
ಮಂಡ್ಯ,ಸೆ.೨೨-ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್( ಪಿಎಸ್ಐ)ಗೆ ಕಪಾಳಮೋಕ್ಷ ಮಾಡಿದ ಪ್ರಕರಣದ ಸಂಬಂಧ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ಗೌಡ ಅವರ ಪುತ್ರಿ ಐಶ್ವರ್ಯ ಗೌಡ ಅವರು ಬಹಿರಂಗ ಕ್ಷಮೆಯಾಚಿಸಿದ್ದಾರೆ.
ಸುರೇಶ್ಗೌಡ ಅವರ ಪುತ್ರಿ ಐಶ್ವರ್ಯ ಗೌಡ ಅವರು ಪಿಎಸ್ಐ ಸವಿತಾ ಪಾಟೀಲ್ ಅವರಿಗೆ ವೀಡಿಯೋ ಮೂಲಕ ಬೇಷರತ್ ಕ್ಷಮೆ ಕೋರಿದ್ದಾರೆ.
ಕಳೆದ ಆಗಸ್ಟ್ ೧೨ರಂದು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಐಶ್ವರ್ಯ ಗೌಡ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡಮ್ಮ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ದೇವರ ದರ್ಶನಕ್ಕೆ ಗರ್ಭಗುಡಿಗೆ ತೆರಳುವ ವಿಚಾರದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್ಐ ಸವಿತಾ ಪಾಟೀಲ್ ಅವರೊಂದಿಗೆ ಮಾತಿನ ಚಕಮಕಿ ನಡೆದಿತ್ತು.
ಮಾತಿನ ಚಕಮಕಿ ವೇಳೆ ಐಶ್ವರ್ಯ ಅವರು ಪಿಎಸ್ಐ ಸವಿತಾ ಪಾಟೀಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದರು ಎನ್ನಲಾಗಿದ್ದು, ಘಟನೆ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸುವಂತೆ ಕೋರ್ಟ್ ತಾಕೀತು ಮಾಡಿದ್ದ ಹಿನ್ನೆಲೆಯಲ್ಲಿ ಇದೀಗ ಐಶ್ವರ್ಯ ಗೌಡ ಅವರು ವೀಡಿಯೋ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಐಶ್ವರ್ಯ ಹೇಳಿದ್ದೇನು:
“ಆಗಸ್ಟ್ ೧೨ರಂದು ಭೀಮನ ಅಮಾವಾಸ್ಯೆಯಂದು ನಾನು ಮತ್ತು ನನ್ನ ಇಬ್ಬರು ಮಕ್ಕಳು ಪಾಂಡವಪುರದ ಉಕ್ಕಡಮ್ಮ ದೇವಸ್ಥಾನಕ್ಕೆ ತೆರಳಿದ್ದೆವು. ಅಂದು ದೇಗುಲದಲ್ಲಿ ಹೆಚ್ಚಿನ ಜನಸಂದಣಿ ಇದ್ದಿದ್ದರಿಂದ ಹಾಗೂ ನನ್ನ ಮಕ್ಕಳಿಗೆ ಅಮ್ಮ ಆಗಿದ್ದ ಕಾರಣ ದೇವರ ದರ್ಶನ ಪಡೆಯುವ ಸಂದರ್ಭದಲ್ಲಿ ನನ್ನ ಮತ್ತು ಮಹಿಳಾ ಪಿಎಸ್ಐ ನಡುವೆ ಸಣ್ಣ ಮಾತಿನ ಚಕಮಕಿ ನಡೆಯಿತು.
ಉದ್ವೇಗದಿಂದ ಅಹಿತಕರ ಘಟನೆ ನಡೆದಿದೆ. ಈ ಘಟನೆ ನಡೆಯಬಾರದಿತ್ತು. ಈ ಘಟನೆ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಕರ್ತವ್ಯದಲ್ಲಿದ್ದ ಪಿಎಸ್ಐ ಸವಿತಾ ಪಾಟೀಲ್ ಅವರಿಗೆ ಇದರಿಂದ ನೋವಾಗಿದ್ದರೆ, ನಾನು ಬೇಷರತ್ ಆಗಿ ಕ್ಷಮೆಯಾಚಿಸುತ್ತೇನೆ” ಎಂದು ಐಶ್ವರ್ಯ ಗೌಡ ಹೇಳಿದ್ದಾರೆ.


























