
ಬೀದರ್: ನಮ್ಮ ಬದುಕಿನಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವದ್ದಾಗಿದ್ದು, ಗುರು ಇಲ್ಲದೆ ಯಾರೂ ಜ್ಞಾನಿಗಳಾಗಲು ಸಾಧ್ಯವಿಲ್ಲ ಎಂದು ಖ್ಯಾತ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅಭಿಪ್ರಾಯಪಟ್ಟರು.
ನಗರದ ರಾಂಪೂರೆ ಕಾಲೋನಿಯ ಶ್ರೀ ದತ್ತಾಶ್ರಮ ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ದತ್ತಾಶ್ರಮ ಆವರಣದಲ್ಲಿ ಆಯೋಜಿಸಿದ್ದ ವ್ಯಾಸ ಗುರುಪೂರ್ಣಿಮೆ ಸಮಾರಂಭ ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. “ಹಿಂದೆ ಗುರು ಇರಬೇಕು, ಮುಂದೆ ಗುರಿಯಿರಬೇಕು” ಎಂಬ ಅನುಭವಿಕರ ವಾಣಿಯನ್ನು ಉಲ್ಲೇಖಿಸಿದ ಅವರು, ‘ವರ್ಣಮಾತ್ರಂ ಕಲಿಸಿದಾತಂ ಗುರು’ ಎಂಬ ಸೋಮೇಶ್ವರ ಶತಕದ ಮಾತನ್ನು ಸ್ಮರಿಸಿ, ಒಂದು ಅಕ್ಷರ ಕಲಿಸಿದವರೂ ಸಹ ಗುರುವಿನ ಸ್ಥಾನದಲ್ಲಿರುತ್ತಾರೆ ಎಂದು ಹೇಳಿದರು. ತಾಯಿಯೇ ಮೊದಲ ಗುರುವಾಗಿದ್ದು, ಗುರುಗಳು ಮಾತೃಸ್ವರೂಪಿಗಳಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಶ್ರೇಯಾ ಮಹೇಂದ್ರಕರ್ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕಾರ ಕಡಿಮೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದ್ದು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಗುರುಗಳು ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಹೊಂದಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರೇಮಠ ಸಿದ್ದರಾಮಯ್ಯ ಮಾತನಾಡಿ, ಗುರುಗಳು ತೋರಿದ ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಬದುಕಿನಲ್ಲಿ ಶಾಂತಿ ಮತ್ತು ಯಶಸ್ಸು ಪಡೆಯಲು ಗುರುಗಳ ಆರಾಧನೆ ಅಗತ್ಯ ಎಂದು ಹೇಳಿದರು. ಅತಿಥಿಯಾಗಿ ಮಾತನಾಡಿದ ಅಂಕಿತಾ ಬಚ್ಚಣ್ಣ ಅವರು, ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿರುವುದು ಶಿಸ್ತು ಮತ್ತು ಸಂಯಮದ ಕೊರತೆಗೆ ಕಾರಣವಾಗಿದ್ದು, ಉತ್ತಮ ಶಿಕ್ಷಣ ಮತ್ತು ಮೌಲ್ಯಗಳನ್ನು ನೀಡಿದರೆ ಅವರು ದೇಶದ ಆದರ್ಶ ಪ್ರಜೆಗಳಾಗಿ ಬೆಳೆಯುತ್ತಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಅಂಬಿಕಾ ಕುಲಕರ್ಣಿ, ಜಗದೇವಿ ವಗದಾಳೆ, ವಿಜಯಲಕ್ಷ್ಮಿ ಸಿರಂಜೆ ಹಾಗೂ ಸುರೇಖಾ ಹತ್ತಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡರು. ಅರುಣಾ ಬಚ್ಚಾ ಮತ್ತು ಕಾಂಚನ ಎರಮಲ್ಲಿ ಅವರು ಗುರು ಅಷ್ಟಕ ವಾಚನ ಮಾಡಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಕಿರಣ ಮಹಾರಾಜರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕುಮಾರಿ ಆಸ್ತಾ ಅವರ ನೃತ್ಯ ಪ್ರದರ್ಶನ, ಮಂಜುಳಾ ಮಠ ಅವರ ಸ್ವಾಗತ ಗೀತೆ, ಪ್ರವೀಣ್ ಕುಮಾರ್ ಅವರ ಸ್ವಾಗತ ಭಾಷಣ, ಸತಿ ಅನುಸಯಾ ಕೋಲಾಟ ತಂಡದಿAದ ಸುನೀತಾ ರಂಡ್ಯಾಳೆ ನೇತೃತ್ವದಲ್ಲಿ ಕೋಲಾಟ ಪ್ರದರ್ಶನ ಹಾಗೂ ಶಿವಶಕ್ತಿ ಸತ್ಸಂಗ ಬಳಗದ ಭಜನೆ ವಿಶೇಷ ಆಕರ್ಷಣೆಯಾಗಿತ್ತು. ಇದೇ ವೇಳೆ ಶಿವ ದೊಡ್ಡದೊಡ್ಡಿ ಅವರನ್ನು ಸನ್ಮಾನಿಸಲಾಯಿತು.
ಮಹೇಶ್ ಬಚ್ಚಣ್ಣ ಕಾರ್ಯಕ್ರಮ ನಿರೂಪಣೆ ಮಾಡಿದರು. ರೇವಣಪ್ಪ ಮೂಲಗೆ ಮತ್ತು ಪಾಂಡುರAಗ ಅವರು ತಬಲಾ ಹಾಗೂ ಹಾರ್ಮೋನಿಯಂ ಸಹಕಾರ ನೀಡಿದರೆ, ಮಹಿಳೆಯರು ಸುಮಧುರ ಭಜನೆಗಳನ್ನು ಹಾಡಿ ನೆರೆದವರ ಮನಸೆಳೆದರು. ಶಿವಾನಂದ ತಾದಲಾಪುರೆ ವಂದಿಸಿದರು. ಕಾರ್ಯಕ್ರಮದಲ್ಲಿ ರಮೇಶ ಇಟಗಿ, ಬಾಬುರಾವ ಗೊಂಡಾ, ಚಂದ್ರಕಾAತ ಪೂಜಾರಿ, ವಿರೂಪಾಕ್ಷ ದೇವರು ಸೇರಿದಂತೆ ನೂರಾರು ಭಕ್ತರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.






























