
ನವದೆಹಲಿ, ಅ. ೧೩- ಎರಡು ಸಾವಿರ ರೂಪಾಯಿಗೆ ಮೀರಿದ ಯುಪಿಐ ವಹಿವಾಟುಗಳಿಗೆ ಶೇ. ೨ರಷ್ಟು ಶುಲ್ಕ ವಿಧಿಸುವ ನಿಯಮವನ್ನು ದೀಪಾವಳಿ ಹಬ್ಬದ ನಂತರ ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಯುಪಿಐ ವಹಿವಾಟುಗಳ ಮೇಲಿನ ಶೇ. ೨ ರಷ್ಟು ಶುಲ್ಕ ವಿಧಿಸುವ ಪ್ರಸ್ತಾವನೆ ಕುರಿತಂತೆ ಈ ನಿಯಮವನ್ನು ಮುಂದೂಡುವಂತೆ ವ್ಯಾಪಾರಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಬ್ಬದ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಲಿದ್ದು, ಹೊಸ ಶುಲ್ಕ ಜಾರಿಗೊಳಿಸಿದರೆ ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವ್ಯಾಪಾರಿ ಸಂಘಟನೆಗಳು, ಫಿನ್‌ಟೆಕ್ ಕಂಪನಿಗಳು ಮತ್ತು ಪಾವತಿ ಸೇವಾ ಸಂಸ್ಥೆಗಳು ಶುಲ್ಕ ಜಾರಿಯನ್ನು ಮುಂದೂಡುವಂತೆ ಎನ್‌ಪಿಸಿಐಗೆ ಮನವಿ ಮಾಡಿದ್ದವು.
ಈ ಮೊದಲು ಅಕ್ಟೋಬರ್ ೧೫ ರಿಂದ ೨ ಸಾವಿರ ಮೀರಿದ ವಹಿವಾಟಿಗೆ ಶೇ. ೨ ರಷ್ಟು ಶುಲ್ಕ ವಿಧಿಸುವ ನಿಯಮವನ್ನು ಅ. ೧೫ ರಿಂದ ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು.
ದೀಪಾವಳಿ ಹಬ್ಬದ ಬಳಿಕ ನವೆಂಬರ್ ೨ನೇ ವಾರದಿಂದ ಯುಪಿಐ ವಹಿವಾಟಿನ ಶುಲ್ಕ ಜಾರಿಗೆ ಬರಲಿದೆ.
ಈ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯಂತೆ ಅಕ್ಟೋಬರ್ ೧೫ರಿಂದಲೇ ಹೊಸ ಶುಲ್ಕ ವ್ಯವಸ್ಥೆ ಜಾರಿಗೆ ಬರಬೇಕಿತ್ತು. ಆದರೆ ಹಬ್ಬದ ಮಾರಾಟದ ಅವಧಿಯಲ್ಲಿ ವ್ಯಾಪಾರಿಗಳಿಗೆ ಹೆಚ್ಚುವರಿ ಹೊರೆ ಬೀಳದಂತೆ ನೋಡಿಕೊಳ್ಳಲು ಅನುಷ್ಠಾನವನ್ನು ಮುಂದೂಡಲಾಗಿದೆ. ಈ ಕುರಿತು ಪಾಲುದಾರ ಸಂಸ್ಥೆಗಳಿಗೆ ಶೀಘ್ರದಲ್ಲೇ ಹೊಸ ದಿನಾಂಕ ತಿಳಿಸಲಾಗುವುದು ಎಂದು ವರದಿಯಾಗಿದೆ.
ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸಿ ಮಾಡುವ ೨,೦೦೦ ಮೀರಿದ ನಿರ್ದಿಷ್ಟ ವ್ಯಾಪಾರಿ ಯುಪಿಐ ಪಾವತಿಗಳಿಗೆ ಶೇ. ೦.೪ರಷ್ಟು ಒಆಖ ವಿಧಿಸುವ ಪ್ರಸ್ತಾವನೆ ಇದೆ. ಪ್ರತಿ ವಹಿವಾಟಿಗೆ ಗರಿಷ್ಠ ಶುಲ್ಕವನ್ನು ೩೦೦ಕ್ಕೆ ಮಿತಿಗೊಳಿಸಲಾಗಿದೆ.
ಉದಾಹರಣೆಗೆ, ಈ ದರ ಅನ್ವಯವಾಗುವ ೧೦,೦೦೦ ಮೊತ್ತದ ಪಾವತಿಗೆ ?೪೦ ಒಆಖ ಶುಲ್ಕವಾಗಲಿದೆ. ?೭೫,೦೦೦ ಅಥವಾ ಅದಕ್ಕಿಂತ ಹೆಚ್ಚಿನ ಅರ್ಹ ವಹಿವಾಟಿಗೆ ಶೇ. ೦.೪ರ ಲೆಕ್ಕಾಚಾರದಲ್ಲಿ ?೩೦೦ ಅಥವಾ ಅದಕ್ಕಿಂತ ಹೆಚ್ಚು ಶುಲ್ಕ ಬರಬಹುದಾದರೂ, ನಿಗದಿತ ಗರಿಷ್ಠ ಮಿತಿಯ ಕಾರಣ ?೩೦೦ಕ್ಕಿಂತ ಹೆಚ್ಚು ವಿಧಿಸುವಂತಿಲ್ಲ.
