
ಕಲಬುರಗಿ:ಜು.3: ‘ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದ ದಿವಂಗತ ಕಲಾವಿದ ಕೆ ಟಿ ಶಿವಪ್ರಸಾದ ಅವರು ವಿನಯ ಸೌಜನ್ಯಗಳನ್ನು ಮೈಗೂಡಿಸಿಕೊಂಡಿದ್ದರು, ಅವರ ಅಗಲಿಕೆ ಚಿತ್ರಕಲಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಹಿರಿಯ ಕಲಾವಿದ ಶ್ರೀ ವಿ ಬಿ ಬಿರಾದಾರ ಹೇಳಿದರು. ನಗರದ ಮಾನಕರ ಬಡಾವಣೆಯಲ್ಲಿರುವ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ 01.07.2026 ರಂದು ಜರುಗಿದ ನುಡಿÀನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಶಿವಪ್ರಸಾದ ಒಬ್ಬ ಪರಿಪಕ್ವ ಕಲಾವಿದರಾಗಿದ್ದರು’ ಎಂದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರ ಮಾತನಾಡಿ ‘ಶಿವಪ್ರಸಾದ್ ಅವರು ಕರ್ನಾಟಕದ ದೃಶ್ಯಕಲಾ ಕ್ಷೇತ್ರಕ್ಕೆ ಒಂದು ರೂಪಕದಂತೆ ಇದ್ದರು, 1990ರ ದಶಕದಿಂದಲೂ ಅವರ ಕಲಾಕೃತಿಗಳನ್ನು ನಾನು ಗಮನಿಸುತ್ತಾ ಬಂದಿದ್ದೇನೆ, ಆರಂಭದಲ್ಲಿ ವಾಸ್ತವ ಶೈಲಿಯ ವರ್ಣಚಿತ್ರಗಳನ್ನು ಅವರು ರಚಿಸಿದ್ದು, ಬಳಿಕ ಸಮಕಾಲೀನ ಶೈಲಿಯಲ್ಲಿ ಅತ್ಯಂತ ಉನ್ನತವಾದ ಕಲಾಕೃತಿಗಳನ್ನು ರಚಿಸಿರುವರು’ ಎಂದರು. ಪಿ ಲಂಕೇಶ, ಕೆ ಪಿ ಪೂರ್ಣಚಂದ್ರ ತೇಜಸ್ವಿ, ದೇವನೂರು ಮಹಾದೇವ ಅವರಂತಹ ಮಹಾನ್ ಸಾಹಿತಿಗಳ ಒಡನಾಟದಲ್ಲಿ ಇದ್ದ ಇವರು ದೇವನೂರ ಅವರ ‘ಒಡಲಾಳ’ ಕಾದಂಬರಿ ಆಧಾರಿತ ಅನೇಕ ಚಿತ್ರಕಲಾ ಕೃತಿಗಳನ್ನು ರಚಿಸಿದ್ದರು. ದಲಿತ ಚಳುವಳಿ, ರೈತ ಚಳುವಳಿಗಳಲ್ಲಿ ಸಕ್ರಿಯರಾಗಿದ್ದ ಶಿವಪ್ರಸಾದ-ಈ ಚಳುವಳಿಗಳಿಗೆ ದಿಕ್ಕು ದೆಸೆಗಳನ್ನು ರೂಪಿಸಿದ್ದರು. ಕುವೆಂಪು ಅವರ ಕವಿಶೈಲದಲ್ಲಿನ ಅದ್ಭುತವಾದ ಶಿಲ್ಪಕಲಾಕೃತಿಯನ್ನು ಶಿವಪ್ರಸಾದರ ನಿರ್ದೇಶನದಲ್ಲೇ ರಚಿಸಲಾಗಿದ್ದು, ಅದು ಜಗದ್ ವಿಖ್ಯಾತವಾಗಿದೆ’ ಎಂದರು. ‘ಶಿವಪ್ರಸಾದರು ಅದ್ಭುತ ಚಿತ್ರಕಲಾವಿದನಾಗಿರುವಂತೆ ಆಳವಾದ ಅಧ್ಯಯನವನ್ನು ಮಾಡಿದ ಒಬ್ಬ ವಿದ್ವಾಂಸ, ಮಾತುಗಾರ ಕೂಡ ಆಗಿದ್ದರು’ ಎಂದರು.
ಕಲಾವಿದ/ಶಿಕ್ಷಕ ಸೂರ್ಯಕಾಂತ ನಂದೂರ ಮಾತನಾಡಿ ‘ಶಿವಪ್ರಸಾದ ಒಬ್ಬ ಅಪರೂಪದ ಕಲಾವಿದರಾಗಿದ್ದರು, ಅನೇಕ ಸಾಹಿತಿಗಳು, ಚಿಂತಕರ ಒಡನಾಟದಲ್ಲಿ ಬೆಳೆದು ಮಾದರಿ ಕಲಾವಿದರಾಗಿದ್ದರು, ಅವರ ಕಲೆ ಮತ್ತು ಜೀವನದಿಂದ ನಾವು ಪ್ರೇರಣೆ ಪಡೆಯಬೇಕು” ಎಂದರು. ಶರಣಬಸವೇಶ್ವರ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗದ ಗೌರವ ಡೀನ್ ಶ್ರೀಮತಿ ಶಾಂತಲಾ ನಿಷ್ಟಿಯವರು ಮಾತನಾಡಿ ‘ಶಿವಪ್ರಸಾದ ಒಬ್ಬ ಶ್ರೇಷ್ಠ ಕಲಾವಿದರಾಗಿದ್ದರು, ಅವರ ಕಲೆ ಮತ್ತು ಬದುಕು ಆದರ್ಶಪ್ರಾಯವಾದುದು’ ಎಂದರು. ಆರಂಭದಲ್ಲಿ ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ ಪಿ. ಪ್ರಾಸ್ತಾವಿಕ ಮಾತುಗಳಲ್ಲಿ ‘ಶಿವಪ್ರಸಾದ್ ಅವರು ಮುಂಬೈನ ಜೆ ಜೆ ಕಲಾ ಶಾಲೆಯಲ್ಲಿ ಕಲಿತು ಬಂದು ಹಾಸನದಲ್ಲಿಯೇ ನೆಲೆ ನಿಂತು ತಮ್ಮ ಕಲೆ ಮತ್ತು ವ್ಯಕ್ತಿತ್ವಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರು’ ಎಂದು ವಿವರಿಸಿದ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದಿಸಿದರು. ಕಲಾವಿದರಾದ ನಾರಾಯಣ ಭೋಸಾವಳೆ, ಬಾಬುರಾವ ಎಚ್, ಚಂದ್ರಶೇಖರ್ ಪಾಟೀಲ್, ಶೈಲಜಾ ಬಿರಾದಾರ್, ಕುಪೇಂದ್ರ, ಗಿರೀಶ್ ಕುಲಕರ್ಣಿ, ಶಂಕರಗೌಡ, ಮೌನೇಶ ವಿಶ್ವಕರ್ಮ, ದಾನಯ್ಯ ಚೌಕಿಮಠ, ಶಿವಕುಮಾರ್ ಜಾಧವ ಮುಂತಾದವರು ಉಪಸ್ಥಿತರಿದ್ದರು.


























