
ಬಾಗಲಕೋಟೆ, ಆ.15: ತಾಲೂಕಿನ ಹಿಪ್ಪರಗಿ ಗ್ರಾಮದ ಯುವರಾಜ್ ವೈನ್ ಶಾಪ್ ಮ್ಯಾನೇಜರ್ ಹನುಮಂತ ಅಥನಿ ಅವರ ಕಾರು ಸ್ಫೋಟ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದ್ದು, ಇದು ಆಕಸ್ಮಿಕ ಸ್ಫೋಟವಲ್ಲ, ಹನುಮಂತ ಅಥನಿ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ರೂಪಿಸಿದ್ದ ಸಂಚು ಎಂಬುದು ಪೆÇಲೀಸರ ತನಿಖೆಯಿಂದ ಬಯಲಾಗಿದೆ.
ಜುಲೈ 25ರಂದು ರಾತ್ರಿ ಸುಮಾರು 10.45ರ ವೇಳೆಗೆ ಹಿಪ್ಪರಗಿ ಗ್ರಾಮದ ಯುವರಾಜ್ ವೈನ್ ಶಾಪ್ ಮುಂಭಾಗ ನಿಲ್ಲಿಸಿದ್ದ ಮಹೀಂದ್ರಾ ಎಸ್‍ಯುವಿ-300 ಕಾರಿನಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಕಾರಿನ ಬಿಡಿಭಾಗಗಳು ಛಿದ್ರಚಿದ್ರವಾಗಿದ್ದವು. ಅದೃಷ್ಟವಶಾತ್ ಕಾರಿನಲ್ಲಿದ್ದ ಹನುಮಂತ ಅಥನಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಘಟನೆ ಬಳಿಕ ಸಿಪಿಐ ಮಲ್ಲಪ್ಪ ಮಡ್ಡಿ ನೇತೃತ್ವದ ಪೆÇಲೀಸರು ತನಿಖೆ ಆರಂಭಿಸಿದ್ದರು. ಸ್ಥಳದಲ್ಲಿ ದೊರೆತ ಸ್ಫೋಟಕ ಅವಶೇಷಗಳನ್ನು ಪರಿಶೀಲಿಸಿದಾಗ ಜಿಲೆಟಿನ್ ಕಡ್ಡಿಗಳು ಹಾಗೂ ಡೆಟೋನೇಟರ್ ಬಳಸಿ ಕಾರನ್ನು ಸ್ಫೋಟಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಹಣ-ಆಸ್ತಿ ವಿವಾದವೇ ಕೊಲೆ ಸಂಚಿಗೆ ಕಾರಣ?
ಹನುಮಂತ ಅಥನಿ ಹಾಗೂ ಆರೋಪಿಗಳ ನಡುವೆ ಹಣಕಾಸು ಮತ್ತು ಆಸ್ತಿ ವಿಚಾರದಲ್ಲಿ ವಿವಾದವಿತ್ತು ಎನ್ನಲಾಗಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ?40 ಲಕ್ಷ ಹಣದ ವ್ಯವಹಾರ ನಡೆದಿದ್ದು, ಬಳಿಕ ?67 ಲಕ್ಷ ಹಣದ ಒಪ್ಪಂದದ ವಿಚಾರದಲ್ಲಿ ವಿವಾದ ಉಂಟಾಗಿತ್ತು ಎಂದು ಪೆÇಲೀಸರು ತಿಳಿಸಿದ್ದಾರೆ.
ಉಳಿದ ಹಣ ಹಾಗೂ ಆಸ್ತಿ ಪಡೆಯುವ ಉದ್ದೇಶದಿಂದ ಹನುಮಂತ ಅಥನಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
800 ಜಿಲೆಟಿನ್ ಕಡ್ಡಿ ಖರೀದಿ..!
