
ಬೀದರ್: ಜಿಲ್ಲೆಯ 2025-26ನೇ ಸಾಲಿನ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ರಸ್ತೆ ದುರಸ್ತಿ ಮತ್ತು ಒಗ್ಗೂಡಿಸುವಿಕೆ ಕಾಮಗಾರಿಗಳನ್ನು ಕೈಗೊಳ್ಳದೇ ಸರ್ಕಾರದ ಕೋಟ್ಯಂತರ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಜಿಲ್ಲಾ ಘಟಕದ ವತಿಯಿಂದ ಜಿ.ಪಂ ಕಚೇರಿ ಎದುರಿಗೆ ಇಂದು ಒಂದು ದಿನದ ಸಾಂಕೇತಿಕ ಸತ್ಯಾಗ್ರಹ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ರಸ್ತೆ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳದೇ ಯೋಜನೆಯ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪವನ್ನು ಸಂಘಟನೆ ಮಾಡಿದೆ. ಬೀದರ್ ತಾಲ್ಲೂಕಿನ ಅಲಿಯಾಬಾದ್-ಜನವಾಡ ರಸ್ತೆ, ಅಲಿಯಂಬರ್-ಯರನಳ್ಳಿ ರಸ್ತೆ, ಔರಾದ್ (ಬಿ) ತಾಲ್ಲೂಕಿನ ಸುಂಕನಾಳ ಕ್ರಾಸ್-ಸುಂಕನಾಳ ಗ್ರಾಮ ರಸ್ತೆ, ನಾಗೂರ ಭಾಬಜಿ ಕ್ರಾಸ್-ಚಂದರ್ ಮಹಾರಾಜ ತಾಂಡಾ ರಸ್ತೆ ಸೇರಿದಂತೆ ಹಲವೆಡೆ ಕಾಮಗಾರಿಗಳು ನಡೆದಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ರೀತಿ ಔರಾದ್ (ಬಿ) ತಾಲ್ಲೂಕಿನ ಗೌಡಗಾಂವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುರಸ್ತಿ ಹಾಗೂ ಕಮಲನಗರ ತಾಲ್ಲೂಕಿನ ಡೋಣಗಾಂವ-ರಂಡ್ಯಾಳ ರಸ್ತೆ ದುರಸ್ತಿ ಕಾಮಗಾರಿಗಳೂ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಶಿವಾಜಿರಾವ ಡೋಣೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಲೀಮೊದ್ದಿನ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುನೀಲ ಚಿಲ್ಲರ್ಗೆ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಅಭಿಯಂತರ ಕೀರಣ ರಾಠೋಡ್ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘಟನೆ ಒತ್ತಾಯಿಸಿದ್ದಾರೆ.
ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬತ್ತಲೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಶಿಂಧೆ, ಜಿಲ್ಲಾ ಉಪಾಧ್ಯಕ್ಷ ಮಹೇಂದ್ರಕುಮಾರ ಹೊಸಮನಿ,ಕರ್ನಾಟಕ ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಪಾಶ್ವನ್, ನಗರ ಘಟಕದ ಅಧ್ಯಕ್ಷ ವಿನೋದ ಶಿಂಧೆ, ಸಂಜುಕುಮಾರ ವಲ್ಲೆಪೂರೆ, ಯುವ ಮುಖಂಡ ಬಿ. ವೀರೇಶ ಕೋರೆ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಸಂದೀಪ್ ಕಾಂಟೆ, ಹೋರಾಟಗಾರ ಉಮೇಶ್ ಮುಗನೂರೆ, ಸಂತೋಷ ಸಂಗಮ, ಜೆಡಸನ್, ಬಸವರಾಜ ಭಾವಿದೊಡ್ಡಿ, ಗೌತಮ ಮುತ್ತಂಗಿಕರ್, ಶಿವುಕುಮಾರ ಗುನ್ನಳ್ಳಿಕರ್ ಉಪಸ್ಥಿತರಿದ್ದರು.


























