Home ಜಿಲ್ಲೆ ಸುಮಂಗಲಿ ಸೇವಾಶ್ರಮದ ಸಮಾಜಮುಖಿ ಸೇವೆ ಮಾದರಿ

ಸುಮಂಗಲಿ ಸೇವಾಶ್ರಮದ ಸಮಾಜಮುಖಿ ಸೇವೆ ಮಾದರಿ

ಭಾಲ್ಕಿ: ಇಲ್ಲಿಯ ಹಿರೇಮಠ ಸಂಸ್ಥಾನದಲ್ಲಿ ಪದ್ಮಶ್ರೀ ಪುರಸ್ಕೃತೆ, ಸುಮಂಗಲಿ ಸೇವಾಶ್ರಮದ ಡಾ.ಎಸ್.ಜಿ.ಸುಶೀಲಮ್ಮ ಅವರನ್ನು ಗುರುವಾರ ಸನ್ಮಾನಿಸಿ, ಗೌರವಿಸಲಾಯಿತು. ಹಿರೇಮಠ ಸಂಸ್ಥಾನದ ಪೀಠಾಧಪತಿ ಗುರುಬಸವ ಪಟ್ಟದ್ದೇವರು ಅವರು ದಾವಣಗೆರೆ ಪಾಂಡೊಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಮಹಾಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಪದ್ಮಶ್ರೀ ಪುರಸ್ಕೃತೆ ಡಾ.ಎಸ್.ಜಿ.ಸುಶೀಲಮ್ಮ ಅವರನ್ನು ಸನ್ಮಾನಿಸಿ, ಆಶೀರ್ವದಿಸಿದರು.

ನಂತರ ಮಾತನಾಡಿದ ಪೂಜ್ಯರು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸುಮಂಗಲಿ ಸೇವಾಶ್ರಮದ ಮೂಲಕ ಸಲ್ಲಿಸುತ್ತಿರುವ ಸಮಾಜಮುಖಿ ಸೇವೆ ಮಾದರಿಯಾಗಿದೆ. ಡಾ.ಎಸ್.ಜಿ.ಸುಶೀಲಮ್ಮ ಅವರು ಕಟ್ಟಿದೆ ಸುಮಂಗಲಿ ಸೇವಾಶ್ರಮ ವಿವಿಧ ಜನಪರ ಮತ್ತು ಜೀವಪರ ಕಾರ್ಯಗಳ ಮೂಲಕ ವಿಶಿಷ್ಟವಾಗಿ ಗುರುತಿಸಿ ಕೊಂಡಿದೆ.

ಈ ಸಂಸ್ಥೆಯಲ್ಲಿ ಅನಾಥ ಮಕ್ಕಳು, ನಿರ್ಗತಿಕ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಆಶ್ರಯ, ಉಚಿತ ಶಿಕ್ಷಣ ಹಾಗೂ ಕೌಶಲ್ಯ ತರಬೇತಿ ನೀಡುವ ಮೂಲಕ ಅತ್ಯುತ್ತಮ ಸೇವೆ ಒದಗಿಸುತ್ತಿದೆ ಎಂದರು.

ಡಾ.ಎಸ್.ಜಿ.ಸುಶೀಲಮ್ಮ ಅವರು ಸುಮಂಗಲಿ ಸೇವಾಶ್ರಮದ ಮೂಲಕ ಸಲ್ಲಿಸುತ್ತಿರುವ ಸಮಾಜಪರ ಸೇವೆ ಗುರುತಿಸಿ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಅತ್ಯಂತ ಖುಷಿ ತರಿಸಿದೆ. ಈ ಹಿಂದೆ ಅವರನ್ನು ಬಸವಕಲ್ಯಾಣ ಅನುಭವ ಮಂಟಪದ ವತಿಯಿಂದ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಅವರ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ದಾವಣಗೆರೆ ಪಾಂಡೊಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಮಹಾಸ್ವಾಮೀಜಿ ಮಾತನಾಡಿ, ಗಡಿಭಾಗದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು ಬಸವತತ್ವ ಪ್ರಸಾರ, ಶೈಕ್ಷಣಿಕ ಕ್ರಾಂತಿ ಹಾಗೂ ಸಮಾಜ ಸೇವೆಯ ಮೂಲಕ ನಾಡಿಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಇವರು ಡಾ.ಚನ್ನಬಸವ ಪಟ್ಟದ್ದೇವರ ಹಾದಿಯಲ್ಲಿ ನಡೆದು ಗಡಿನಾಡಿನಲ್ಲಿ ಕನ್ನಡ ಹಾಗೂ ಶರಣ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ. ಉಭಯ ಪೂಜ್ಯರು ಕನಸುಗಳನ್ನು ಕನಸಾಗಿಸಲು ಪರಮ ಪೂಜ್ಯ ಗುರುಬಸವ ಪಟ್ಟದ್ದೇವರು ಹಗಲಿರುಳು ಕ್ರಿಯಾಶೀಲರಾಗಿ ಶ್ರಮಿಸುತ್ತಿರುವುದು ಈ ಭಾಗದ ಪುಣ್ಯವೆಂದು ನುಡಿದರು.

ಈ ಸಂದರ್ಭದಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ, ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ದಾನಾ, ಯುವ ಮುಖಂಡ ಕಿರಣ ಚಾಕೋತೆ, ಬಾಬು ಲಾಧಾ ಸೇರಿದಂತೆ ಹಲವರು ಇದ್ದರು. ಮುಖ್ಯಶಿಕ್ಷಕ ಬಾಬು ಬೆಲ್ದಾಳ ನಿರೂಪಿಸಿ, ವಂದಿಸಿದರು.