ಪ್ರಕರಣದ ತನಿಖೆಯಲ್ಲಿ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಂದಿದೆ. ಆರೋಪಿಗಳು ಬೇರೆ ಬೇರೆ ಸ್ಥಳಗಳಿಂದ ಸುಮಾರು 800 ಜಿಲೆಟಿನ್ ಕಡ್ಡಿಗಳನ್ನು ಖರೀದಿಸಿದ್ದರು ಎನ್ನಲಾಗಿದೆ.
ಅವುಗಳಲ್ಲಿ 30 ಜಿಲೆಟಿನ್ ಕಡ್ಡಿಗಳು ಹಾಗೂ ಒಂದು ಡೆಟೋನೇಟರ್ ಬಳಸಿ ಹನುಮಂತ ಅಥನಿ ಅವರ ಕಾರನ್ನು ಸ್ಫೋಟಿಸಿ ಕೊಲೆ ಮಾಡಲು ಯತ್ನಿಸಲಾಗಿತ್ತು ಎಂದು ಪೆÇಲೀಸರು ತಿಳಿಸಿದ್ದಾರೆ.
ಐವರು ಆರೋಪಿಗಳು ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ ಜಾಲಿ, ರೇವಣ್ಣ ನಿಂಗಪ್ಪ ಜಾಲಿ, ಮಹಾದೇವ ಸಂಗಾಪುರ ಹಾಗೂ ಮಲ್ಲಿಕಾರ್ಜುನ ಭದ್ರನವರ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಜಿಲೆಟಿನ್ ಸ್ಫೋಟಕಗಳನ್ನು ಪೂರೈಸಿದ ಆರೋಪದ ಮೇಲೆ ಗಜಾನನ ಎಂಬಾತನ ವಿರುದ್ಧವೂ ಪೆÇಲೀಸರು ಕ್ರಮ ಕೈಗೊಂಡಿದ್ದಾರೆ.
ವಿಜಯಪುರ ಹಾಗೂ ಅಥಣಿ ಭಾಗದ ಅಂಗಡಿಗಳಿಂದ ಜಿಲೆಟಿನ್ ಮತ್ತು ಡೆಟೋನೇಟರ್‍ಗಳನ್ನು ಖರೀದಿಸಿರುವ ಸುಳಿವು ಪೆÇಲೀಸರಿಗೆ ಲಭ್ಯವಾಗಿದೆ.
ಎಸ್‍ಪಿ ಸಿದ್ಧಾರ್ಥ ಗೋಯಲ್ ಮಾರ್ಗದರ್ಶನದಲ್ಲಿ ರಹಸ್ಯ ಬೇಧ
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಯ್ಯದ ರೋಷನ್ ಜಮೀರ, ಸಿಪಿಐ ಮಲ್ಲಪ್ಪ ಮಡ್ಡಿ ಹಾಗೂ ಪಿಎಸ್‍ಐ ಗಂಗಾಧರ ಪೂಜೇರಿ ನೇತೃತ್ವದ ಪೆÇಲೀಸ್ ತಂಡ ನಿರಂತರ ತನಿಖೆ ನಡೆಸಿ ಪ್ರಕರಣದ ರಹಸ್ಯವನ್ನು ಬೇಧಿಸಿದೆ.
ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ನಡೆಸಿದ ಪೆÇಲೀಸರು ಸ್ಫೋಟಕಗಳ ಖರೀದಿ, ಆರೋಪಿಗಳ ನಡುವಿನ ಸಂಪರ್ಕ ಹಾಗೂ ಕೊಲೆ ಸಂಚಿನ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಪ್ಪರಗಿ ಕಾರು ಸ್ಫೋಟ ಪ್ರಕರಣ ಇದೀಗ ಕೊಲೆ ಯತ್ನದ ಪ್ರಕರಣವಾಗಿ ಬಿಗ್ ಟ್ವಿಸ್ಟ್ ಪಡೆದುಕೊಂಡಿದ್ದು, ಪ್ರಕರಣದ ಕುರಿತು ಪೆÇಲೀಸರು ಮತ್ತಷ್ಟು ತನಿಖೆ ಮುಂದುವರಿಸಿದ್ದಾರೆ.































