
ಸಂಜೆವಾಣಿ ನ್ಯೂಸ್
ಮೈಸೂರು.ಸೆ.06: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವಿಭಾಗ ಮತ್ತು ಮೈಸೂರು ಜಿಲ್ಲೆ ವತಿಯಿಂದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬಹುಮುಖಿ ಶಿಲ್ಪ ಖ್ಯಾತಿಯ ಎ. ಕಿರಣ್ ಸುಬ್ಬಯ್ಯ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿ ತಮ್ಮ ಕಲಾ ಅನುಭವ ಹಂಚಿಕೊಂಡರು.
ಯಾರು ಈ ಕಿರಣ್ ಸುಬ್ಬಯ್ಯ?
ಮೂಲತಃ ಮಡಿಕೇರಿ ಮೂಲದವರಾದ ಕಿರಣ್ ಸುಬ್ಬಯ್ಯ, ಹುಟ್ಟಿ ಬೆಳೆದಿದ್ದು, ಓದಿದ್ದು ಮೈಸೂರಿನಲ್ಲೇ. ಕಾಲೇಜು ದಿನಗಳಲ್ಲಿ ಬೇಲೂರು, ಹಳೇಬೀಡು ದೇವಾಲಯಗಳ ಕೆತ್ತನೆಗಳಿಂದ ಪ್ರಭಾವಿತರಾಗಿ ಶಿಲ್ಪಿಯಾಗುವ ಕನಸು ಕಂಡವರು. ಆರಂಭದಲ್ಲಿ ಪ್ರಕೃತಿ ಛಾಯಾಚಿತ್ರಗಳು, ಪತ್ರಿಕೆಗಳಲ್ಲಿನ ಚಿತ್ರಗಳೇ ಅವರಿಗೆ ಗುರುಗಳಾಗಿದ್ದವು.
ನಂತರ ಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆ (ಈಗಿನ ಕಾವಾ) ಯಲ್ಲಿ ಶಿಲ್ಪರಚನೆಯ ಸಾಧನಗಳನ್ನು ಕರಗತ ಮಾಡಿಕೊಂಡರು. ಕಾರಣಾಂತರಗಳಿಂದ ಪದವಿ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದರೂ ಛಲ ಬಿಡದೆ ಕಲಾ ಪಯಣ ಮುಂದುವರಿಸಿದರು. ಬಂದ ಉದ್ಯೋಗ ತೊರೆದು ಕಲೆಯನ್ನೇ ಉಸಿರಾಗಿಸಿಕೊಂಡ ಇವರು ಇದುವರೆಗೆ 500ಕ್ಕೂ ಹೆಚ್ಚು ಬಹುಮುಖಿ ಶಿಲ್ಪಕಲಾಕೃತಿಗಳನ್ನು ರಚಿಸಿದ್ದಾರೆ.
ಇವರ 135 ಹೆಡೆಗಳ ಆದಿಶೇಷ ಶಿಲ್ಪವು ಅತ್ಯಂತ ಉತ್ಕೃಷ್ಟ ಕಲಾಕೃತಿಯಾಗಿದೆ. ತಮ್ಮ ಮನೆಯ ಒಂದು ಭಾಗವನ್ನೇ “ಕೆ.ಎಸ್. ಮ್ಯೂಸಿಯಂ ಆಫ್ ಸ್ಕಲ್ಪ್ಚರ್” ಆಗಿ ಪರಿವರ್ತಿಸಿ ಯುವ ಕಲಾವಿದರಿಗೆ ಮಾದರಿಯಾಗಿದ್ದಾರೆ.
ಬಹುಮುಖಿ ಶಿಲ್ಪದ ವಿಶೇಷತೆ ಏನು?
ಇವರ ಕೆತ್ತನೆ ಒಂದು ಮುಖವಲ್ಲ, ನಾಲ್ಕು ದಿಕ್ಕಿನಿಂದ ನೋಡಿದರೂ ನಾಲ್ಕು ವಿಭಿನ್ನ ಮುಖಗಳು ಕಾಣಿಸುತ್ತವೆ. ಇದೇ ಇವರ ವಿಶೇಷತೆ.
ಇವರ ಕಲಾ ಸೇವೆಯನ್ನು ಗುರುತಿಸಿ 2011ರಲ್ಲಿ ಬೆಂಗಳೂರಿನ ಒಂಓPಊಔ ಆರ್ಟ್ & ಕ್ರಾಫ್ಟ್ ಪ್ರದರ್ಶನದಲ್ಲಿ “ಬಹುಮುಖಿ ಶಿಲ್ಪಗಳ ರಾಜ” ಮತ್ತು ಅಂತರಾಷ್ಟ್ರೀಯ ಗ್ರಾನೈಟ್ ಶಿಲಾಮೇಳದಲ್ಲಿ “ಬದುಕಿರುವ ಐತಿಹ್ಯ ಪುರುಷ” ಎಂದು ಸನ್ಮಾನಿಸಲಾಗಿದೆ. ಕರ್ನಾಟಕ ಸರ್ಕಾರದ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಡೀನ್ ದೇವರಾಜು ಎ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ, ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್, ಆಡಳಿತಾಧಿಕಾರಿ ಜಯಶಂಕರ್ ಉಪಸ್ಥಿತರಿದ್ದರು.


























