Home ಜಿಲ್ಲೆ ಆ. 5ರಿಂದ 20ರವರೆಗೆ 10 ಕೋಟಿ ಜನರಿಂದ ವ್ಯಸನಮುಕ್ತ ಪ್ರತಿಜ್ಞೆ ಅಭಿಯಾನ: ರಾಜಯೋಗಿನಿ ಬಿ.ಕೆ. ಸರೋಜಾ

ಆ. 5ರಿಂದ 20ರವರೆಗೆ 10 ಕೋಟಿ ಜನರಿಂದ ವ್ಯಸನಮುಕ್ತ ಪ್ರತಿಜ್ಞೆ ಅಭಿಯಾನ: ರಾಜಯೋಗಿನಿ ಬಿ.ಕೆ. ಸರೋಜಾ

ವಿಜಯಪುರ, ಜು.31: ಮಾದಕ ವ್ಯಸನವು ವ್ಯಕ್ತಿಯ ಜೀವನವಷ್ಟೇ ಅಲ್ಲ, ಕುಟುಂಬ ಮತ್ತು ಸಮಾಜದ ಭವಿಷ್ಯವನ್ನೂ ಹಾಳು ಮಾಡುವ ಗಂಭೀರ ಸಾಮಾಜಿಕ ಪಿಡುಗಾಗಿದ್ದು, ಪ್ರತಿಯೊಬ್ಬರೂ ವ್ಯಸನಮುಕ್ತ ಜೀವನಕ್ಕೆ ಸಂಕಲ್ಪ ಮಾಡಬೇಕು ಎಂದು ವಿಜಯಪುರ ಬ್ರಹ್ಮಕುಮಾರಿ ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಬಿ.ಕೆ. ಸರೋಜಾ ಕರೆ ನೀಡಿದರು.
ತಿಕೋಟಾ ತಾಲ್ಲೂಕಿನ ಲೋಹಗಾಂವ ಗ್ರಾಮದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಮದಲ್ಲಿ ಗುರುಪೂರ್ಣಿಮೆ ಹಾಗೂ ವ್ಯಸನಮುಕ್ತ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೋಹಗಾಂವ ಹಿರೇಮಠದ ಅಲ್ಲಮಪ್ರಭು ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ಯುವಜನತೆ ಮಾದಕ ವ್ಯಸನದಿಂದ ದೂರವಿದ್ದು ಆತ್ಮಜ್ಞಾನ, ರಾಜಯೋಗ ಧ್ಯಾನ, ಉತ್ತಮ ಚಿಂತನೆ ಮತ್ತು ಸತ್ಸಂಗದ ಮೂಲಕ ಸಾರ್ಥಕ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿ.ಕೆ. ಸರೋಜಾ ಮಾತನಾಡಿ, ವ್ಯಸನ ತ್ಯಜಿಸುವುದು ಕೇವಲ ಒಂದು ದುಶ್ಚಟವನ್ನು ಬಿಡುವುದಲ್ಲ; ಆರೋಗ್ಯ, ಕುಟುಂಬದ ನೆಮ್ಮದಿ, ಸಾಮಾಜಿಕ ಗೌರವ ಮತ್ತು ಉತ್ತಮ ಭವಿಷ್ಯವನ್ನು ಮರುಪಡೆಯುವ ಮಹತ್ವದ ನಿರ್ಧಾರವಾಗಿದೆ ಎಂದರು.
ಬ್ರಹ್ಮಕುಮಾರಿ ಸಂಸ್ಥೆಯು ಆಗಸ್ಟ್ 5ರಿಂದ 20ರವರೆಗೆ ದೇಶಾದ್ಯಂತ 10 ಕೋಟಿ ಜನರಿಂದ ವ್ಯಸನಮುಕ್ತ ಪ್ರತಿಜ್ಞೆ ಸ್ವೀಕರಿಸುವ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲರೂ ಈ ಜನಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದವರಿಗೆ ವ್ಯಸನಮುಕ್ತ ಜೀವನದ ಪ್ರತಿಜ್ಞೆ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಯಾವುದೇ ರೀತಿಯ ಮಾದಕ ವಸ್ತುಗಳನ್ನು ಸೇವಿಸದಂತೆ ಹಾಗೂ ತಮ್ಮ ಕುಟುಂಬ ಮತ್ತು ಸಮಾಜದಲ್ಲೂ ವ್ಯಸನಮುಕ್ತ ವಾತಾವರಣ ನಿರ್ಮಿಸಲು ಶ್ರಮಿಸುವುದಾಗಿ ಸಂಕಲ್ಪ ಮಾಡಿದರು.
ನಿವೃತ್ತ ಶಿಕ್ಷಕ ಎಂ.ಡಿ. ಪಡಂದರ, ಗ್ರಾಮೀಣ ವಿದ್ಯಾವರ್ಧಕ ಸಂಘದ ನಿರ್ದೇಶಕ ವೇಮನ, ದೀಪಿಕಾ ಎನ್. ಬಿದರಿ, ಸಮಾಜಸೇವಕ ಬಿ.ಎಸ್. ಗಸ್ತಿ, ಜ್ಞಾನಭಾರತಿ ಶಾಲೆಯ ಶಿಕ್ಷಕ ರಾಠೋಡ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗುರುಪೂರ್ಣಿಮೆ ಅಂಗವಾಗಿ ಗುರುಗಳ ಮಹತ್ವ, ಆತ್ಮಜ್ಞಾನ, ಸತ್ಚಿಂತನೆ ಹಾಗೂ ಸನ್ಮಾರ್ಗದ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಬಿ.ಕೆ. ಕವಿತಾ ವಂದಿಸಿದರು. ಬಿ.ಕೆ. ಸಂಗೀತ ಕಾರ್ಯಕ್ರಮ ನಿರೂಪಿಸಿದರು.