Home ಜಿಲ್ಲೆ ಮೈಸೂರು ದಸರಾ ಗಜಪಡೆಗೆ ೩ನೇ ಹಂತದ ತಾಲೀಮು ಆರಂಭ

ದಸರಾ ಗಜಪಡೆಗೆ ೩ನೇ ಹಂತದ ತಾಲೀಮು ಆರಂಭ

ಮೈಸೂರು, ಸೆ.೨೬: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-೨೦೨೬ ರ ಗಜಪಡೆಗೆ ಮೂರನೇ ಹಂತದ ಮರದ ಅಂಬಾರಿ ತಾಲೀಮು ಆರಂಭವಾಗಿದೆ.
ಶುಕ್ರವಾರದಿಂದ ಆನೆಗಳಿಗೆ ಮರದ ಅಂಬಾರಿ ಹೊರಿಸಿ ತಾಲೀಮು ನೀಡಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಮೊದಲ ದಿನ ಮಹೇಂದ್ರ ಆನೆಗೆ ಮರದ ಅಂಬಾರಿ ಕಟ್ಟಿ ತಾಲೀಮು ನೀಡಲು ಸಿದ್ಧತೆ ಮಾಡಲಾಗಿತ್ತು.
ಆದರೆ ಮರದ ಅಂಬಾರಿಯ ಕೆಳಭಾಗದ ಹಾಸಿಗೆ ಮತ್ತು ಹತ್ತಿಯ ಹಗ್ಗಗಳು ಒದ್ದೆಯಾಗಿ ಭಾರವಾಗಿರುವ ಕಾರಣ, ಆನೆಗೆ ಅಸೌಕರ್ಯ ಮತ್ತು ಬಿಗಿತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಆನೆಯ ಆರಾಮ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇಂದಿನ ಮರದ ಅಂಬಾರಿ ತಾಲೀಮನ್ನು ಮುಂದೂಡಲಾಗಿದೆ.
ತಾಲೀಮಿನ ಪರಿಷ್ಕೃತ ದಿನಾಂಕ ಮತ್ತು ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಮಧ್ಯಾಹ್ನ ೨.೪೫ರ ಸುಮಾರಿಗೆ ಮಹೇಂದ್ರ ಆನೆಯ ಬೆನ್ನಿಗೆ ಮರದ ಅಂಬಾರಿ ಇರಿಸಿ ಸುಮಾರು ೨೦ ನಿಮಿಷಗಳ ಕಾಲ ಅಂಬಾರಿಯನ್ನು ಆನೆಯ ಬೆನ್ನಿಗೆ ಕಟ್ಟಲಾಯಿತು. ನಂತರ ತಾಲೀಮಿಗೆ ಅವಕಾಶ ಕಲ್ಪಿಸಲಾಯಿತು.
ವರುಣನ ಸಿಂಚನ: ಮಹೇಂದ್ರನಿಗೆ ಮರದ ಅಂಬಾರಿ ಕಟ್ಟಿ, ತಾಲೀಮಿಗೆ ಚಾಲನೆ ಸಿಗುತ್ತಿದ್ದಂತೆ ವರುಣನ ಸಿಂಚನವಾಯಿತು. ಮಹೇಂದ್ರ ಮತ್ತು ಎಲ್ಲಾ ಆನೆಗಳು ಅರಮನೆಯ ಬಲರಾಮ ದ್ವಾರಕ್ಕೆ ಬರುತ್ತಿದ್ದಂತೆ ಮಳೆ ಜೋರಾದ ಹಿನ್ನೆಲೆ ಎಲ್ಲಾ ಆನೆಗಳನ್ನು ಹಿಂದಕ್ಕೆ ಕರೆತಂದು ಮಹೇಂದ್ರನ ಮೇಲಿದ್ದ ಅಂಬಾರಿ ಬಿಚ್ಚಿಡಲಾಯಿತು. ಬಳಿಕ ಆಯುರ್ವೇದ ವೃತ್ತದವರೆಗೆ ಒಣ (ನಡಿಗೆ) ತಾಲೀಮು ನಡೆಸಲಾಯಿತು.
೧ ಸಾವಿರ ಕೆ.ಜಿ. ತೂಕ: ೨೫೦ ಕೆ.ಜಿ. ತೂಕವಿರುವ ಮರದ ಅಂಬಾರಿ, ಗಾದಿ ಮತ್ತು ನಮ್ದಾ ೨೫೦ ಕೆ.ಜಿ ಹಾಗೂ ೫೦೦ ಕೆ.ಜಿ ಮರಳಿನ ಮೂಟೆಗಳು ಸೇರಿ ಒಂದು ಸಾವಿರ ಕೆ.ಜಿ. ಭಾರವನ್ನು ಹೊರವ ತಾಲೀಮು ಇದಾಗಿದ್ದು, ಮೊದಲ ದಿನ ಮಹೇಂದ್ರನಿಗೆ ಅವಕಾಶ ನೀಡಲಾಗಿತ್ತು. ಮಳೆಯಿಂದ ನಮ್ದಾ, ಗಾದಿ ಒದ್ದೆಯಾಗಿ ಭಾರ ಹೆಚ್ಚಾಗುವುದರಿಂದ ಆನೆಗಳಿಗೆ ತೊಂದರೆಯಾಗಬಾರದರು ಎಂಬ ಕಾರಣಕ್ಕೆ ತಾಲೀಮು ಮೊಟಕುಗೊಳಿಸಲಾಯಿತು. ಮತ್ತೊಂದು ದಿನ ತಾಲೀಮು ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭ ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ, ಆರ್ ಎಫ್‌ಒ ಯಶ್ಮಾ ಮಾಚಮ್ಮ ಸೇರಿದಂತೆ ಇತರರು ಇದ್ದರು.

