Home ಜಿಲ್ಲೆ ಪಾಂಡುರಂಗನ ನಾಮಸ್ಮರಣೆಯೊಂದಿಗೆ ಮೊಳಗಿದ ಭವ್ಯ ಪಲ್ಲಕ್ಕಿ ಮೆರವಣಿಗೆ

ಪಾಂಡುರಂಗನ ನಾಮಸ್ಮರಣೆಯೊಂದಿಗೆ ಮೊಳಗಿದ ಭವ್ಯ ಪಲ್ಲಕ್ಕಿ ಮೆರವಣಿಗೆ

ಬೀದರ್: ಜು.31:ಐತಿಹಾಸಿಕ ಹಿನ್ನೆಲೆಯುಳ್ಳ ಬೀದರ್ ನಗರದ ಪುರಾತನ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಕಳೆದ ಎಂಟು ದಿನಗಳಿಂದ ನಡೆಯುತ್ತಿದ್ದ ಆಷಾಢ ಸಪ್ತಾಹ ಧಾರ್ಮಿಕ ಮಹೋತ್ಸವವು ಗುರುವಾರ ಭಕ್ತಿ, ಧಾರ್ಮಿಕ ಉತ್ಸಾಹ ಹಾಗೂ ಸಾಂಸ್ಕøತಿಕ ವೈಭವದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಸಮಾರೋಪ ಅಂಗವಾಗಿ ನಡೆದ ವಿಶೇಷ ಪೂಜೆ, ಭವ್ಯ ಪಲ್ಲಕ್ಕಿ ಉತ್ಸವ, ದಹಿ ಹಂಡಿ, ಹರಿನಾಮ ಸಂಕೀರ್ತನೆ, ವಿವಿಧ ಭಜನಾ ಮಂಡಳಿಗಳ ಭಜನೆ, ಯುವಕ-ಯುವತಿಯರ ಫುಗಡಿ ನೃತ್ಯ ಹಾಗೂ ಮಹಾಪ್ರಸಾದ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಶ್ರೀ ಪಾಂಡುರಂಗನ ದರ್ಶನ ಪಡೆದು ಆಶೀರ್ವಾದ ಪಡೆದರು.

ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ವೇದಮಂತ್ರೋಚ್ಚಾರಣೆ, ಅಲಂಕಾರ ಸೇವೆ ಹಾಗೂ ಮಹಾಮಂಗಳಾರತಿ ನೆರವೇರಿತು. ಮುಂಜಾನೆಯೇ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ಹಾಗೂ ಕುಟುಂಬ ಸಮೇತ ಆಗಮಿಸಿದ ಭಕ್ತರು ಭಕ್ತಿಭಾವದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮಧ್ಯಾಹ್ನ ಶ್ರೀ ಪಾಂಡುರಂಗನ ಉತ್ಸವ ಮೂರ್ತಿಯನ್ನು ಸುಂದರ ಹೂವಿನ ಅಲಂಕಾರದಿಂದ ಸಿಂಗರಿಸಲಾದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ದೇವಸ್ಥಾನದಿಂದ ಆರಂಭವಾದ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಭಕ್ತರ ಗಮನ ಸೆಳೆಯಿತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ಹೂವಿನ ಮಳೆಗರೆದು, ತೆಂಗಿನಕಾಯಿ ಒಡೆದು, ಆರತಿ ಬೆಳಗಿ ಹಾಗೂ “ವಿಠ್ಠಲ ವಿಠ್ಠಲ ಪಾಂಡುರಂಗ”, “ಜೈ ಜೈ ರಾಮ ಕೃಷ್ಣ ಹರಿ” ಎಂಬ ಜಯಘೋಷಗಳೊಂದಿಗೆ ಭಕ್ತಿಭಾವದಿಂದ ಸ್ವಾಗತಿಸಿದರು. ಅನೇಕ ಕಡೆಗಳಲ್ಲಿ ಭಕ್ತರು ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ಹಣ್ಣು, ಹೂವು ಹಾಗೂ ಪ್ರಸಾದ ಸಮರ್ಪಿಸಿದರು.

ಮೆರವಣಿಗೆಯಲ್ಲಿ ಪಾಂಡುರಂಗ ಮಂದಿರ ಭಜನಾ ಮಂಡಳಿ, ನಿರಂಜನ ಸ್ವಾಮಿ ಮಠ ಭಜನಾ ಮಂಡಳಿ, ಸಾಯಿಬಾಬಾ ಭಜನಾ ಮಂಡಳಿ, ಶ್ರೀ ಜಗದೇಶ್ವರಿ ಮಾತಾ ಭಜನಾ ಮಂಡಳಿ, ಮಡಿವಾಳೇಶ್ವರ ಭಜನಾ ಮಂಡಳಿ, ಮರಖಲ್ ಭಜನಾ ಮಂಡಳಿ ಹಾಗೂ ಹಳ್ಳದಕೇರಿ ಭವಾನಿ ಭಜನಾ ಮಂಡಳಿ ಸೇರಿದಂತೆ ವಿವಿಧ ಭಜನಾ ಮಂಡಳಿಗಳು ಅಭಂಗ, ಹರಿನಾಮ ಸಂಕೀರ್ತನೆ ಹಾಗೂ ಭಜನೆಗಳನ್ನು ಹಾಡುತ್ತಾ ಭಕ್ತರಲ್ಲಿ ಭಕ್ತಿ ಪರವಶತೆಯನ್ನು ಮೂಡಿಸಿದವು. ತಾಳ, ಮೃದಂಗ ಹಾಗೂ ವಿವಿಧ ವಾದ್ಯಗಳ ನಾದಕ್ಕೆ ಭಕ್ತರು ನಾಮಸ್ಮರಣೆ ಮಾಡುತ್ತಾ ಹೆಜ್ಜೆ ಹಾಕಿದರು.

