸ್ ಇಲಾಖೆಯ ಆಪ್ ಮೂಲಕ ಮಾಹಿತಿ ನೀಡುವಂತೆ ತಿಳಿಸಿದ ಅವರು, ಆ ಮೂಲಕ ವ್ಯಸನಿಗಳಿಗೆ ಸನ್ಮಾರ್ಗ ತೋರಿಸಲು ಸಾಧ್ಯವಾಗುತ್ತದೆ ಎಂದರು. ಮಕ್ಕಳ ಸಮಸ್ಯೆಗಳಿಗೆ ಪೆÇಲೀಸ್ ಇಲಾಖೆ ಸದಾ ಸ್ಪಂದಿಸುತ್ತಿದ್ದು, ಮಕ್ಕಳ ಸಹಾಯವಾಣಿ 1098 ಹಾಗೂ ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ ಮಾತನಾಡಿ, “ಮನುಷ್ಯ ಅರಿಯದೇ ಆಕರ್ಷಣೆಗೆ ಒಳಗಾಗಿ ಚಟ ಮಾಡುತ್ತಾನೆ. ನಂತರ ಚಟವೇ ಚಟ ಮಾಡುತ್ತದೆ. ಕೊನೆಗೆ ಚಟ ಮಾನವನನ್ನೇ ಬಲಿ ಪಡೆಯುತ್ತದೆ. ಆದ್ದರಿಂದ ಮಾದಕ ವಸ್ತುಗಳಿಂದ ದೂರವಿದ್ದು, ಅದಕ್ಕೆ ಒಳಗಾದವರನ್ನು ರಕ್ಷಿಸುವ ಪಣ ತೊಡಬೇಕು” ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಬಾಹುಬಲಿ ಮುತ್ತೂರ, ಮಾದಕ ವಸ್ತುಗಳು ಜೀವನವನ್ನೇ ಹಾಳು ಮಾಡುವುದರಿಂದ ವಿದ್ಯಾರ್ಥಿಗಳು ಜಾಗೃತಿಯಿಂದ ಬದುಕಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆರಕ್ಷಕ ಎಸ್.ಪಿ. ಮಠಪತಿ, ಶಿಕ್ಷಕರಾದ ಅಶೋಕ ಬಿರಾದಾರ ಪಾಟೀಲ, ಚಂದ್ರಕಾಂತ ಪೆÇೀಲಿಸ್, ಶ್ರೀಮತಿ ಶಾರದಾ ಮಠ, ಮಂಜುಳಾ ಕಡಕೋಳ, ಆಸೀಫಾಬಾನು ಮೋಮಿನ್, ಶಕುಂತಲಾ ಬಿರಾದಾರ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಮಾದಕ ವ್ಯಸನ ವಿರೋಧಿ ಪ್ರತಿಜ್ಞೆ ಸ್ವೀಕರಿಸಿದರು. ಬಾಹುಬಲಿ ಮುತ್ತೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






