ರೇಸ್‌ನಲ್ಲಿವೆ ೫ ಆನೆಗಳು
ಗಜಪಡೆಗೆ ಇಂದಿನಿಂದ ೩ನೇ ಹಂತದ ತಾಲೀಮು ಪ್ರಾರಂಭಿಸಿದ್ದು, ಮಹೇಂದ್ರನಿಗೆ ಮರದ ಅಂಬಾರಿ ಕಟ್ಟಲಾಗಿದೆ. ಮಳೆಯ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಚಿನ್ನದ ಅಂಬಾರಿ ಹೊರುವ ರೇಸ್‌ನಲ್ಲಿ ೫ ಆನೆಗಳಿದ್ದು, ಪ್ರಶಾಂತ, ಧನಂಜಯ, ಮಹೇಂದ್ರ, ಸುಗ್ರೀವ, ಏಕಲವ್ಯ ಆನೆಗಳಿಗೂ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸುತ್ತೇವೆ. ಸಧ್ಯಕ್ಕೆ ಎಲ್ಲಾ ಆನೆಗಳ ಆರೋಗ್ಯ ಚನ್ನಾಗಿದೆ. ಅಭಿಮನ್ಯುವನ್ನು ಅ.೫ರಂದು ಮೈಸೂರಿಗೆ ಕರೆತರಲಾಗುವುದು ಎಂದು ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ತಿಳಿಸಿದರು.
ಮಸ್ತ್‌ನಲ್ಲಿ ಧನಂಜಯ
ಅಭಿಮನ್ಯು ಆನೆ ನಿವೃತ್ತಿಯಿಂದ ತೆರವಾಗಿರುವ ಅಂಬಾರಿ ಆನೆಯ ಜಾಗಕ್ಕೆ ಪೈಪೊ?ಟಿ ನೀಡುತ್ತಿರುವ ದುಬಾರೆ ಸಾಕಾನೆ ಶಿಬಿರದ ಧನಂಜಯ ಮರದ ಅಂಬಾರಿ ತಾಲೀಮಿನಿಂದ ದೂರ ಉಳಿದಿದ್ದ. ಧನಂಜಯನಿಗೆ ಮಸ್ತಿ (ಮದ) ಬಂದಿರುವ ಹಿನ್ನೆಲೆ ತಾಲೀಮಿನಿಂದ ಹೊರಗಿಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಧನಂಜಯನನ್ನು ಬಿಡಾರದಲ್ಲಿಯೇ ಪ್ರತ್ಯೇಕವಾಗಿರಿಸಿ ತಂಪಾದ ಆಹಾರ ನೀಡುವ ಮೂಲಕ ಅದರ ಆರೈಕೆಯಲ್ಲಿ ತೊಡಗಿದ್ದರು.