ಮೆರವಣಿಗೆಯ ನೇತೃತ್ವವನ್ನು ರಾಮಲು ಗಾದಗಿ, ರಾಜೇಂದ್ರಸಿಂಗ್ ಪವಾರ, ಬಸವರಾಜ ಶೀಲವಂತ ಚಿಟಗುಪ್ಪಾ, ಜಗನ್ನಾಥರಾವ ಜಿ. ಮಾನಕೇರಿ ಹಾಗೂ ರಾಜಕುಮಾರ ವಿಶ್ವಕರ್ಮ ವಹಿಸಿದ್ದರು.

ಸಂಜೆ ಶಹಾಗಂಜದ ದಾಮಾಜಿ ಪಂಥ ಅಗಸಿ ದ್ವಾರದಲ್ಲಿ ಸಂಪ್ರದಾಯಬದ್ಧವಾಗಿ ಮೊಸರಿನ ಗಡಗಿ (ದಹಿ ಹಂಡಿ) ಒಡೆಯುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಬಳಿಕ ವಿನಾಯಕ ಚೌಕ, ಮುಖ್ಯ ರಸ್ತೆ ಹಾಗೂ ಚೌಬಾರಾ ದೇವಸ್ಥಾನದ ಮುಖ್ಯ ದ್ವಾರದ ಎದುರು ಕೂಡ ದಹಿ ಹಂಡಿ ಕಾರ್ಯಕ್ರಮಗಳು ನೆರವೇರಿದವು. ಯುವಕರು ಹಾಗೂ ಯುವತಿಯರು ಸಾಂಪ್ರದಾಯಿಕ ಫುಗಡಿ ನೃತ್ಯ ಪ್ರದರ್ಶಿಸಿ ವಿಠ್ಠಲ ನಾಮಸ್ಮರಣೆ ಹಾಗೂ ಭಜನೆಗಳೊಂದಿಗೆ ಧಾರ್ಮಿಕ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದರು. ಪ್ರತಿಯೊಂದು ಸ್ಥಳದಲ್ಲೂ ಭಕ್ತರು ಜಯಘೋಷಗಳೊಂದಿಗೆ ಸಂಭ್ರಮ ವ್ಯಕ್ತಪಡಿಸಿದರು.

ಭಕ್ತರ ಅನುಕೂಲಕ್ಕಾಗಿ ಸರ್ಕಾರಿ ಬಾಲಕ-ಬಾಲಕಿಯರ ಶಾಲೆಯ ಮೈದಾನದಲ್ಲಿ ಮಧ್ಯಾಹ್ನ ವಿಶೇಷ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಹಾಗೂ ರಾತ್ರಿ ದೇವಸ್ಥಾನದಲ್ಲಿ ಮಹಾಪ್ರಸಾದ ವಿತರಿಸಲಾಯಿತು. ಸಾವಿರಾರು ಭಕ್ತರು ಶಿಸ್ತುಬದ್ಧವಾಗಿ ಮಹಾಪ್ರಸಾದ ಸ್ವೀಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಆರ್ಯ ವೈಶ್ಯ ಸಂಘ, ಶ್ರೀ ಪಾಂಡುರಂಗ ದೇವಸ್ಥಾನದ ಆಡಳಿತ ಮಂಡಳಿ, ವಿವಿಧ ಭಜನಾ ಮಂಡಳಿಗಳ ಸದಸ್ಯರು ಹಾಗೂ ನೂರಾರು ಸ್ವಯಂಸೇವಕರು ಶ್ರಮವಹಿಸಿ, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸಿದರು. ಕಾರ್ಯಕ್ರಮದ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೆÇಲೀಸ್ ಇಲಾಖೆ ಸಿಬ್ಬಂದಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಿ ಸಹಕರಿಸಿದರು.

ಈ ಸಂದರ್ಭದಲ್ಲಿ ಭಕ್ತರು “ಈ ವರ್ಷ ಉತ್ತಮ ಮಳೆಯಾಗಿ ರೈತರ ಬೆಳೆ ಸಮೃದ್ಧಿಯಾಗಲಿ, ರಾಜ್ಯ ಹಾಗೂ ದೇಶದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಹಾಗೂ ಪ್ರತಿಯೊಬ್ಬರೂ ಆರೋಗ್ಯದಿಂದ ಬದುಕುವಂತಾಗಲಿ” ಎಂದು ಶ್ರೀ ಪಾಂಡುರಂಗನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಡಿ.ವಿ. ಸಿಂಧೋಲ, ಅಶೋಕ ರೆಜಂತಲ್, ಶ್ರೀನಿವಾಸ ಪೆÇೀಲಾ, ದಿಗಂಬರ್ ಪೆÇೀಲಾ, ಸುನೀಲ ವಂಗೆಪಲ್ಲಿ, ಆರ್ಯ ವೈಶ್ಯ ಸಂಘದ ಪದಾಧಿಕಾರಿಗಳು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಭಜನಾ ಮಂಡಳಿಗಳ ಸದಸ್ಯರು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು ಎಂದು ಶ್ರೀ ಪಾಂಡುರಂಗ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಚಂದ್ರಶೇಖರ ಗಾದಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.