
ಬೆಂಗಳೂರು,ಆ. ೧: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಕೆಪಿಎಸ್‌ಸಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ಇಂದು ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮತ್ತು ಕೆಪಿಎಸ್‌ಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಜೆಡಿಎಸ್ ಮಾಜಿ ಎಂಎಲ್‌ಸಿ ಹಾಗೂ ಜಿಬಿಎ ಅಧ್ಯಕ್ಷ ರಮೇಶ್ ಗೌಡ ಮತ್ತು ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಗೆ ಮುತ್ತಿಗೆ ಯತ್ನ: ಧರಣಿನಿರತರು ವಶಕ್ಕೆ
ಕೆಪಿಸಿಸಿ ಕಚೇರಿ ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಬ್ಯಾರಿಗೇಡ್‌ಗಳನ್ನು ಹಾಕಿ ಪ್ರತಿಭಟನಾಕಾರರನ್ನು ತಡೆಯಲಾಯಿತು. ಈ ವೇಳೆ ಪೊಲೀಸರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯಿತು. ಬ್ಯಾರಿಗೇಡ್‌ಗಳನ್ನು ನೂಕಿ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹಲವು ನಾಯಕರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಕೆಪಿಎಸ್‌ಸಿ ಕಚೇರಿ ಬಳಿ ಶರವಣ ಧರಣಿ
ಮತ್ತೊಂದೆಡೆ, ಜೆಡಿಎಸ್ ಕಾನೂನು ಘಟಕದ ನೇತೃತ್ವದಲ್ಲಿ ಕೆಪಿಎಸ್‌ಸಿ ಕಚೇರಿಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಲಾಗಿತ್ತು. ಸ್ಥಳಕ್ಕಾಗಮಿಸಿದ ವಿಧಾನ ಪರಿಷತ್ ಸದಸ್ಯ ಶರವಣ ಅವರು ಪ್ರತಿಭಟನೆಗೆ ಅವಕಾಶ ನೀಡುವಂತೆ ಪೊಲೀಸರನ್ನು ಒತ್ತಾಯಿಸಿದರು. ಆದರೆ ಭದ್ರತೆಯ ಹಿತದೃಷ್ಟಿಯಿಂದ ಅನುಮತಿ ನಿರಾಕರಿಸಿದಾಗ ಪೊಲೀಸರೊಂದಿಗೆ ಜಟಾಪಟಿ ನಡೆಯಿತು. ಬಳಿಕ ರಸ್ತೆ ಮಧ್ಯದಲ್ಲೇ ಕುಳಿತು ಧರಣಿ ನಡೆಸಿದ ಶರವಣ ಅವರನ್ನು ಪೊಲೀಸರು ಜೀಪ್‌ನಲ್ಲಿ ಕರೆದೊಯ್ದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಹುದ್ದೆ ಹಾಗೂ ಕೆಪಿಎಸ್‌ಸಿ ವಿವಿಧ ನೇಮಕಾತಿಗಳಲ್ಲಿ ನಡೆದಿರುವ ಆಕ್ರಮಗಳ ವಿರುದ್ಧ ನಡೆದ ಈ ಪ್ರತಿಭಟನೆಯಲ್ಲಿ ರಮೇಶ್ ಗೌಡ, ಅಖಂಡ ಶ್ರೀನಿವಾಸ್ ಮೂರ್ತಿ, ಒಐಅ ಶರವಣ ಇನ್ನಿತರ ಮುಖಂಡರು ಭಾಗವಹಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಕೆಪಿಸಿಸಿ ಹಾಗೂ ಕೆಪಿಎಸ್‌ಸಿ ಕಚೇರಿ ಬಳಿ ಬಿಗಿ ಭದ್ರತೆ, ಪ್ರತಿಭಟನಾಕಾರರ ಬಂಧನ.
























