Home ಜಿಲ್ಲೆ ಗುರು ಜ್ಞಾನದ ಜೊತೆ ಸಂಸ್ಕಾರ ಕಲಿಸುತ್ತಾನೆ:ಗುಂಡಕನಾಳಶ್ರೀ

ಗುರು ಜ್ಞಾನದ ಜೊತೆ ಸಂಸ್ಕಾರ ಕಲಿಸುತ್ತಾನೆ:ಗುಂಡಕನಾಳಶ್ರೀ

ತಾಳಿಕೋಟೆ: ಸುಕ್ಷೇತ್ರ ಗುಂಡಕನಾಳದ ಗ್ರಾಮದ ಬೃಹನ್ ಮಠದ ಶ್ರೀ ಷ.ಬ್ರ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಶ್ರೀ ಮಠದ ಭಕ್ತ ವೃಂದದವರು ಗುರುಪೂರ್ಣಿಮೆಯ ಅಂಗವಾಗಿ ಸನ್ಮಾನಿಸಿ ಗೌರವಿಸಿ ಆಶಿರ್ವಾದ ಪಡೆದುಕೊಂಡರು.
ಈ ಸಮಯದಲ್ಲಿ ಶ್ರೀಮಠದ ಪೀಠಾಧಿಪತಿ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ನೀಡುವವನೇ ಗುರು. ಗುರು ಎಂದರೆ ಕೇವಲ ಶಾಲೆಯ ಶಿಕ್ಷಕರಲ್ಲ. ನಮ್ಮ ಜೀವನದಲ್ಲಿ ಉತ್ತಮ ದಾರಿಯನ್ನು ತೋರಿಸುವ ತಾಯಿ ಮತ್ತು ತಂದೆ, ಶಾಲಾ ಶಿಕ್ಷಕರು, ಆಧ್ಯಾತ್ಮಿಕ ಗುರುಗಳು, ಸಮಾಜದ ಮಾರ್ಗದರ್ಶಕರು, ಜೀವನದ ಮೌಲ್ಯಗಳನ್ನು ಕಲಿಸುವ ಹಿರಿಯರು, ಇವರೆಲ್ಲರೂ ಗುರುಗಳೇ ಆಗಿದ್ದಾರೆ ಈ ದಿನ ಭಕ್ತರು ಮತ್ತು ವಿದ್ಯಾರ್ಥಿಗಳು ಗುರುಗಳಿಗೆ ಪಾದನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ. ಹೂವು, ಫಲ ಹಾಗೂ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಗುರುಗಳ ಉಪದೇಶಗಳನ್ನು ಸ್ಮರಿಸುತ್ತಾರೆ. ಧಾರ್ಮಿಕ ಆಚರಣೆಯ ಮಠಗಳು, ದೇವಾಲಯಗಳು, ಆಶ್ರಮಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಧ್ಯಾನ, ಭಜನೆ, ಪ್ರವಚನ ಹಾಗೂ ಅನ್ನದಾಸೋಹ ನಡೆಯುತ್ತದೆ ಎಂದ ಅವರು ಗುರುಪೂರ್ಣಿಮೆ ನಮಗೆ ವಿನಯ, ಕೃತಜ್ಞತೆ, ಶಿಸ್ತು ಮತ್ತು ಜ್ಞಾನದ ಮಹತ್ವವನ್ನು ನೆನಪಿಸುತ್ತದೆ. ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸು, ಸಾರ್ಥಕತೆ ಮತ್ತು ಸತ್ಪಥವನ್ನು ಸಾಧಿಸಬಹುದಾಗಿದೆ ಎಂದ ಅವರು ಗುರು ಇಲ್ಲದ ಜೀವನ ದಿಕ್ಕಿಲ್ಲದ ಹಡಗಿನಂತಿದೆ ಗುರುಗಳ ಮಾರ್ಗದರ್ಶನವೇ ಯಶಸ್ಸಿನ ನಿಜವಾದ ದಾರಿದೀಪವಾಗಿದೆ ಎಂದರು.

ಈ ಸಮಯದಲ್ಲಿ ಚನ್ನವೀರಯ್ಯ ಇಂಗಳೇಶ್ವರ, ಕುಮಾರ ಬೆನಾಳ ಮಠ, ಶಶಿಧರಸ್ವಾಮಿ ಹಿರೇಮಠ ಗುಂಡಕನಾಳ, ಶಿವನಗೌಡ ಬೆಕಿನಾಳ, ಮಡಿವಾಳಪ್ಪ ಸರ್, ಗುಂಡಕನಾಳ ನಿಂಗು, ಸುನಿಲ್ ಬಡಿಗೇರ, ಶಿವನಗೌಡ ಬಿರಾದಾರ್, ಮೊದಲಾದವರು ಉಪಸ್ಥಿತರಿದ್ದರು.

 ಗುರು ಜೀವನದಲ್ಲಿ ಜ್ಞಾನವನ್ನು ನೀಡುವುದಷ್ಟೇ ಅಲ್ಲ, ಉತ್ತಮ ವ್ಯಕ್ತಿತ್ವ, ಶಿಸ್ತು, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾರೆ. ಜೀವನದ ಕಷ್ಟಗಳನ್ನು ಎದುರಿಸುವ ಧೈರ್ಯ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿವೇಕವನ್ನು ಗುರುಗಳು ನೀಡುತ್ತಾರೆ.
                                                 ಶ್ರೀ ಷ.ಬ್ರ ಗುರುಲಿಂಗ ಶಿವಾಚಾರ್ಯರು
                                                      ಗುಂಡಕನಾಳ ಬೃಹನ್ ಮಠ.