Home ಜಿಲ್ಲೆ ಮೋದಿ ಜನ್ಮದಿನಕ್ಕೆ ‘ಆಶೀರ್ವಾದ್ ಕಾ ದಿಯಾ’ ಅಭಿಯಾನ; ಡಾ.ಬೆಲ್ದಾಳೆ

ಮೋದಿ ಜನ್ಮದಿನಕ್ಕೆ ‘ಆಶೀರ್ವಾದ್ ಕಾ ದಿಯಾ’ ಅಭಿಯಾನ; ಡಾ.ಬೆಲ್ದಾಳೆ

ಬೀದರ್: ನಾಳೆ(ಸೆ.17ರಂಸು)ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬೀದರ್ ಜಿಲ್ಲೆಯಾದ್ಯಂತ ವಿನೂತನ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹಾಗೂ ಗಣೇಶ ಮಂಡಳಿಗಳು ಕೈಜೋಡಿಸಬೇಕೆಂದು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿಗಳು ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಪ್ರಧಾನಿ ಮೋದಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
‘ಆಶೀರ್ವಾದ್ ಕಾ ದಿಯಾ’ ಸೇರಿ 13ಕ್ಕೂ ಹೆಚ್ಚು ಸೇವಾ ಚಟುವಟಿಕೆಗಳು ಈ ಸಂದರ್ಭದಲ್ಲಿ ನಡೆಸಲಾಗುತ್ತಿದೆ. ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ 11, 21 ಅಥವಾ 100 ದೀಪಗಳನ್ನು ಹಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಕರೆ ನೀಡಿದರು.
ದೇಶದ 25 ಕೋಟಿ ಮಕ್ಕಳ ಕನಸನ್ನು ಬಿಂಬಿಸುವ ನಿಟ್ಟಿನಲ್ಲಿ ಶಾಲೆ-ಕಾಲೇಜುಗಳಲ್ಲಿ ರಂಗೋಲಿ, ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
‘ನಮೋ ಸೇವಾ ಖಾತೆ’ ಬೀದಿನಾಟಕ, ಅಂಗನವಾಡಿ ಮಿಲನ, ‘ಸೇವಾ ಜ್ಯೋತಿ’ ಸಂಕಲ್ಪ ಯಾತ್ರೆ, ರಕ್ತದಾನ ಶಿಬಿರ, ವೃಕ್ಷಾರೋಪಣ, ಪ್ಲಾಸ್ಟಿಕ್ ಮುಕ್ತ ಬೀದರ್ ಜಾಗೃತಿ, ಅಂಗದಾನ ಸಂಕಲ್ಪ ಹಾಗೂ ಸೈಬರ್ ಭದ್ರತೆ ಕುರಿತಂತೆ ಒಟ್ಟು 13ಕ್ಕೂ ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳು ಅಕ್ಟೋಬರ್ 17ರ ವರೆಗೆ ನಡೆಯಲಿವೆ ಎಂದರು.
ಜಿಲ್ಲೆಯ ಆರೋಗ್ಯ ಮತ್ತು ನಗರಾಭಿವೃದ್ಧಿ ಕುರಿತು ಮಾತನಾಡಿದ ಶಾಸಕರು, ಸ್ಥಳೀಯ ಆಡಳಿತದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು.
?15 ಕೋಟಿ ವೆಚ್ಚದ ಕ್ಯಾಥ್ ಲ್ಯಾಬ್ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಒಂದೂವರೆ ವರ್ಷ ಕಳೆದರೂ ಇನ್ನೂ ವೈದ್ಯರ ನೇಮಕವಾಗಿಲ್ಲ. ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಲಕ್ಷಾಂತರ ರೂಪಾಯಿ ತೆರುವಂತಾಗಿದೆ.
ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಕಾರ್ಯನಿರ್ವಹಿಸುತ್ತಿಲ್ಲ. ಅಗತ್ಯ ರಕ್ತ ಪರೀಕ್ಷೆಯ ಆಂಟಿಜೆನ್‍ಗಳ ಕೊರತೆಯಿದೆ. ಉಪಲೋಕಾಯುಕ್ತರೇ ಭೇಟಿ ನೀಡಿ ಈ ಆಸ್ಪತ್ರೆಯನ್ನು ‘ನರಕ’ ಎಂದು ಕರೆದಿದ್ದರೂ ಉಸ್ತುವಾರಿ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ನಗರಕ್ಕೆ ಘೋಷಣೆಯಾದ ?200 ಕೋಟಿ ಅನುದಾನಕ್ಕೆ 7 ತಿಂಗಳಾದರೂ ಸರಿಯಾದ ಕ್ರಿಯಾ ಯೋಜನೆ ರೂಪಿಸಿಲ್ಲ. ಬೀದರ್ ನಗರಕ್ಕೆ ಹೊಂದಿಕೊಂಡಿರುವ 9 ಪ್ರಮುಖ ಹಳ್ಳಿಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದ್ದು, ಜಿಲ್ಲಾಡಳಿತ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಹಾಗೂ ಆಡಳಿತ ಪಕ್ಷವು ಪೆÇಲೀಸರನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷದ ಕಾರ್ಯಕರ್ತರ ಧ್ವನಿ ಅಡಗಿಸುತ್ತಿದೆ ಎಂದು ಆರೋಪಿಸಿದರು.
ಉತ್ತರ ಕರ್ನಾಟಕ ಸೇರಿದಂತೆ ಬೀದರ್ ಜಿಲ್ಲೆಯು ಗಂಭೀರ ಬರದ ಛಾಯೆಯಲ್ಲಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದರೂ, ಕೇವಲ ಭಾಲ್ಕಿಯನ್ನು ಮಾತ್ರ ಎರಡನೇ ಹಂತದಲ್ಲಿ ಸೇರಿಸಲಾಗಿದ್ದು, ಉಳಿದ ಮೂರು ತಾಲೂಕುಗಳನ್ನು ಕಡೆಗಣಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಈಗಾಗಲೇ ಹುಲಸೂರು ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ಸೆಪ್ಟೆಂಬರ್ 19 ರಂದು ಔರಾದ್‍ನಲ್ಲಿ ಶಾಸಕ ಪ್ರಭು ಚವ್ಹಾಣ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.ರೈತರ ಜೀವನಾಡಿಯಾಗಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು (ಬಿಎಸ್‍ಎಸ್‍ಕೆ) ಹರಾಜು ಮಾಡುವುದನ್ನು ಪಕ್ಷ ತೀವ್ರವಾಗಿ ವಿರೋಧಿಸುತ್ತದೆ. ಕಾರ್ಖಾನೆಯನ್ನು ಗುತ್ತಿಗೆ (ಲೀಸ್) ಅಥವಾ ಸೂಕ್ತ ಟೆಂಡರ್ ಮೂಲಕ ತಕ್ಷಣವೇ ಪುನರಾರಂಭಿಸಬೇಕು.
ಈ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು(ಸೆಪ್ಟೆಂಬರ್ 16 ರಂದು) ಹುಮ್ನಾಬಾದ್‍ನಿಂದ ಹಳ್ಳಿಖೇಡ್ ಕಾರ್ಖಾನೆಯ ವರೆಗೆ ಬಿಜೆಪಿ ವತಿಯಿಂದ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಬೃಹತ್ ಪಾದಯಾತ್ರೆ ಆಯೋಜಿಸಲಾಗಿದೆ ಎಂದರು.
ನಗರದಲ್ಲಿ ರಸ್ತೆಗಳ ದುಸ್ಥಿತಿ, ಬ್ರಿಮ್ಸ್ ಆಸ್ಪತ್ರೆ ಸಮಸ್ಯೆ ಹಾಗೂ ತಳ್ಳುಬಂಡಿ ವ್ಯಾಪಾರಿಗಳ ಪರ ಹೋರಾಟ ನಡೆಸಿದ ನಗರ ಘಟಕದ ಅಧ್ಯಕ್ಷ ಶಶಿ ಹೊಸಳ್ಳಿ ಅವರಿಗೆ ದುರುದ್ದೇಶಪೂರ್ವಕವಾಗಿ ರೌಡಿಶೀಟರ್ ನೋಟಿಸ್ ನೀಡಲಾಗಿದೆ. ಭಾಲ್ಕಿಯ ಎಸ್‍ಸಿ ಮೋರ್ಚಾ ಉಪಾಧ್ಯಕ್ಷ ಸಂಜು ಶಿಂದೆ ವಿರುದ್ಧ ಯಾವುದೇ ಪ್ರಕರಣಗಳಿಲ್ಲದಿದ್ದರೂ ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು. ಆದರೆ, ಹೈಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿ ಛೀಮಾರಿ ಹಾಕಿದೆ. ರಾಜಕೀಯ ಪ್ರೇರಿತವಾಗಿ ಬಿಜೆಪಿ ಹಾಗೂ ದಲಿತ ಮುಖಂಡರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಗಡಿಪಾರು ಮತ್ತು ರೌಡಿಶೀಟರ್ ಅಸ್ತ್ರ ಪ್ರಯೋಗಿಸಲಾಗುತ್ತಿದ್ದು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆ ಎಂದು ಆಪಾದಿಸಿದ ಸೋಮನಾಥ ಪಾಟೀಲ ಅವರು, ಗಣೇಶ ಚತುರ್ಥಿಯ ನಂತರ ಜಿಲ್ಲಾಡಳಿತ ಮತ್ತು ಸಚಿವರ ಜನವಿರೋಧಿ ಧೋರಣೆಯ ವಿರುದ್ಧ ಜಿಲ್ಲೆಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ,
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಕುಂಠಿತಗೊಂಡಿದ್ದು, ಅಭಿವೃದ್ಧಿಗೆ ಹಣವಿಲ್ಲದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಸ್ಥಳೀಯ ಸಚಿವರು ಮತ್ತು ಜಿಲ್ಲಾ ಪೆÇಲೀಸ್ ಇಲಾಖೆಯ ಕಾರ್ಯವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ 25 ವರ್ಷಗಳ ಸಾರ್ವಜನಿಕ ಜೀವನ ಹಾಗೂ ಸರ್ಕಾರದ ಮುಖ್ಯಸ್ಥರಾಗಿ 12.5 ವರ್ಷಗಳಲ್ಲಿ ‘ಸರ್ವಜನ ಸುಖಿನೋ ಭವಂತು’ ಎಂಬ ತತ್ವದಡಿ ಪಾರದರ್ಶಕ ಆಡಳಿತ ನೀಡಿದ್ದಾರೆ. ಜಿಎಸ್‍ಟಿ ಪಾಲು ಹಂಚಿಕೆ ಅಥವಾ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ದೇಶದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಯಾವುದೇ ತಾರತಮ್ಯ ಮಾಡದೆ ಸಮಾನವಾಗಿ ಅನುದಾನ ನೀಡಿದ್ದಾರೆ. ನರೇಂದ್ರ ಮೋದಿಯವರ ಯೋಜನೆಗಳು ಎಲ್ಲ ವರ್ಗದ ಜನರನ್ನು ತಲುಪಿವೆ ಎಂದರು.
“ಬ್ರಿಟಿಷರ ಕಾಲದಂತೆ ಹೋರಾಟಗಾರರ ಮೇಲೆ ದೇಶದ್ರೋಹ, ಗಡಿಪಾರು ಅಥವಾ ರೌಡಿಶೀಟ್ ತೆರೆಯುವ ಬೆದರಿಕೆ ಹಾಕಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಶಾಶ್ವತವಲ್ಲ ಎಂಬುದನ್ನು ಪೆÇಲೀಸ್ ಅಧಿಕಾರಿಗಳು ನೆನಪಿನಲ್ಲಿಡಬೇಕು. ಮುಂಬರುವ ದಿನಗಳಲ್ಲಿ ಜನತಾ ನ್ಯಾಯಾಲಯ ಹಾಗೂ ಕಾನೂನಿನ ನ್ಯಾಯಾಲಯ ಎರಡೂ ಇವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಹೋರಾಟಗಾರರ ಹಕ್ಕನ್ನು ಕಸಿಯದೆ ಅವರಿಗೆ ಸೂಕ್ತ ಭದ್ರತೆ ನೀಡುವುದು ಇಲಾಖೆಯ ಕರ್ತವ್ಯ” ಎಂದು ಖೂಬಾ ಎಚ್ಚರಿಸಿದರು. ಬೀದರ್ ಮಹಾನಗರ ಪಾಲಿಕೆ ಸದಸ್ಯ ಶಶಿ ಹೊಸಳ್ಳಿ ಮಾತನಾಡಿದರು.
ಪಕ್ಷದ ಪ್ರಮುಖರಾದ ಈಶ್ವರಸಿಂಗ ಠಾಕೂರ್, ಬಾಬುವಾಲಿ, ಪೀರಪ್ಪ ಔರಾದೆ, ರಾಜಶೇಖರ ನಾಗಮೂರ್ತಿ, ಬಾಬುರಾವ ಕಾರಬಾರಿ, ಬಸವರಾಜ ಪವಾರ, ಶ್ರೀನಿವಾಸ ಚೌದ್ರಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.