
ಸಂಜೆವಾಣಿ ವಾರ್ತೆ,
ವಿಜಯಪುರ, ಜು.೧೯: ಸಾಹಿತ್ಯವನ್ನು ಸಾಮಾಜಿಕ ಪರಿವರ್ತನೆಯ ಅಸ್ತ್ರವನ್ನಾಗಿ ಬಳಸಿದ ಮಹಾನ್ ಚಿಂತಕ, ದಲಿತ ಸಾಹಿತ್ಯದ ಮುಂಚೂಣಿ ಲೇಖಕ ಅಣ್ಣಾಭಾವು ಸಾಠೆ ಅವರು ತಳ ಸಮುದಾಯದ ಧ್ವನಿಯಾಗಿ ಬದುಕಿದ ಮಹಾನ್ ವ್ಯಕ್ತಿತ್ವ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಅನಿಲ್ ಹೊಸಮನಿ ಹೇಳಿದರು.
ನಗರದ ಡಾ. ಅಣ್ಣಾಭಾವು ಸಾಠೆ ವೃತ್ತದಲ್ಲಿ ಸತ್ಯಶೋಧಕ ಅಣ್ಣಾಭಾವು ಸಾಠೆ ಸಂಘಟನಾ ಸಮಿತಿ, ವಿವಿಧ ಪ್ರಗತಿಪರ ಹಾಗೂ ದಲಿತ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಅಣ್ಣಾಭಾವು ಸಾಠೆ ಅವರ ೫೭ನೇ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಣ್ಣಾಭಾವು ಸಾಠೆ ಅವರ ಸಾಹಿತ್ಯವು ಸಮಾಜದಲ್ಲಿನ ಶೋಷಿತರು, ದುರ್ಬಲರು ಮತ್ತು ವಂಚಿತರ ಬದುಕಿನ ನೈಜ ಚಿತ್ರಣವನ್ನು ಕಟ್ಟಿಕೊಟ್ಟಿದ್ದು, ಅವರ ಚಿಂತನೆಗಳನ್ನು ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುವಾದಿಸಿ ಜನಸಾಮಾನ್ಯರಿಗೆ ತಲುಪಿಸುವ ಅಗತ್ಯವಿದೆ ಎಂದು ಹೇಳಿದರು.
ದಲಿತ ಮುಖಂಡ ಮಹಾದೇವ ಕಾಂಬಳೆ ಮಾತನಾಡಿ, ಅಣ್ಣಾಭಾವು ಸಾಠೆ ಅವರು ಸಾಹಿತ್ಯದ ಮೂಲಕ ದಲಿತ ಸಮುದಾಯವನ್ನು ಒಗ್ಗೂಡಿಸುವ ಕೆಲಸ ಮಾಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳಿAದ ಪ್ರೇರಿತರಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಅವರ ಜೀವನ ಇಂದಿನ ಯುವಜನತೆಗೆ ಆದರ್ಶವಾಗಿದೆ ಎಂದರು.
ಮುಖAಡ ಚನ್ನು ಕಟ್ಟಿಮನಿ ಮಾತನಾಡಿ, ಸಾಮಾಜಿಕ ಪರಿವರ್ತನೆಗೆ ಸಾಹಿತ್ಯ ಮತ್ತು ಹೋರಾಟ ಎರಡೂ ಅಗತ್ಯ. ಅಣ್ಣಾಭಾವು ಸಾಠೆ ಅವರ ಸಾಹಿತ್ಯವನ್ನು ಸರ್ಕಾರಗಳು ಎಲ್ಲ ಭಾಷೆಗಳಿಗೆ ಅನುವಾದಿಸಿ ಜನರಿಗೆ ತಲುಪಿಸಬೇಕು ಎಂದು ಆಗ್ರಹಿಸಿದರು.
ಯಮನಪ್ಪ ಗುಣಕಿ ಮಾತನಾಡಿ, ಅಣ್ಣಾಭಾವು ಸಾಠೆ ಅವರ ಪರಿನಿರ್ವಾಣ ದಿನವನ್ನು ಕೇವಲ ಸ್ಮರಣಾ ದಿನವನ್ನಾಗಿಯೇ ಅಲ್ಲ, ಸಾಮಾಜಿಕ ಪರಿವರ್ತನೆಯ ದಿನವನ್ನಾಗಿ ಆಚರಿಸಬೇಕು ಎಂದು ಹೇಳಿದರು.
ಪ್ರಗತಿಪರ ಮುಖಂಡ ಸುರೇಶ್ ಬಿಜಾಪುರ ಮಾತನಾಡಿ, ‘ಫಕೀರ’ ಕಾದಂಬರಿಯ ಮೂಲಕ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಅಣ್ಣಾಭಾವು ಸಾಠೆ ಅವರು ದೇಶದ ಪ್ರಮುಖ ಸಮಾಜವಾದಿ ಚಿಂತಕರಲ್ಲಿ ಒಬ್ಬರಾಗಿದ್ದರು ಎಂದರು.
ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ಮಾತನಾಡಿ, ಅಣ್ಣಾಭಾವು ಸಾಠೆ ಅವರ ಸಾಹಿತ್ಯ ಮತ್ತು ಸಮಾಜಮುಖಿ ಚಿಂತನೆಗಳಿಗೆ ವಿಶ್ವಮಟ್ಟದಲ್ಲಿ ಗೌರವ ದೊರೆತಿದ್ದು, ಅವರ ವಿಚಾರಧಾರೆ ಇನ್ನಷ್ಟು ಜನರಿಗೆ ತಲುಪಬೇಕು ಎಂದು ತಿಳಿಸಿದರು.
ಯುವ ಸಾಹಿತಿ ಕಿರಣ ಕಾಳೆ ಮಾತನಾಡಿ, ಅಣ್ಣಾಭಾವು ಸಾಠೆ ಅವರ ಸಮಗ್ರ ಸಾಹಿತ್ಯವನ್ನು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಅನುವಾದಿಸಿದರೆ ಸಮಾಜದಲ್ಲಿ ಮತ್ತಷ್ಟು ಜಾಗೃತಿ ಮೂಡಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸತ್ಯಶೋಧಕ ಅಣ್ಣಾಭಾವು ಸಾಠೆ ಸಮಿತಿ ಅಧ್ಯಕ್ಷ ಸೋಮಲಿಂಗ ರಣದೇವಿ ಮಾತನಾಡಿ, ವಿಜಯಪುರ ನಗರದಲ್ಲಿ ಅಣ್ಣಾಭಾವು ಸಾಠೆ ಅವರ ವೃತ್ತದ ಸಮಗ್ರ ಅಭಿವೃದ್ಧಿ ಹಾಗೂ ಸ್ಮಾರಕ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಲಾಗುತ್ತಿದೆ. ಈ ಸಂಬAಧ ಜನಪ್ರತಿನಿಧಿಗಳು ಮತ್ತು ಮಹಾನಗರ ಪಾಲಿಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪರಶುರಾಮ ರೋಣಿಹಾಳ, ಪರಶುರಾಮ ಚಲವಾದಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






























