
ನವದೆಹಲಿ, ಅ. ೧೦: ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ತಲೆದಂಡಕ್ಕೆ ಆಗ್ರಹಿಸಿ ದೆಹಲಿಯಲ್ಲಿಂದು ಸಿಜೆಪಿ ಬೃಹತ್ ಪ್ರತಿಭಟನೆಗೆ ಮುಂದಾಗಿರುವುದು ತೀವ್ರ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು, ಪ್ರತಿಭಟನೆಗೆ ಅನುಮತಿ ನಿರಾಕರಿಸಿರುವ ದೆಹಲಿ ಪೊಲೀಸರು ಯೂಟ್ಯೂಬರ್ ಧ್ರುವ ರಾಠಿ ಸೇರಿ ಸಿಜೆಪಿಯ ಹಲವು ನಾಯಕರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಪ್ರತಿಭಟನೆಗೆ ಜಮಾಯಿಸಿದ್ದ ಸಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ ಕನ್ನಾಟ್ ಪ್ಲೇಸ್‌ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದು ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಇಂದು ದೆಹಲಿಯ ಜಂತರ್ ಮಂತರ್ ನಲ್ಲಿ ಜಿರಳೆ ಪಕ್ಷ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡದೇ ಪ್ರತಿಭಟನೆಗೆ ಬರುತ್ತಿರುವ ಸಿಜೆಪಿ ಕಾರ್ಯಕರ್ತರನ್ನು ಎಲ್ಲೆಂದರಲ್ಲಿ ಬಂಧಿಸುತ್ತಿದ್ದು,ಇಡೀ ದೆಹಲಿಯಲ್ಲಿ ಒಂದು ರೀತಿಯ ಸಂಘರ್ಷಮಯ ವಾತಾವರಣ ಸೃಷ್ಟಿಯಾಗಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಆಯೋಜಿಸಿದ್ದ ಪ್ರತಿಭಟನೆಗೂ ಮುನ್ನವೇ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಿಮಾನದಲ್ಲೇ ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ದೆಹಲಿಗೆ ಬಂದಿಳಿದ ವಿಮಾನವನ್ನು ಪೊಲೀಸರು ಪ್ರವೇಶಿಸಿ, ದೀಪ್ಕೆ ಸೇರಿದಂತೆ ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ವಿಮಾನದೊಳಗೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೀಫ್ಕೆ, ಸೌರವ್ ಹಾಗೂ ರಾಂಕಾ ಅವರು ಮುಂಬೈಗೆ ತೆರಳಿದ್ದರು.ಶುಕ್ರವಾರ ಮುಂಬೈನಲ್ಲೇ ಉಳಿದು ಕೊಂಡು ಇಂದು ಬೆಳಿಗ್ಗೆ ದೆಹಲಿಗೆ ವಿಮಾನದಲ್ಲಿ ಪ್ರಯಾಣ ಬೆಳಸಿದ್ದರು.ವಿಮಾನ ದೆಹಲಿಗೆ ಬರುತ್ತಿದ್ದಂತೆ ಇವರೆನೆಲ್ಲಾ ಪೊಲೀಸರು ವಶಕ್ಕೆ ತೆಗೆದುಕೊಂಡು ಗುಪ್ತ ಸ್ಥಳಕ್ಕೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ರಾಜಧಾನಿಯಲ್ಲಿ ರಾತ್ರೋರಾತ್ರಿ ಕನಿಷ್ಠ ೧,೦೦೦ ಜನರನ್ನು ವಶಕ್ಕೆ ಪಡೆಯಲಾಗಿದೆ.ಪ್ರತಿಭಟನೆ ವೇಳೆ ಅಶಾಂತಿ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಗುರುತಿಸಲಾದ ವ್ಯಕ್ತಿಗಳ ವಿರುದ್ಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ವಶಕ್ಕೆ ಪಡೆದವರನ್ನು ದೆಹಲಿಯ ವಿವಿಧ ಜಿಲ್ಲೆಗಳಲ್ಲಿ ಗುರುತಿಸಲಾದ ೧೩ ಪ್ರಮುಖ ತಾತ್ಕಾಲಿಕ ಕೇಂದ್ರಗಳಿಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ.
ಶಾಹೀನ್ ಬಾಗ್, ಪೂರ್ವ ದೆಹಲಿ ಭಾಗಗಳಲ್ಲಿ ಕಾರ್ಯಾಚರಣೆ:
ಮಧ್ಯರಾತ್ರಿ ೧೨.೩೦ರ ವೇಳೆಗೆ ದಕ್ಷಿಣ ಪೂರ್ವ ದೆಹಲಿಯ ಶಾಹೀನ್ ಬಾಗ್ ಸೇರಿದಂತೆ ವಿವಿಧ ಪ್ರದೇಶಗಳಿಂದ ಸುಮಾರು ೨೫೦ ಜನರನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಶಹದಾರಾ ಮತ್ತು ಪೂರ್ವ ದೆಹಲಿ ಜಿಲ್ಲೆಗಳಿಂದ ೧೦೦ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಜಂತರ್ ಮಂತರ್ ತಲುಪುವುದನ್ನು ತಡೆಯಲು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.ಜನಪಥ್ ವೃತ್ತ ಮತ್ತು ಸಂಸತ್ ಮಾರ್ಗದ ಬಳಿ ಪ್ರತಿಭಟನೆಗೆ ಬಂದ ಕೆಲವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.ದಕ್ಷಿಣ ದೆಹಲಿಯ ಮೆಹ್ರೌಲಿ ಗುರುಗ್ರಾಮ ರಸ್ತೆಯ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆಯನ್ನೂ ತೀವ್ರಗೊಳಿಸಲಾಗಿದೆ.
೩೦ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ
ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ೩೦,೦೦೦ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ರಾಜಧಾನಿಯ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ವಿವಿಧ ಜಿಲ್ಲೆಗಳ ಸಂಪರ್ಕ ರಸ್ತೆಗಳಲ್ಲಿ ಹೆಚ್ಚುವರಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ನವದೆಹಲಿ ಪ್ರದೇಶಕ್ಕೆ ಪ್ರವೇಶಿಸುವ ರಸ್ತೆಗಳಲ್ಲಿ ಹಲವು ಹಂತಗಳ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.ಅಶೋಕ ರಸ್ತೆ ಮತ್ತು ಟಾಲ್‌ಸ್ಟಾಯ್ ರಸ್ತೆಯಲ್ಲೂ ಭದ್ರತೆ ಹೆಚ್ಚಿಸಲಾಗಿದ್ದು,ಅರೆಸೇನಾ ಪಡೆಗಳ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಭದ್ರತಾ ವ್ಯವಸ್ಥೆಯನ್ನು ನಿರಂತರವಾಗಿ ಮುಂದುವರಿಸಲು ವಿವಿಧ ಪಾಳಿಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಧ್ರುವ್ ರಾಠಿ ಪೊಲೀಶ್ ವಶಕ್ಕೆ:
ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್ ಧ್ರುವ್ ರಾಠಿ ಅವರನ್ನು ಗುರುಗ್ರಾಮದ ಸೆಕ್ಟರ್ ೫೬ರಲ್ಲಿರುವ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇಂದು ಬೆಳಗ್ಗೆ ಸುಮಾರು ೮ ಗಂಟೆಗೆ ಪೊಲೀಸ್ ಸಿಬ್ಬಂದಿ ಅವರ ಮನೆಗೆ ತೆರಳಿ ಈ ಕ್ರಮ ಕೈಗೊಂಡಿದ್ದಾರೆ. ಆದರೆ, ಅವರನ್ನು ವಶಕ್ಕೆ ಪಡೆದಿರುವುದಕ್ಕೆ ನಿಖರ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ.
ಧ್ರುವ್ ರಾಠಿ ದೆಹಲಿಯಲ್ಲಿ ನಡೆಯಲಿದ್ದ ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಜನರು ಜಂತರ್ ಮಂತರ್‌ಗೆ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ.
ಪ್ರತಿಭಟನೆಗೆ ಪೊಲೀಸರ ನಕಾರ
ಸುರಕ್ಷತೆ ಮತ್ತು ಅಗತ್ಯ ಪ್ರಕ್ರಿಯೆಗಳನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರು. ಆದರೂ ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜಧಾನಿಯ ಪ್ರಮುಖ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ವಶಕ್ಕೆ ಪಡೆದವರನ್ನು ಇರಿಸಲು ವಿವಿಧ ಜಿಲ್ಲೆಗಳಲ್ಲಿ ತಾತ್ಕಾಲಿಕ ಕೇಂದ್ರಗಳನ್ನು ಗುರುತಿಸಲಾಗಿದ್ದು, ಪರಿಸ್ಥಿತಿಯ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ.
ಅಪ್ಸರಾ ಗಡಿಯಲ್ಲಿ ಕಟ್ಟೆಚ್ಚರ:
ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಪ್ಸರಾ ಗಡಿಯಲ್ಲಿ ಭದ್ರತಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಪರಿಸ್ಥಿತಿಯ ಮೇಲೆ ನಿಗಾ ಇರಿಸಲು ಡ್ರೋನ್‌ಗಳನ್ನೂ ಬಳಸಲಾಗುತ್ತಿದೆ.
