Home ಜಿಲ್ಲೆ ತುಮಕೂರು ಎಐ ಯುಗದಲ್ಲಿ ಗಣಿತ ವಿದ್ಯಾರ್ಥಿಗಳಿಗೆ ವಿಫುಲ ಉದ್ಯೋಗಾವಕಾಶ

ಎಐ ಯುಗದಲ್ಲಿ ಗಣಿತ ವಿದ್ಯಾರ್ಥಿಗಳಿಗೆ ವಿಫುಲ ಉದ್ಯೋಗಾವಕಾಶ

ತುಮಕೂರು, ಜೂ. ೧- ಇಂದಿನ ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಐಟಿ ಕ್ಷೇತ್ರಕ್ಕೆ ಪ್ರವೇಶಿಸಲು ಗಣಿತಶಾಸ್ತ್ರದ ವಿದ್ಯಾರ್ಥಿಗಳಿಗೆ ಅತ್ಯಂತ ಸುಲಭ ಮತ್ತು ಪ್ರಶಸ್ತ ಅವಕಾಶಗಳಿವೆ ಎಂದು ಅಕಾಡರ್ಸ್ ಎಜುವರ್ಸಿಟಿ ಪ್ರೈವೇಟ್ ಲಿಮಿಟೆಡ್‌ನ ಸಹ-ಸಂಸ್ಥಾಪಕರಾದ ಅಖಿಲ್ ಬನಗೆರೆ ಹೇಳಿದರು.


ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್‌ನ ಗಣಿತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ತಂತ್ರಜ್ಞಾನ ಲೋಕದಲ್ಲಿ ಕೃತಕ ಬುದ್ಧಿಮತ್ತೆಯ ವಿವಿಧ ಆಯಾಮಗಳ ಬಳಕೆ ಹಾಗೂ ಡೇಟಾ ಸೈಂಟಿಸ್ಟ್ ಮತ್ತು ಡೇಟಾ ಅನಾಲಿಷ್ಟ್ ಕ್ಷೇತ್ರಗಳಲ್ಲಿ ಗಣಿತಶಾಸ್ತ್ರ ವಿದ್ಯಾರ್ಥಿಗಳಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.


ಇಂದಿನ ಯುಗದಲ್ಲಿ ಕೋಡಿಂಗ್‌ನ್ನು ಸಂಪೂರ್ಣವಾಗಿ ಕೈಯಿಂದಲೇ ಬರೆಯುವ ಅವಶ್ಯಕತೆಯಿಲ್ಲ, ಅದಕ್ಕೆ ಕೃತಕ ಬುದ್ಧಿಮತ್ತೆಯ ಉಪಕರಣಗಳು ಸಾಕಷ್ಟು ಸಹಾಯ ಮಾಡುತ್ತವೆ. ಆದರೆ, ಕೇವಲ ಎಐ ಬಳಕೆಯಷ್ಟೇ ಅಲ್ಲದೆ, ಅದರ ಮೂಲಕ ಹೊಸ ಕೋಡ್ ರಚಿಸುವುದನ್ನು ಕಲಿಯುವುದು ಅಗತ್ಯವಾಗಿದೆ. ಗಣಿತ ವಿದ್ಯಾರ್ಥಿಗಳಲ್ಲಿ ಈಗಾಗಲೇ ತಾರ್ಕಿಕ ಚಿಂತನೆ, ಸಮಸ್ಯೆ ಪರಿಹಾರ ಕೌಶಲ್ಯ ಮತ್ತು ವಿಶ್ಲೇಷಣಾ ಸಾಮರ್ಥ್ಯ ಇರುತ್ತದೆ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ಕೂಡಾ ತಮ್ಮ ಅಧ್ಯಯನದಲ್ಲಿ ಗಣಿತವನ್ನು ಹೆಚ್ಚಾಗಿ ಕಲಿಯುವುದರಿಂದ, ಗಣಿತದ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಎಐ ಸಾಧನಗಳನ್ನು ಬಳಸಿಕೊಂಡು ಐಟಿ ಕ್ಷೇತ್ರದಲ್ಲಿ ಇನ್ನೂ ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಮುನ್ನಡೆಯಬಹುದು ಎಂದು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.


ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಹೆಚ್. ಎಸ್. ಬೋರೆಗೌಡ, ವಿಭಾಗದ ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಭಾಗದ ಅಧ್ಯಕ್ಷೆ ಡಾ. ಚಂದ್ರಾಲಿ ಬೈಷ್ಯಾ ಸ್ವಾಗತಿಸಿದರು.