
ವಂದೇ ಭಾರತ್ ರೈಲಿಗೆ ಪುತ್ತೂರಿನಲ್ಲಿ ಜಯಘೋಷದ ಸ್ವಾಗತ
ಪುತ್ತೂರು: ಕರಾವಳಿ ಕರ್ನಾಟಕ ಬಹುನಿರೀಕ್ಷಿತ ಮಂಗಳೂರು-ಬೆಂಗಳೂರು ವಂದೇ ಭಾರತ್ ಹೈಸ್ಪೀಡ್ ರೈಲು ಶುಕ್ರವಾರ ಉದ್ಘಾಟನೆಗೊಂಡು ಮೊದಲ ಬಾರಿಗೆ ಕಬಕ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿದಾಗ ರೈಲ್ವೇ ನಿಲ್ದಾಣದಲ್ಲಿ ಸೇರಿದ್ದ ಪುತ್ತೂರಿನ ಜನತೆ ಜಯಘೋಷವನ್ನು ಹಾಕಿ ವಂದೇ ಭಾರತ್ ರೈಲನ್ನು ಸ್ವಾಗತಿಸಿದರು.

ವಂದೇ ಭಾರತ್ ರೈಲಿನಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಪುತ್ತೂರಿಗೆ ಆಗಮಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಗೌರವಿಸಿ ಸ್ವಾಗತಿಸಲಾಯಿತು. ಈ ವೇಳೆ ಮಾತನಾಡಿದ ಸಚಿವರು, ಮಂಗಳೂರು-ಬೆಂಗಳೂರು ದ್ವಿಗುಣ ರೈಲ್ವೇ ಹಳಿಯ ಅಭಿವೃದ್ಧಿ ನಮ್ಮ ಪ್ರಮುಖ ಆದ್ಯತೆಯಾಗಿದ್ದು, ಈಗಾಗಲೇ ಡಿಪಿಆರ್ ಸಿದ್ಧಪಡಿಸುವ ಕಾರ್ಯ ಆರಂಭಗೊಂಡಿದೆ. ಶೀಘ್ರ ಅದನ್ನು ಅನುಷ್ಠಾನದ ಪ್ರಯತ್ನ ಮಾಡಲಿದ್ದೇವೆ. ಈ ಭಾಗದಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಮೂರು ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ನೀವು ಬಹಳ ಸ್ಮಾರ್ಟ್-ಡೈನಾಮಿಕ್ ಸಂಸದರನ್ನು ಪಡೆದಿದ್ದು, ಎಲ್ಲಾ ಕೆಲಸಗಳನ್ನೂ ಆದ್ಯತೆಯ ನೆಲೆಯಲ್ಲಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.
zಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ವಂದೇ ಭಾರತ್ ರೈಲು ಬೆಂಗಳೂರಿನಿಂದ ಮಂಗಳೂರಿಗೆ ಬಂದು ಕರಾವಳಿ ಕರ್ನಾಟಕದಲ್ಲಿ ಸಂಚರಿಸಿ ಮಡಗಾಂವ್ಗೆ ಸಾಗಲಿದ್ದು, ಇದು ಈ ಭಾಗಕ್ಕೆ ದೀಪಾವಳಿ ಉಡುಗೊರೆಯಾಗಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರನ ಪುಣ್ಯ ಭೂಮಿಗೆ ಪ್ರಸ್ತುತ ವಂದೇ ಭಾರತ್ ರೈಲು ಬಂದಿದ್ದು, ರೈಲ್ವೇ ಇಲಾಖೆಯಲ್ಲಿ ಸಚಿವ ಅಶ್ವಿನಿ ವೈಷ್ಣವ್ ಅವರು ಅನೇಕ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದ್ದು, ಮಂಗಳೂರು- ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲಿನ ನಿರ್ಧಾರವನ್ನೂ ಇವರೇ ಕೈಗೊಂಡಿದ್ದರು.
ಸುಬ್ರಹ್ಮಣ್ಯ- ಸಕಲೇಶಪುರ ನಡುವಿನ ಘಾಟ್ ಸೆಕ್ಷನ್ನಲ್ಲಿ ಪೂರ್ತಿ ಹಳಿ ವಿದ್ಯುದೀಕರಣ ಮಾಡಿ ವಂದೇ ಭಾರತ್ ರೈಲು ಬರಲು ಅವಕಾಶ ಮಾಡಿಕೊಟ್ಟಿದ್ದು, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವ ದರ್ಜೆಯ ನಿಲ್ದಾಣವನ್ನು ರೈಲ್ವೆ ಮಂಡಳಿಯೇ ಕೈಗೆತ್ತಿಕೊಂಡಿದ್ದು, ೯೮ ಕೋ.ರೂ.ವೆಚ್ಚದಲ್ಲಿ ಮಂಗಳೂರು ಸೆಂಟ್ರಲ್ ನಿಲ್ದಾಣ ಅಭಿವೃದ್ಧಿ ಮಾಡುವುದಾಗಿ ಸಚಿವರು ಘೋಷಿಸಿದ್ದಾರೆ. ನಮ್ಮ ಜಿಲ್ಲೆಯು ಸಾಧ್ಯತೆಗಳ ಸಾಗರವಾಗಿದ್ದು, ಅದರ ಅನ್ಲಾಕ್ ಮಾಡುವ ಕಾರ್ಯ ಮಾಡಲಾಗಿದೆ ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಅಧ್ಯಕ್ಷ ಶಿವಕುಮಾರ್ ಕಳ್ಳಿಮಾರ್, ಬಿಜೆಪಿ ಪ್ರಮುಖರು, ರೈಲ್ವೇ ಹೋರಾಟಗಾರರು ಸಹಿತ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.
ಬೆಂಗಳೂರು-ಮಂಗಳೂರು-ಮಡಂಗಾವ್ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಚಾಲನೆ ನೀಡುವ ಕಾರ್ಯಕ್ರಮದ ವೀಕ್ಷಣೆಗೆ ಪುತ್ತೂರಿನಲ್ಲಿ ಎಲ್.ಇಡಿ ಪರದೆಯನ್ನು ಅಳವಡಿಸಲಾಗಿತ್ತು. ಜತೆಗೆ ಶಾಲಾ ವಿದ್ಯಾರ್ಥಿಗಳಿಂದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಂದೇ ಭಾರತ್ ರೈಲು ಹಾಗೂ ಸಚಿವರ ಆಗಮನಕ್ಕೆ ನಿಲ್ದಾಣವನ್ನು ಸಿಂಗರಿಸಲಾಗಿತ್ತು.
























