
ಚಿಂತಾಮಣಿ, ನ.೧೯: ಚಿಂತಾಮಣಿ ನಗರವನ್ನು ಜಲಸುರಕ್ಷಿತಗೊಳಿಸಿ, ದಕ್ಷಿಣ ಭಾರತದ ಇತರ ಸಣ್ಣ ನಗರಗಳಿಗೆ ಮಾದರಿಯನ್ನಾಗಿಸುವ ಉದ್ದೇಶದಿಂದ ವೆಲ್ ಲ್ಯಾಬ್ಸ್ ಗ್ರೋ ಫೌಂಡೇಶನ್ ಹಾಗೂ ಸ್ಥಳೀಯ ನಾಯಕರು ನಾಲ್ಕು ವರ್ಷಗಳ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದ್ದಾರೆ.
ಕೆರೆಗಳ ಪುನಶ್ಚೇತನ, ಅಂತರ್ಜಲ ಮರುಪೂರಣ, ಹೆಚ್ಚುವರಿ ಕುಡಿಯುವ ನೀರಿನ ಮೂಲಗಳ ಅಭಿವೃದ್ಧಿ ಹಾಗೂ ಬಡ ಸಮುದಾಯಗಳಿಗೆ ಸಮರ್ಪಕ ನೀರು ಪೂರೈಕೆ ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ. ಚಿಂತಾಮಣಿ ನಗರಸಭೆ ಮತ್ತು ಸಂಬಂಧಪಟ್ಟ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ.
ನಗರದಲ್ಲಿ ನಡೆದ ’ಚಿಂತಾಮಣಿಯ ಜಲ ಭವಿಷ್ಯವನ್ನು ಸುರಕ್ಷಿತಗೊಳಿಸುವುದು’ ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ನಗರಸಭೆ ಆಯುಕ್ತ ಜಿ.ಎನ್. ಚಲಪತಿ, ಗ್ರೋ ಫೌಂಡೇಶನ್ ಮುಖ್ಯಸ್ಥೆ ಕಲ್ಪನಾ ಸ್ವಾಮಿನಾಥನ್ ಮತ್ತು ವೆಲ್ ಲ್ಯಾಬ್ಸ್ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ವೀಣಾ ಶ್ರೀನಿವಾಸನ್ ಪಾಲ್ಗೊಂಡಿದ್ದರು.
ಚಿಂತಾಮಣಿಗೆ ಜೀವನದಿ ಮೂಲವಿಲ್ಲದೆ ಅಂತರ್ಜಲವನ್ನೇ ಹೆಚ್ಚಾಗಿ ಅವಲಂಬಿಸಲಾಗಿದೆ. ಈ ವರ್ಷ ಕೊರೆಸಿದ ಪ್ರತಿ ೧೦ ಕೊಳವೆಬಾವಿಗಳಲ್ಲಿ ಕೇವಲ ಎರಡು ಮಾತ್ರ ಯಶಸ್ವಿಯಾಗಿವೆ. ಬೇಸಿಗೆಯಲ್ಲಿ ನೀರಿನ ಕೊರತೆ ತೀವ್ರವಾಗುತ್ತಿದ್ದು, ಬರಗಾಲದ ಸಂದರ್ಭದಲ್ಲಿ ಶೇ.೭೦ರಷ್ಟು ಬಾವಿಗಳು ಬತ್ತುವ ಅಪಾಯವಿದೆ ಎಂದು ಶಾಸಕ ಡಾ. ಎಂ.ಸಿ. ಸುಧಾಕರ್ ಆತಂಕ ವ್ಯಕ್ತಪಡಿಸಿದರು.
ಯೋಜನೆಯಡಿ ನಗರದ ಹಾಳಾಗಿರುವ ಕೆರೆಗಳನ್ನು ಪುನಶ್ಚೇತನಗೊಳಿಸಿ, ಎರಡು ಸಾರ್ವಜನಿಕ ಉದ್ಯಾನಗಳನ್ನು ’ಸ್ಪಾಂಜ್ ಪಾರ್ಕ್’ಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ ವ್ಯವಸ್ಥೆ ಹಾಗೂ ಬಡಾವಣೆಗಳಿಗೆ ಕೊಳವೆ ನೀರಿನ ಸಂಪರ್ಕ ಸುಧಾರಣೆಗೂ ಆದ್ಯತೆ ನೀಡಲಾಗುವುದು. ನಗರಸಭೆಗೆ ಸಮಗ್ರ ಜಲ ನಿರ್ವಹಣೆಯ ತಾಂತ್ರಿಕ ನೆರವು ಒದಗಿಸಲಾಗುತ್ತದೆ.
ಕಳೆದ ಮೂರು ವರ್ಷಗಳಿಂದ ವೆಲ್ ಲ್ಯಾಬ್ಸ್ ಚಿಂತಾಮಣಿಯ ಜಲಸಂಪನ್ಮೂಲಗಳ ಕುರಿತು ಸಂಶೋಧನೆ ಮತ್ತು ಕ್ಷೇತ್ರ ಸಮೀಕ್ಷೆ ನಡೆಸಿದೆ. ಮಾಳಪಲ್ಲಿ ಕೆರೆ ಪುನಶ್ಚೇತನಕ್ಕೆ ಸಂಸ್ಥೆ ನೀಡಿರುವ ಬೆಂಬಲವನ್ನು ಶ್ಲಾಘಿಸಿದ ಸುಧಾಕರ್, ಗೋಪಸಂದ್ರ ಸೇರಿದಂತೆ ಇತರ ಕೆರೆಗಳ ಅಭಿವೃದ್ಧಿಗೂ ಸಹಕಾರ ಮುಂದುವರಿಯುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಯೋಜನೆ ಚಿಂತಾಮಣಿಯ ಜಲಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಒದಗಿಸುವುದರ ಜತೆಗೆ ರಾಜ್ಯದ ಇತರ ಸಣ್ಣ ನಗರಗಳಿಗೂ ಮಾದರಿಯಾಗಲಿದೆ ಎಂದು ಗ್ರೋ ಫೌಂಡೇಶನ್ ಮುಖ್ಯಸ್ಥೆ ಕಲ್ಪನಾ ಸ್ವಾಮಿನಾಥನ್ ಹಾಗೂ ವೆಲ್ ಲ್ಯಾಬ್ಸ್ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ವೀಣಾ ಶ್ರೀನಿವಾಸನ್ ತಿಳಿಸಿದರು.




















