Home ಜಿಲ್ಲೆ ಮಂಗಳೂರು ದೇವಳದ ಅಭಿವೃದ್ಧಿಯಲ್ಲಿ ಕಾಲೆಳೆಯುವ ಕೆಲಸ ಬೇಡ- ಶಾಸಕ ಅಶೋಕ್ ರೈ

ದೇವಳದ ಅಭಿವೃದ್ಧಿಯಲ್ಲಿ ಕಾಲೆಳೆಯುವ ಕೆಲಸ ಬೇಡ- ಶಾಸಕ ಅಶೋಕ್ ರೈ

ಪುತ್ತೂರು: ದೇವಸ್ಥಾನದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಭಕ್ತನೂ ಸಹಕಾರ ನೀಡಬೇಕು. ಅಭಿವೃದ್ಧಿ ಕಾರ್ಯ ಕಂಡು ಸಂತೋಷ ಪಡಬೇಕು. ಬದಲಿಗೆ ಕಾಲೆಳೆಯುವ ಕೆಲಸ ಮಾಡಬಾರದು ಎಂದು ಬೈಲಾಡಿ ವಿಷ್ಣಮೂರ್ತಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಶಾಸಕ ಅಶೋಕ್ ರೈ ಹೇಳಿದರು.
ಅವರು ಇರ್ದೆ ಗ್ರಾಮದ ಬೈಲಾಡಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ೨.೭೫ ಕೋಟಿ ರೂ.ವೆಚ್ಚದ ಜೀರ್ಣೋದ್ಧಾರ ಕಾಮಗಾರಿ ಮತ್ತು ಬ್ರಹ್ಮಕಲಶೋತ್ಸವ ಆಚರಣೆ ಬಗ್ಗೆ ಭಕಾಧಿಗಳ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ, ಜೀರ್ಣೋದ್ಧಾರ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ಕಾಮಗಾರಿಗಳಿಗೆ ವೇಗ ದೊರೆತಿದ್ದು, ಶೇ.೯೫ರಷ್ಟು ಜೀರ್ಣೋದ್ಧಾರ ಕಾರ್ಯಗಳು ಪೂರ್ಣಗೊಂಡಿವೆ. ಗರ್ಭಗುಡಿ ಹಾಗೂ ನಮಸ್ಕಾರ ಮಂಟಪಕ್ಕೆ ಹಿತ್ತಾಳೆಯ ಹೊದಿಕೆ, ವಿಶಾಲವಾದ ಮೇಲ್ಛಾವಣಿ, ಅದಕ್ಕೆ ರೂಫಿಂಗ್, ಕದಿಕೆ ಚಾವಡಿ ಅಭಿವೃದ್ಧಿ, ಅನ್ನಛತ್ರ ಮೊದಲಾದ ಕಾಮಗಾರಿಗಳನ್ನು ಅತ್ಯಂತ ಮಿತವ್ಯಯದಲ್ಲಿ ನಡೆಸಲಾಗಿದೆ. ಈಗಾಗಲೇ ದೇಣಿಗೆ ಮೂಲಕ ರೂ.೧.೧೯ ಕೋಟಿ ಸಂಗ್ರಹವಾಗಿದೆ . ಇನ್ನೂ ರೂ.೧.೫೦ ಕೋಟಿ ಸಂಗ್ರಹವಾಗಬೇಕಾಗಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಘೋಷಣೆ
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯನ್ನೇ ಬ್ರಹ್ಮಕಲಶೋತ್ಸವ ಸಮಿತಿಯಾಗಿ ಮುಂದುವರಿಸಲು ನಿರ್ಧರಿಸಲಾಯಿತು. ಅದರಂತೆ ಗೌರವಾಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಅಧ್ಯಕ್ಷರಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಶುಭಕರ ರೈ ಬಾಲ್ಯೊಟ್ಟುಗುತ್ತು, ಕೋಶಾಽಕಾರಿಯಾಗಿ ವಿಠಲ ರೈ ಬಾಲ್ಯೊಟ್ಟುಗುತ್ತು ಆಯ್ಕೆಯಾದರು. ಉಪಸಮಿತಿಗಳನ್ನೂ ಘೋಷಣೆ ಮಾಡಲಾಯಿತು.
ಗೌರವಾರ್ಪಣೆ; ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಸಂದರ್ಭದಲ್ಲಿ ನಿರಂತರವಾಗಿ ಊಟೋಪಚಾರದ ವ್ಯವಸ್ಥೆ ಮಾಡುತ್ತಿರುವ ಮಹೇಶ್ ಭಟ್ ಸುದನಡ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿಯೂ ಆಗಿರುವ ವಿಠಲ ರೈ ಬಾಲ್ಯೊಟ್ಟುಗುತ್ತು ಹಾಗೂ ಸಂಚಾಲಕ ರಾಧಾಕೃಷ್ಣ ರೈ ಬಾಲ್ಯೊಟ್ಟುಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶುಭಕರ ರೈ ಬಾಲ್ಯೊಟ್ಟುಗುತ್ತು ವಂದಿಸಿದರು. ಅನುಷಾ ರೈ ಬೈಲಾಡಿ ಕಾರ್ಯಕ್ರಮ ನಿರೂಪಿಸಿದರು.
ವೈಯುಕ್ತಿಕ ೫ ಲಕ್ಷ ದೇಣಿಗೆ
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ೨೫ ಲಕ್ಷ ರೂ. ನೀಡುವ ಭರವಸೆ ನೀಡಿದ್ದೇನೆ. ಮುಂದಿನ ಬಜೆಟ್‌ನಲ್ಲಿ ಅದನ್ನು ಮೀಸಲಿಡಲಾಗುವುದು. ದೇವಸ್ಥಾನದ ಅಭಿವೃದ್ಧಿಗೆ ೫ ಲಕ್ಷ ರೂ., ರಸ್ತೆ ದುರಸ್ತಿಗೆ ೩ ಲಕ್ಷ ರೂ., ಇಂಟರ್‌ಲಾಕ್ ಅಳವಡಿಕೆಗೆ ೫ ಲಕ್ಷ ರೂ. ಹಾಗೂ ತಡೆಗೋಡೆ ನಿರ್ಮಾಣಕ್ಕೆ ೫ ಲಕ್ಷ ರೂ. ಸೇರಿದಂತೆ ಒಟ್ಟು ೪೩ ಲಕ್ಷ ರೂ. ಅನುದಾನ ನೀಡಲಾಗುವುದು. ಇದರೊಂದಿಗೆ ವೈಯಕ್ತಿಕವಾಗಿ ೫ ಲಕ್ಷ ರೂ. ನೀಡುತ್ತೇನೆ- ಶಾಸಕ ಅಶೋಕ್ ಕುಮಾರ್ ರೈ