ಆದರೆ ಈ ಶುಲ್ಕ ಎಲ್ಲ ಯುಪಿಐ ಪಾವತಿಗಳಿಗೂ ಅನ್ವಯಿಸುವುದಿಲ್ಲ. ವೈಯಕ್ತಿಕರಿಂದ ವೈಯಕ್ತಿಕರಿಗೆ ಮಾಡುವ ಹಣ ವರ್ಗಾವಣೆಗಳಿಗೆ ಶುಲ್ಕ ಇರುವುದಿಲ್ಲ. ೨,೦೦೦ವರೆಗಿನ ವ್ಯಾಪಾರಿ ವಹಿವಾಟುಗಳಿಗೂ ವಿನಾಯಿತಿ ಮುಂದುವರಿಯಲಿದೆ. ನಿಗದಿತ ಅರ್ಹತೆಯಡಿ ಬರುವ ಸಣ್ಣ ವ್ಯಾಪಾರಿಗಳ ವಹಿವಾಟುಗಳಿಗೂ ವಿನಾಯಿತಿ ಇದೆ.
ಕೇಂದ್ರ ಹಣಕಾಸು ಸಚಿವಾಲಯದ ಸೆಪ್ಟೆಂಬರ್ ೧೫ರ ಪ್ರಕಟಣೆಯ ಪ್ರಕಾರ, ವೈಯಕ್ತಿಕ ಹಣ ವರ್ಗಾವಣೆಗಳು ಸಂಪೂರ್ಣ ಉಚಿತವಾಗಿಯೇ ಮುಂದುವರಿಯಲಿವೆ. ೨,೦೦೦ವರೆಗಿನ ವ್ಯಾಪಾರಿ ಪಾವತಿಗಳು ಮತ್ತು ಶೂನ್ಯ ಒಆಖ ವ್ಯವಸ್ಥೆಯಡಿ ಬರುವ ಸಣ್ಣ ವ್ಯಾಪಾರಿಗಳ ವಹಿವಾಟುಗಳೂ ಶುಲ್ಕದಿಂದ ಹೊರತಾಗಿರಲಿವೆ. ಹೀಗಾಗಿ ಒಟ್ಟು ವ್ಯಾಪಾರಿ ಯುಪಿಐ ವಹಿವಾಟುಗಳಲ್ಲಿ ಸುಮಾರು ಶೇ. ೯೬ರಷ್ಟು ವಹಿವಾಟುಗಳಿಗೆ ಈ ಬದಲಾವಣೆಯಿಂದ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.
ಆದ್ದರಿಂದ ಹೊಸ ವ್ಯವಸ್ಥೆಯು ಯುಪಿಐ ಬಳಸುವ ಪ್ರತಿಯೊಬ್ಬ ಗ್ರಾಹಕರಿಗೂ ಶುಲ್ಕ ವಿಧಿಸುವ ಕ್ರಮವಲ್ಲ. ನಿಗದಿತ ಷರತ್ತುಗಳನ್ನು ಪೂರೈಸುವ ಆಯ್ದ ವ್ಯಾಪಾರಿ ಪಾವತಿಗಳಿಗೆ ಮಾತ್ರ ಅನ್ವಯಿಸುವ ಪ್ರಸ್ತಾವನೆಯಾಗಿದೆ.
ಆಲ್ ಇಂಡಿಯಾ ಮೊಬೈಲ್ ರೀಟೇಲರ್ಸ್ ಅಸೋಸಿಯೇಷನ್ ಸೇರಿದಂತೆ ವ್ಯಾಪಾರ ವಲಯದ ಸಂಘಟನೆಗಳು ಹೊಸ ಶುಲ್ಕ ವ್ಯವಸ್ಥೆಯನ್ನು ಜಾರಿಗೊಳಿಸುವ ಸಮಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ದೀಪಾವಳಿ ಸಂದರ್ಭದಲ್ಲಿ ಮೊಬೈಲ್, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಉತ್ಪನ್ನಗಳ ಮಾರಾಟ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಗ್ರಾಹಕರು ಡಿಜಿಟಲ್ ಪಾವತಿಗಳಿಗೆ ಹೆಚ್ಚು ಒಲವು ತೋರುವುದರಿಂದ, ಹೆಚ್ಚುವರಿ ವಹಿವಾಟು ವೆಚ್ಚ ವ್ಯಾಪಾರಿಗಳ ಲಾಭದ ಮೇಲೆ ಪರಿಣಾಮ ಬೀರಬಹುದು ಎಂಬುದು ಅವರ ಆತಂಕ.
ಆಲ್ ಇಂಡಿಯಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಡಿಸ್ಟ್ರಿಬ್ಯೂಟರ್ಸ್ ಫೆಡರೇಷನ್ ಸೇರಿದಂತೆ ಇತರ ಸಂಘಟನೆಗಳೂ ಜಾರಿಯನ್ನು ಮುಂದೂಡುವಂತೆ ಮನವಿ ಮಾಡಿದ್ದವು. ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ವಿನಾಯಿತಿ ನೀಡಬೇಕು ಮತ್ತು ವ್ಯಾಪಾರಿಯಿಂದ ವ್ಯಾಪಾರಿಗೆ ನಡೆಯುವ ವಹಿವಾಟುಗಳಿಗೂ ಸ್ಪಷ್ಟ ವಿನಾಯಿತಿ ಕಲ್ಪಿಸಬೇಕು ಎಂಬ ಬೇಡಿಕೆಗಳು ಕೇಳಿಬಂದಿದ್ದವು.
ಇದಲ್ಲದೆ, ವಿವಿಧ ಬಗೆಯ ಯುಪಿಐ ವಹಿವಾಟುಗಳಿಗೆ ಅನ್ವಯಿಸುವ ದರಗಳು, ವರ್ಗೀಕರಣ ಮತ್ತು ಶುಲ್ಕದ ಹೊಣೆಗಾರಿಕೆ ಕುರಿತು ಪಾವತಿ ಉದ್ಯಮದಲ್ಲಿ ಗೊಂದಲಗಳಿವೆ ಎಂಬ ಅಂಶವೂ ಮುಂದೂಡಿಕೆಗೆ ಕಾರಣವಾಗಿದೆ. ಹೊಸ ನಿಯಮಗಳನ್ನು ಜಾರಿಗೊಳಿಸುವ ಮೊದಲು ಬ್ಯಾಂಕ್‌ಗಳು, ಪಾವತಿ ಕಂಪನಿಗಳು ಮತ್ತು ವ್ಯಾಪಾರಿಗಳು ತಮ್ಮ ವ್ಯವಸ್ಥೆಗಳನ್ನು ಸಿದ್ಧಪಡಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಎಂಡಿಆರ್ ಎಂದರೆ ಡಿಜಿಟಲ್ ಪಾವತಿಯನ್ನು ಸಂಸ್ಕರಿಸುವ ಬ್ಯಾಂಕ್ ಅಥವಾ ಪಾವತಿ ಸೇವಾ ಸಂಸ್ಥೆಗೆ ವ್ಯಾಪಾರಿ ಪಾವತಿಸುವ ಶುಲ್ಕ. ಇದು ಸರ್ಕಾರ ವಿಧಿಸುವ ತೆರಿಗೆಯಲ್ಲ. ನಿಗದಿತ ಚೌಕಟ್ಟಿನ ಪ್ರಕಾರ ಈ ಮೊತ್ತವು ಬ್ಯಾಂಕ್‌ಗಳು ಮತ್ತು ಪಾವತಿ ವ್ಯವಸ್ಥೆಯ ವಿವಿಧ ಪಾಲುದಾರರಿಗೆ ಹಂಚಿಕೆಯಾಗುತ್ತದೆ.
ಗ್ರಾಹಕರಿಗೆ ನೇರವಾಗಿ ಹೆಚ್ಚುವರಿ ಶುಲ್ಕ ವಿಧಿಸುವ ಬದಲು ವ್ಯಾಪಾರಿಗಳೇ ಒಆಖ ಪಾವತಿಸಬೇಕೆಂಬ ನಿಯಮವಿದೆ. ಆದರೂ ತಮ್ಮ ವೆಚ್ಚ ಹೆಚ್ಚಾದರೆ ಕೆಲವು ವ್ಯಾಪಾರಿಗಳು ವಸ್ತುಗಳ ಬೆಲೆ ಅಥವಾ ಇತರ ಶುಲ್ಕಗಳ ಮೂಲಕ ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಬಹುದೇ ಎಂಬ ಆತಂಕ ಉದ್ಯಮ ವಲಯದಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶುಲ್ಕದ ಅನ್ವಯ ಮತ್ತು ಗ್ರಾಹಕರ ರಕ್ಷಣೆಗೆ ಸಂಬಂಧಿಸಿದ ನಿಯಮಗಳ ಸ್ಪಷ್ಟತೆ ಮಹತ್ವ ಪಡೆದಿದೆ.


























