
ವಿಜಯಪುರ, ಜು. 31: ಜಿಲ್ಲೆಯಲ್ಲಿನ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಪರಿಣಾಮಕಾರಿ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೀವ ಅಮೂಲ್ಯವಾಗಿದ್ದು ವಾಹನ ಚಾಲಕರಲ್ಲಿ ರಸ್ತೆ ನಿಯಮಗಳ ಪಾಲನೆ ಕುರಿತು ನಿರಂತರ ಜಾಗೃತಿ ಮೂಡಿಸಬೇಕು ಎಂದರು. ಜಿಲ್ಲೆಯಲ್ಲಿರುವ ಅಪಘಾತ ವಲಯಗಳನ್ನು ಗುರುತಿಸಿ ವೈಜ್ಞಾನಿಕವಾಗಿ ಪರಿಶೀಲಿಸಿ, ಅಪಘಾತ ತಡೆಗೆ ತುರ್ತು ಹಾಗೂ ದೀರ್ಘಾವಧಿಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರತಿ ಅಪಘಾತ ವಲಯದಲ್ಲಿ ಅಂಬುಲೆನ್ಸ್ ಸದಾ ಸನ್ನದ್ಧವಾಗಿರಬೇಕು. ಅಪಘಾತದ ನಂತರದ ‘ಗೋಲ್ಡನ್ ಅವರ್’ ಸಮಯದಲ್ಲಿ ತಕ್ಷಣ ಚಿಕಿತ್ಸೆ ದೊರೆತರೆ ಅಮೂಲ್ಯ ಜೀವಗಳನ್ನು ಉಳಿಸಬಹುದು. ಆದ್ದರಿಂದ ಅಗತ್ಯ ವೈದ್ಯಕೀಯ ಸೌಲಭ್ಯ, ಪ್ಯಾರಾಮೆಡಿಕಲ್ ಸಿಬ್ಬಂದಿ ಹಾಗೂ ತುರ್ತು ಸಂಪರ್ಕ ವಿವರಗಳಿರುವ ಮಾಹಿತಿ ಫಲಕಗಳನ್ನು ಅಳವಡಿಸಬೇಕು ಎಂದು ಹೇಳಿದರು.
ಅಪಘಾತ ಹೆಚ್ಚಾಗುವ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕಗಳು, ವೇಗ ನಿಯಂತ್ರಣ ಕ್ರಮಗಳು, ರಸ್ತೆ ಸುರಕ್ಷತಾ ಸೂಚನೆಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಸೂಚಿಸಿದರು. ಸಭೆಯಲ್ಲಿ ಕೈಗೊಂಡ ನಿರ್ಣಯಗಳಂತೆ ಪ್ರತಿಯೊಂದು ಇಲಾಖೆಯೂ ಕಾರ್ಯಯೋಜನೆ ರೂಪಿಸಿಕೊಂಡು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದರು.
ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಹಾಗೂ ಅವುಗಳಿಂದ ಸಂಭವಿಸುವ ಸಾವುಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಸೇವ್ ಲೈಫ್ ಫೌಂಡೇಶನ್ ಸಿದ್ಧಪಡಿಸಿರುವ ‘ರೋಡ್ ಸೇಫ್ಟಿ ಆಕ್ಷನ್ ಪ್ಲಾನ್’ ಅಧ್ಯಯನ ವರದಿಯನ್ನು ಅಧಿಕಾರಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. 2023 ಮತ್ತು 2024ರ ಇ-ಡಾರ್ (e-ಆಂಖ) ದತ್ತಾಂಶದ ಆಧಾರದ ಮೇಲೆ ಸಿದ್ಧಗೊಂಡಿರುವ ಈ ವರದಿಯಲ್ಲಿ ಅಪಘಾತಗಳ ಪ್ರಮುಖ ಕಾರಣಗಳು, ಅಪಾಯಕಾರಿ ರಸ್ತೆ ವಲಯಗಳು ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ವಿವರವಾದ ವಿಶ್ಲೇಷಣೆ ನೀಡಲಾಗಿದೆ. ವರದಿಯಲ್ಲಿನ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ಅಪಘಾತಗಳನ್ನು ನಿಯಂತ್ರಿಸಲು ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ರಸ್ತೆ ಸುರಕ್ಷತೆ ಕೇವಲ ಒಂದು ಇಲಾಖೆಯ ಜವಾಬ್ದಾರಿಯಲ್ಲ; ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಅಪಘಾತಗಳನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯ ಎಂದು ಹೇಳಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ, ಪೆÇ್ರಬೆಷನರ್ ಐಎಎಸ್ ಅಧಿಕಾರಿ ಅಭಿಷೇಕ್ ಸೇಹರ್, ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.






























