
ಕಲಬುರಗಿ,ಆ.22-ನಗರ ಹೊರವಲಯದಲ್ಲಿರುವ ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಇನ್ನೋರ್ವ ಕೈದಿಯನ್ನು ಕಲಬುರಗಿ ನಗರ ಹಾಗೂ ಬೀದರ್ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ಮಸ್ತಾನ್ ಅಲಿಯಾಸ್ ಮಾಶಾ ತಂದೆ ಮಾಣಿಕಪ್ಪ ಕಮಲಾಪುರೆ ಎಂಬಾತನನ್ನು ಬಂಧಿಸಿ ಪುನ: ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.
ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಿಂದ ಜುಲೈ 14 ರಂದು ಒಟ್ಟು ಮೂವರು ಕೈದಿಗಳು ಪರಾರಿಯಾಗಿದ್ದರು. ಅದರಲ್ಲಿ ಇಬ್ಬರು ಕೈದಿಗಳನ್ನು ಈಗಾಗಲೆ ಬಂಧಿಸಲಾಗಿದ್ದು, ಇದೀಗ ಮೂರನೇ ಕೈದಿ ಮಸ್ತಾನ್‍ನನ್ನು ಬಂಧಿಸಲಾಗಿದೆ.
ಘಟನೆ ವಿವರ: ಕಲಬುರಗಿ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಸಂತಪುರ ಗ್ರಾಮದ ಸಂತೋಷ ಬಸವರಾಜ ಮೇತ್ರೆ (28), ಬೀದರ್ ಜಿಲ್ಲೆಯ ಬ್ಯಾಕಚೌದಿ ಗ್ರಾಮದ ಸಾಗರ ಭೀಮರಾಯ ಹೊಸಮನಿ (29) ಮತ್ತು 20 ವರ್ಷ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ಮಸ್ತಾನ್ ಅಲಿಯಾಸ್ ಮಾಶಾ ಮಾಣಿಕಪ್ಪ ಕಮಲಾಪುರೆ (27) ಎಂಬ ಕೈದಿಗಳು ಜು.14 ರಂದು ಪರಾರಿಯಾಗಿದ್ದರು. ಈ ಸಂಬಂಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಈಶಾನ್ಯ ವಲಯ ಉಪ ಪೊಲೀಸ್ ಮಹಾನಿರ್ದೇಶಕ ಶಾಂತನು ಸಿನ್ಹಾ ಅವರ ಮಾರ್ಗದರ್ಶನದಲ್ಲಿ ಬೀದರ್ ಎಸ್‍ಪಿ ಪ್ರದೀಪ್ ಗುಂಟೆ, ಡಿಸಿಪಿಗಳಾದ ಶಾಲೂ, ಪ್ರವೀಣ್ ಹೆಚ್.ನಾಯಕ್, ಕಲಬುರಗಿ ಸಬ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಸವೇಶ್ವರ ಹೀರಾ, ಫರಹತಾಬಾದ ಪೊಲೀಸ್ ಠಾಣೆ ಪಿಐ ಹುಸೇನ್ ಭಾಷಾ, ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಚಂದ್ರಶೇಖರ್ ತಿಗಡಿ, ಸಬ್ ಅರ್ಬನ್ ಪೊಲೀಸ್ ಠಾಣೆ ಪಿಐ ನಟರಾಜ ಲಾಡೆ, ಬೀದರ್ ಜಿಲ್ಲೆಯ ಭಾಲ್ಕಿ ಸಿಪಿಐ ಮತ್ತು ಹುಮನಾಬಾದ ಪಿಎಸ್‍ಐ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ತನಿಖೆ ನಡೆಸಿ ಜೈಲಿನಿಂದ ಪರಾರಿಯಾಗಿದ್ದ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಸಂತಪುರ ಗ್ರಾಮದ ಸಂತೋಷ ಬಸವರಾಜ ಮೇತ್ರೆ (28) ಮತ್ತು ಬೀದರ್ ಜಿಲ್ಲೆಯ ಬ್ಯಾಕಚೌದಿ ಗ್ರಾಮದ ಸಾಗರ ಭೀಮರಾಯ ಹೊಸಮನಿ (29) ಎಂಬ ಕೈದಿಗಳನ್ನು ಬಂಧಿಸಿತ್ತು. ಇದೀಗ ಮೂರನೇ ಕೈದಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ಮಸ್ತಾನ್ ಅಲಿಯಾಸ್ ಮಾಶಾ ಮಾಣಿಕಪ್ಪ ಕಮಲಾಪುರೆಯನ್ನು ಬಸಬಕಲ್ಯಾಣ ಪಿಎಸ್‍ಐ ಹಾಗೂ ಸಿಬ್ಬಂದಿ ಆ.20 ರಂದು ರಾಜೇಶ್ವರ ಗ್ರಾಮದಲ್ಲಿ ಬಂಧಿಸಿ ಆರೋಪಿಯನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.
ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಕಲಬುರಗಿ ನಗರ ಹಾಗೂ ಬೀದರ್ ಜಿಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ.ಅವರು ಶ್ಲಾಘಿಸಿದ್ದಾರೆ.