ಶಹದಾರಾ ಡಿಸಿಪಿ ರಾಜೇಂದ್ರ ಪ್ರಸಾದ್ ಮೀನಾ ಮಾತನಾಡಿ, ಗಡಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ವಾಣಿಜ್ಯ ವಾಹನಗಳಿಗೆ ನಿಗದಿತ ಸಮಯದಲ್ಲಿ ಮಾತ್ರ ಸಂಚರಿಸಲು ಅವಕಾಶ ನೀಡಲಾಗುತ್ತಿದ್ದು, ಸಂಪೂರ್ಣ ತಪಾಸಣೆಯ ಬಳಿಕವೇ ಅವುಗಳನ್ನು ಬಿಡಲಾಗುತ್ತಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ ಎಂದಿದ್ದಾರೆ.
ಪ್ರತಿಭಟನಾ ಸ್ಥಳದತ್ತ ತೆರಳದಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡುತ್ತಿದ್ದಾರೆ. ಸೂಚನೆ ಉಲ್ಲಂಘಿಸಿ ತೆರಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.ದೆಹಲಿ ಪೊಲೀಸರು ಉತ್ತರ ಪ್ರದೇಶದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ್ದಾರೆ. ಉತ್ತರ ಪ್ರದೇಶದ ಕಡೆಯಲ್ಲಿಯೂ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ವಾಹನಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಡ್ರೋನ್‌ಗಳು ಹಾಗೂ ಶಾಶ್ವತವಾಗಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ವಿಡಿಯೊ ಮತ್ತು ಛಾಯಾಚಿತ್ರಗಳನ್ನು ದಾಖಲಿಸುತ್ತಿದ್ದು, ಗಡಿಯಲ್ಲಿ ನಿಯೋಜಿಸಲಾದ ಬಹುತೇಕ ಸಿಬ್ಬಂದಿಗೆ ಬಾಡಿ ವಾರ್ನ್ ಕ್ಯಾಮೆರಾಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಾಯಕರ ಬಿಡುಗಡೆಗೆ ಸಿಜೆಪಿ ಆಗ್ರಹ
ಸಿಜೆಪಿ ನಾಯಕರ ಬಂಧನವನ್ನು ಖಂಡಿಸಿರುವ ಸಿಜೆಪಿ ಪ್ರತಿಭಟನಾ ಸ್ಥಳಕ್ಕೆ ತಲುಪುವುದನ್ನು ತಡೆಯಲು ಪೂರ್ವ ಯೋಜಿತ ಕ್ರಮದ ಭಾಗವಾಗಿ ನಾಯಕರನ್ನು ಬಂಧಿಸಲಾಗಿದೆ.ನಾಯಕರುಗಳನ್ನು ಬೇಷರಾತ್ ಆಗಿ ಬಿಡುಗಡೆ ಮಾಡಬೇಕು ಎಂದು ಸಿಜೆಪಿ ಆಗ್ರಹಿಸಿದೆ.ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಸಿಜೆಪಿ ಈ ಬಂಧನ ಕ್ರಮಕ್ಕೆ ಮುಕ್ತ ಸಂಚಾರ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ದೂರಿದೆ.
ಬಂಧನದ ಬಗ್ಗೆ ಭಯ ಇಲ್ಲ : ದೀಫ್ಕೆ
ಬಂಧನದ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿರುವ ದೀಪ್ಕೆ ನಮ್ಮನ್ನು ಬಂಧಿಸಿ ನಮಗೆ ಭಯವಿಲ್ಲ.ಪ್ರಯಾಣಿಕರು ವಿಮಾನದಿಂದ ಕೆಳಗಿಳಿಯುವವರೆಗೂ ಕಾಯಬಹುದಿತ್ತು.ಆದರೆ ವಿಮಾನದೊಳಗೆ ಬಂದು ನಮ್ಮನ್ನು ಬಂಧಿಸಿದ್ದಾರೆಂದು ಬಂಧನದ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ನಾವು ಎಲ್ಲದಕ್ಕೂ ಸಿದ್ದರಿದ್ದೇವೆ.ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಹಾಗೂ ಈ ದೇಶದ ಪ್ರಜಾಪ್ರಭುತ್ವ ವನ್ನು ಉಳಿಸಲು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.

























